ಬೆಂಗಳೂರು: ಬಹುಕೋಟಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನ ನಟಿ ರನ್ಯಾ ರಾವ್ ಗೆ ಕಸ್ಟಮ್ಸ್ ಇಲಾಖೆ ಬರೋಬ್ಬರಿ 89.91 ಕೋಟಿ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು ಹೊರಡಿಸಿರುವ 399 ಪುಟಗಳ ಸುದೀರ್ಘ ಆದೇಶದಲ್ಲಿ ನಟಿ ರನ್ಯಾ ರಾವ್ ಅಂತರರಾಷ್ಟ್ರೀಯ ಮಟ್ಟದ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಲಾಗಿದೆ.. ದಂಡದ ಮೊತ್ತ ಹಾಗೂ ಆದೇಶದ ಅಧಿಕೃತ ಪ್ರತಿಯನ್ನು ಕಸ್ಟಮ್ಸ್ ಇಲಾಖೆ ರನ್ಯಾ ರಾವ್ಗೆ ರಾವಾನಿಸಿದೆ ಎಂದು ತಿಳಿದುಬಂದಿದೆ.
ಗೋಲ್ಡ್ ಸ್ಮಗ್ಲಿಂಗ್ ದಂಧೆ ಮಾರ್ಚ್ 7, 2024 ಮತ್ತು ಫೆಬ್ರವರಿ 2, 2025ರ ನಡುವಿನ ಕೇವಲ ಒಂದು ವರ್ಷದ ಅವಧಿಯಲ್ಲಿ ನಡೆದಿದೆ. ದುಬೈನಿಂದ ಭಾರತಕ್ಕೆ ಬರೋಬ್ಬರಿ 113 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ನಡೆಸಿದ ನಿಖೆಯಲ್ಲಿ ಬಹಿರಂಗವಾಗಿದೆ.
ನಟಿ ರನ್ಯಾ ರಾವ್ ತನ್ನ ಸಹ ಆರೋಪಿಗಳಾದ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ಕಳ್ಳಸಾಗಣೆ ವಹಿವಾಟು ನಡೆಸಿದ್ದು ಬಯಲಾಗಿದೆ. ಈ ಹಿಂದೆ ಡಿಆರ್ಐ ಅಧಿಕಾರಿಗಳು ರನ್ಯಾರಾವ್ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 2.5 ಕೋಟಿ ರೂ. ನಗದು ಮತ್ತು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು.
ರನ್ಯಾ ರಾವ್ ಮನೆಯಲ್ಲಿ ನಡೆದ ಶೋಧದ ವೇಳೆ ಪಚ್ಚೆ ಕುಂದನ್ ಮೋಪು ನೆಕ್ಲೇಸ್ (2 ಕ್ಯಾರೆಟ್) – 1, ವಜ್ರ ಹಾಗೂ ಕೆಂಪು ಹರಳುಗಳ ವಂಕಿ (1.2 ಕ್ಯಾರೆಟ್), ಪೋಲ್ಕಿ ಕೆಂಪು ಜುಮುಕಿ – 1 ಜೋಡಿ
ಮುತ್ತಿನ ಮಾಟಿಲ್ (ಕಿವಿ ಸರ) – 1 ಜೋಡಿ, ಹಸಿರು ಹರಳಿನ ಬಳೆ – 1, ಕುಂದನ್ ನೆಕ್ಲೇಸ್ ಸೆಟ್, ಕುಂದನ್ ಹಾರ – 1, ವಜ್ರ ಮತ್ತು ಪಚ್ಚೆ ಕಿವಿಯೋಲೆ/ಟಾಪ್ಸ್ (2 ಕ್ಯಾರೆಟ್), ಮುತ್ತಿನ ನೆಕ್ಲೇಸ್/ಸರ (2 ಕ್ಯಾರೆಟ್), ಪದಕ (ಪೆಂಡೆಂಟ್) – 1, ಕರಿಮಣಿ ಸರ ಪತ್ತೆಯಾಗಿದ್ದವು.
ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ 2025ರ ಮಾರ್ಚ್ 2ರಂದು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ‘ನಟಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು. ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ ತಪಾಸಣೆ ನಡೆಸಿದಾಗ ಸುಮಾರು 12 ಕೋಟಿ ರೂಪಾಯಿ ಮೌಲ್ಯದ 14.8 ಕೆಜಿ ವಿದೇಶಿ ಮೂಲದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ಆರ್ಥಿಕ ಅಪರಾಧಗಳ ನ್ಯಾಯಾಲಯವು ಈ ಪ್ರಕರಣದಲ್ಲಿ ಮೇ 2025ರಲ್ಲಿ ರನ್ಯಾಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿತ್ತಾದರೂ, ಕೇಂದ್ರ ಸರ್ಕಾರವು ರನ್ಯಾ ಮೇಲೆ ಕಠಿಣವಾದ ಕಾಫಿಪೋಸಾಕಾಯ್ದೆಯನ್ನು ಜಾರಿಗೊಳಿಸಿದ್ದರಿಂದ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಗದೇ ವರ್ಷಗಳ ಕಾಲ ಪರದಾಡಿದ್ದರು.

