ಹಾಸನ : ಹೊಸ ತಲೆಮಾರಿನ ಭವಿಷ್ಯ ಹಾಗೂ ಸಮಾಜದ ಒಳಿತಿಗಾಗಿ ರಾಜ್ಯದ ಎಲ್ಲ ಮಠಗಳು ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತಿಯನ್ನು ಬಯಸುತ್ತಾ ಮಹತ್ವದ ಸೇವೆ ಸಲ್ಲಿಸುತ್ತಿವೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಧವಲತೀರ್ಥಂ ಚೈತ್ಯದಲ್ಲಿ ಜೆಎನ್‌ಎಂ ನರ್ಸಿಂಗ್, ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಆರೋಗ್ಯಕ್ಕೆ ಪೂರಕವಾಗಿ ಅತ್ಯಂತ ಅವಶ್ಯಕವಾಗಿರುವ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುತ್ತಿದ್ದು, ಇಂತಹ ಕಾರ್ಯಗಳನ್ನು ಸಂಘ-ಸಂಸ್ಥೆಗಳು ಕೈಗೊಳ್ಳುವ ಮೂಲಕ ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡುತ್ತಿವೆ ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿಯೂ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ಹೆಚ್ಚಿನ ಪ್ರಸ್ತುತತೆ ಇದ್ದು, ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳಿವೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲದಲ್ಲಿಯೂ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ಹೆಚ್ಚಿನ ಪ್ರಸ್ತುತತೆ ಇದೆ. ಈ ಕ್ಷೇತ್ರಗಳಲ್ಲಿ ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳಿದ್ದು, ಆರೋಗ್ಯ ಸೇವೆಯಲ್ಲಿ ನರ್ಸಿಂಗ್ ವೃತ್ತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಶ್ರವಣಬೆಳಗೊಳದ ಸ್ವಾಮೀಜಿಯವರು ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕೋರ್ಸ್‌ಗಳನ್ನು ಆರಂಭಿಸುವ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ದೊರೆಯುವುದರ ಜೊತೆಗೆ, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರದ ಮೇಲಿನ ಜವಾಬ್ದಾರಿಯೂ ಒಂದಷ್ಟು ಕಡಿಮೆಯಾಗುತ್ತದೆ. ಈ ಮೂಲಕ ಸ್ವಾಮೀಜಿಯವರು ಸರ್ಕಾರಕ್ಕೂ ಸಹಕಾರ ನೀಡಿದಂತಾಗಿದೆ ಎಂದರು.
ಎಲ್ಲವೂ ಸರ್ಕಾರದಿಂದಲೇ ಆಗಲಿ ಎಂದು ಭಾವಿಸದೆ ಸಂಘ-ಸಂಸ್ಥೆಗಳ ಮೂಲಕ ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವ ಪೂಜ್ಯರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು, ಸಕಲ ಜೀವಿಗಳಿಗೂ ಸೌಖ್ಯ ಬಯಸುವ ಜೈನ ಧರ್ಮವು ಧಾರ್ಮಿಕ ಸೇವೆಯ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಕ್ಷೇತ್ರ ಶ್ರವಣಬೆಳಗೊಳ ಮಠದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸೇವಾ ಮನೋಭಾವವೇ ನರ್ಸಿಂಗ್ ಕ್ಷೇತ್ರದ ದೊಡ್ಡ ಶಕ್ತಿ ಎಂದು ತಿಳಿಸಿದರು.
ಕರುಣೆ, ಮಾತೃತ್ವದ ಗುಣ ಹಾಗೂ ಸೇವಾ ಮನೋಭಾವ ನರ್ಸಿಂಗ್ ವೃತ್ತಿಯ ಪ್ರಮುಖ ಅಂಶಗಳಾಗಿವೆ. ರೋಗಿಗಳ ಆರೈಕೆ ಮತ್ತು ಆರೋಗ್ಯ ಸೇವೆಯಲ್ಲಿ ನರ್ಸಿಂಗ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಶಾಸಕರಾದ ಸಿ. ಎನ್. ಬಾಲಕೃಷ್ಣ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಂ. ಎ. ಗೋಪಾಲಸ್ವಾಮಿ, ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ ಪರೀಕ್ಷಾ ಮೇಲ್ವಿಚಾರಕರಾದ ಶರತ್ ಬಾಬು ಎಂ.ಎಸ್., ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ ಕುಲಸಚಿವರಾದ ಶ್ರೀಕಾಂತ್ ಪುಲಾರೆ ಮತ್ತಿತರರು ಉಪಸ್ಥಿತರಿದ್ದರು.

