ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಹುಬ್ಬಳ್ಳಿಗೆ ಆಗಮಿಸಿರುವ ರೈತರು, ಕಬ್ಬು ಬೆಳೆಗಾರರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಜೊತೆಗೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಿಸಬೇಕು ಹಾಗೂ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ರೈತ ಹೋರಾಟಗಾರ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬೆಳಗಾವಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಿಂದ ರೈತರು ಭಾಗಿಯಾಗಿದ್ದಾರೆ. ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದೇ ವೇಳೆ ಪ್ರತಿಭಟನಾ ನಿರತ ರೈತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ಕಚೇರಿಗೆ ಮುತ್ತಿಗೆ ಹಾಕಲು ಘೋಷಿಸಿದ್ದರು. ಆದರೆ, ಪೊಲೀಸ್ ಇಲಾಖೆಯಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ನೆಹರು ಮೈದಾನದಲ್ಲಿ ಹೋರಾಟ ನಡೆಸಲು ಯೋಜನೆ ರೂಪಿಸಲಾಗಿತ್ತು. ಆದರೆ ಚೆನ್ನಮ್ಮ ವೃತ್ತದಿಂದ ಪ್ರಹ್ಲಾದ್ ಜೋಶಿ ಅವರ ನಿವಾಸದತ್ತ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿ ಮುಂದೆ ಸಾಗಲು ರೈತರು ಯತ್ನಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು.
ಪೊಲೀಸರು ಹಾಗೂ ಪ್ರತಿಭಟನಾ ನಿರತ ರೈತರ ನಡುವೆ ನೂಕಾಟ ತಳ್ಳಾಟ ನಡೆಯಿತು. ಪ್ರಹ್ಲಾಅದ್ ಜೋಶಿ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಇಂಚಿಗೇರಿ ಮಠದ ಶಶಿಕಾಂತ ಗುರೂಜಿ ಸೇರಿದಂತೆ ರೈತ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಕ್ಕರೆಯ MSP ದರವನ್ನು 31 ರೂ.ಗೆ ನಿಗದಿ ಮಾಡಲಾಗಿದ್ದು, ಇದನ್ನು 60 ರೂ.ಗೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಬ್ಬಿನ ಬೆಲೆ ನಿಗದಿಯಲ್ಲಿ ರೈತರಿಗೆ ನ್ಯಾಯ ಸಿಗಬೇಕು ಮತ್ತು ಹೊಸ ಎಫ್‌ಆರ್‌ಪಿ ನಿಗದಿ ಮಾಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖುದ್ದಾಗಿ ಬಂದು ರೈತರ ಮನವಿ ಸ್ವೀಕರಿಸಬೇಕು ಎಂದು ಶಶಿಕಾಂತ ಗುರೂಜಿ ಆಗ್ರಹಿಸಿದ್ದಾರೆ.

