ಮೊಬೈಲ್ ನೋಡುವುದು ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಅದರಲ್ಲೂ ಮಲಗುವ ಮುನ್ನ ಮೊಬೈಲ್ ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಎಂದು ತಜ್ಞರು ಹೇಳುತ್ತಾರೆ. ಫೋನ್ನಿಂದ ಹೊರಹೊಮ್ಮುವ ನೀಲಿ ಬೆಳಕಿನಿಂದ ನಿದ್ರೆಗೆ ತೊಂದರೆಯಾಗಬಹುದು ಹಾಗೂ ಕಣ್ಣಿನ ಸಮಸ್ಯೆಗಳು ಉಂಟಾಗಬಹುದು ಎನ್ನಲಾಗುತ್ತದೆ.
ಇಷ್ಟೇ ಅಲ್ಲದೆ, ಇದೀಗ ನಡೆದಿರುವ ಹೊಸ ಅಧ್ಯಯನವೊಂದರ ಪ್ರಕಾರ, ರಾತ್ರಿ ಫೋನ್ನಿಂದ ಹೊರಬರುವ ಬೆಳಕು ಹೃದಯದ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ. ಈ ಅಧ್ಯಯನದಲ್ಲಿ ಇನ್ನೂ ಕೆಲವು ಪ್ರಮುಖ ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಹೃದಯದ ಆರೋಗ್ಯದ ಮೇಲೆ ಪರಿಣಾಮ
ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ, ನಮಗೆ ತಿಳಿಯದೆಯೇ ಮಾಡುವ ಕೆಲವು ಸಣ್ಣಪುಟ್ಟ ಅಭ್ಯಾಸಗಳು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಇವುಗಳನ್ನು ನಾವು ದೊಡ್ಡ ವಿಷಯವೆಂದು ಪರಿಗಣಿಸುವುದಿಲ್ಲ. ಆದರೆ, ಇಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಇತ್ತೀಚೆಗೆ European Heart Journalನಲ್ಲಿ ಪ್ರಕಟವಾದ ಅಧ್ಯಯನವೊಂದು ರಾತ್ರಿ ಸಮಯದಲ್ಲಿ ಹೆಚ್ಚಿನ ಬೆಳಕಿಗೆ ಒಡ್ಡಿಕೊಳ್ಳುವುದಕ್ಕೂ ಹೃದಯದ ಆರೋಗ್ಯಕ್ಕೂ ಇರುವ ಸಂಬಂಧದ ಬಗ್ಗೆ ಗಮನ ಸೆಳೆದಿದೆ.
ಅಧ್ಯಯನದ ಪ್ರಕಾರ, ರಾತ್ರಿ ವೇಳೆ 3 ಲಕ್ಸ್ಗಿಂತ ಹೆಚ್ಚು ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಲೆಫ್ಟ್ ವೆಂಟ್ರಿಕ್ಯುಲರ್ ಹೈಪರ್ಟ್ರೋಫಿ (Left Ventricular Hypertrophy) ಉಂಟಾಗುವ ಸಾಧ್ಯತೆ ಕಂಡುಬಂದಿದೆ. ಅಂದರೆ, ಹೃದಯದ ಪ್ರಮುಖ ಪಂಪಿಂಗ್ ಕೊಠಡಿಯಾದ ಎಡ ವೆಂಟ್ರಿಕಲ್ನ ಸ್ನಾಯು ಅಸಹಜವಾಗಿ ದಪ್ಪವಾಗಬಹುದು. ಜೊತೆಗೆ, ಹೃದಯದ ಸಂಕೋಚನ ಸಾಮರ್ಥ್ಯದಲ್ಲೂ ಸ್ವಲ್ಪ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಜೀವನಶೈಲಿ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಅಧ್ಯಯನ
ಹೃದಯದ ಕಾರ್ಯನಿರ್ವಹಣೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಂಶೋಧಕರು ಜೀವನಶೈಲಿ, ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಪರಿಗಣಿಸಿದ್ದಾರೆ. ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರವೂ ರಾತ್ರಿ ವೇಳೆ ಬೆಳಕಿಗೆ ಒಡ್ಡಿಕೊಳ್ಳುವುದಕ್ಕೂ ಹೃದಯದ ಕೆಲವು ಬದಲಾವಣೆಗಳಿಗೂ ಸಂಬಂಧವಿರುವುದು ಕಂಡುಬಂದಿದೆ.
ರಾತ್ರಿ ಸಮಯದಲ್ಲಿ ಹೆಚ್ಚು ಬೆಳಕಿಗೆ ಒಡ್ಡಿಕೊಂಡವರಲ್ಲಿ ಹೃದಯದ ರಚನೆಯಲ್ಲಿ ಕೆಲವು ಬದಲಾವಣೆಗಳು ಕಂಡುಬಂದಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಅಧ್ಯಯನ ಹೇಗೆ ನಡೆಯಿತು?
ಸುಮಾರು 11,000 ಜನರನ್ನು ಒಳಗೊಂಡ ಅಧ್ಯಯನದಲ್ಲಿ, ರಾತ್ರಿ 3 ಲಕ್ಸ್ಗಿಂತ ಹೆಚ್ಚಿನ ಬೆಳಕು ನಿದ್ರೆ ಹಾಗೂ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸುವ ಪ್ರಮುಖ ಹಾರ್ಮೋನ್ ಆದ ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡಲು ಸಾಕಾಗಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ಸಂಪೂರ್ಣ ಕತ್ತಲಿರುವ ಕೋಣೆಯಲ್ಲಿ ಸಾಮಾನ್ಯವಾಗಿ 1 ಲಕ್ಸ್ಗಿಂತ ಕಡಿಮೆ ಬೆಳಕು ಇರಬಹುದು. ಆದರೆ, ಕೈಯಷ್ಟು ದೂರದಲ್ಲಿ ಹಿಡಿದಿರುವ ಸ್ಮಾರ್ಟ್ಫೋನ್ನ ಪರದೆಯ ಬೆಳಕು ಅದರ ಬ್ರೈಟ್ನೆಸ್ ಸೆಟ್ಟಿಂಗ್ಗಳನ್ನು ಅವಲಂಬಿಸಿ ಹಲವು ಲಕ್ಸ್ಗಳಷ್ಟು ಇರಬಹುದು.
ಅಧ್ಯಯನದ ಆರಂಭದಲ್ಲಿ ಯಾವುದೇ ಹೃದಯ ಸಮಸ್ಯೆ ಇರಲಿಲ್ಲ
ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಆರಂಭದಲ್ಲಿ ಯಾವುದೇ ಪ್ರಮುಖ ಹೃದಯ ಸಮಸ್ಯೆಗಳು ಇರಲಿಲ್ಲ. ಸುಮಾರು 3 ವರ್ಷಗಳ ನಂತರ, ಅಧ್ಯಯನದ ಕೊನೆಯಲ್ಲಿ ಅವರನ್ನು ಕಾರ್ಡಿಯೋವಾಸ್ಕ್ಯುಲರ್ ಮ್ಯಾಗ್ನೆಟಿಕ್ ರೆಸೊನನ್ಸ್ ಇಮೇಜಿಂಗ್ (CMR) ಪರೀಕ್ಷೆಗೆ ಒಳಪಡಿಸಲಾಯಿತು.
ಈ ಪರೀಕ್ಷೆಯ ಮೂಲಕ ಹೃದಯದ ರಚನೆ ಹಾಗೂ ಅದರ ಕಾರ್ಯನಿರ್ವಹಣೆಯನ್ನು ಹೆಚ್ಚು ನಿಖರವಾಗಿ ಅಳೆಯಲು ಸಾಧ್ಯವಾಗುತ್ತದೆ.
ಹೃದಯದ ಕಾರ್ಯಕ್ಷಮತೆ ಮಾತ್ರವಲ್ಲ, ನಿದ್ರೆಯ ಮೇಲೂ ಪರಿಣಾಮ
ರಾತ್ರಿ ವೇಳೆ ಹೆಚ್ಚು ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಜೊತೆಗೆ, ಮೆಲಟೋನಿನ್ ಮಟ್ಟವೂ ಕಡಿಮೆಯಾಗಬಹುದು. ಇದರಿಂದ ನಿದ್ರೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಆದರೆ ಇಲ್ಲಿ ಒಂದು ಪ್ರಮುಖ ವಿಷಯವನ್ನು ಗಮನಿಸಬೇಕು. ಇದು ಒಂದು ವೀಕ್ಷಣಾತ್ಮಕ (observational) ಅಧ್ಯಯನವಾಗಿದೆ. ಹೀಗಾಗಿ, ರಾತ್ರಿ ಬೆಳಕಿಗೆ ಒಡ್ಡಿಕೊಳ್ಳುವುದೇ ಹೃದಯದ ರಚನೆಯಲ್ಲಿ ಬದಲಾವಣೆ ಅಥವಾ ಹೃದಯ ಸಮಸ್ಯೆಗಳಿಗೆ ನೇರ ಕಾರಣ ಎಂದು ಈ ಅಧ್ಯಯನವು ಸಂಪೂರ್ಣವಾಗಿ ಸಾಬೀತುಪಡಿಸಿಲ್ಲ.
ಹೃದಯದ ಆರೋಗ್ಯಕ್ಕಾಗಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳು
ಹೃದಯದ ಆರೋಗ್ಯ ಹಾಗೂ ಉತ್ತಮ ನಿದ್ರೆಯನ್ನು ಕಾಪಾಡಿಕೊಳ್ಳಲು ರಾತ್ರಿ ವೇಳೆ ಅನಗತ್ಯ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಸಹಾಯಕವಾಗಬಹುದು.
-
ರಾತ್ರಿ ವೇಳೆ ಕೋಣೆಯಲ್ಲಿ ಹೆಚ್ಚಿನ ಬೆಳಕು ಇರದಂತೆ ನೋಡಿಕೊಳ್ಳಿ.
-
ಬ್ಲ್ಯಾಕ್ ಕರ್ಟನ್ಗಳು ಅಥವಾ ಸ್ಲೀಪ್ ಮಾಸ್ಕ್ ಬಳಸಬಹುದು.
-
ಮಲಗುವಾಗ ಫೋನ್ ಅನ್ನು ಬೋರಾಗಿ ಇಡಿ ಅಥವಾ ಸಾಧ್ಯವಾದರೆ ಕೋಣೆಯ ಹೊರಗೆ ಇಡಿ.
-
ಇಂಡಿಕೇಟರ್ ಲೈಟ್ಗಳನ್ನು ಆಫ್ ಮಾಡಿ.
-
ಪವರ್ ಬಾರ್ಗಳು, ರೂಟರ್ಗಳು, ಕೇಬಲ್ ಬಾಕ್ಸ್ಗಳು ಹಾಗೂ ಸ್ಟ್ಯಾಂಡ್ಬೈ LED ಲೈಟ್ಗಳನ್ನು ಸಾಧ್ಯವಾದರೆ ಆಫ್ ಮಾಡಿ.
-
ಟಿವಿಯ ಬ್ರೈಟ್ನೆಸ್ ಕಡಿಮೆ ಮಾಡಿ ಮತ್ತು ಸ್ಲೀಪ್ ಟೈಮರ್ ಬಳಸಿ.
-
ಬೆಡ್ಲೈಟ್ ಅಗತ್ಯವಿದ್ದರೆ ಬಿಳಿ ಅಥವಾ ನೀಲಿ ಬೆಳಕಿನ ಬದಲಿಗೆ ಕಡಿಮೆ ತೀವ್ರತೆಯ ಕೆಂಪು ಅಥವಾ ಹಳದಿ ಬೆಳಕನ್ನು ಬಳಸಬಹುದು.
ಒಟ್ಟಿನಲ್ಲಿ, ರಾತ್ರಿ ವೇಳೆ ಅನಗತ್ಯ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ನಿದ್ರೆಯ ಗುಣಮಟ್ಟಕ್ಕೆ ಸಹಾಯಕವಾಗಬಹುದು. ರಾತ್ರಿ ಬೆಳಕು ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ಇನ್ನಷ್ಟು ಸಂಶೋಧನೆ ಅಗತ್ಯವಿದೆ.
ಮುಖ್ಯ ಸೂಚನೆ: ಈ ಮಾಹಿತಿಯನ್ನು ಕೇವಲ ಸಾಮಾನ್ಯ ಅರಿವಿಗಾಗಿ ನೀಡಲಾಗಿದೆ. ಇದು ಅಧ್ಯಯನಗಳು ಹಾಗೂ ಕೆಲವು ತಜ್ಞರ ಅಭಿಪ್ರಾಯಗಳ ಆಧಾರದ ಮೇಲಿರುವ ಮಾಹಿತಿಯಾಗಿದೆ. ಯಾವುದೇ ಆರೋಗ್ಯ ಸಂಬಂಧಿತ ಕ್ರಮಗಳನ್ನು ಕೈಗೊಳ್ಳುವ ಮೊದಲು ವೈದ್ಯರು ಅಥವಾ ಅರ್ಹ ಆರೋಗ್ಯ ತಜ್ಞರ ಸಲಹೆ ಪಡೆಯಿರಿ

