ಬೆಂಗಳೂರು: ಅಪಾಯಕಾರಿ ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣದಲ್ಲಿ ಬಿಬಿಎಂಪಿ (ಹಾಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವಿರುದ್ಧ ಹೈಕೋರ್ಟ್ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದೆ. ಅಪಾಯದ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಇದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯ ಎಂದು ಹೇಳಿರುವ ನ್ಯಾಯಾಲಯ, ಸಂತ್ರಸ್ತ ಜಿ. ಚಂದನ್ ಅವರಿಗೆ ₹2,77,29,695 ಪರಿಹಾರವನ್ನು ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶಿಸಿದೆ.
ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ತೀರ್ಪಿನ ಪ್ರತಿ ದೊರೆತ 12 ವಾರಗಳೊಳಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ಮೊತ್ತ ಪಾವತಿಸುವಂತೆ ಬಿಬಿಎಂಪಿ ಹಾಗೂ ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಈಗಾಗಲೇ ಪಾವತಿಸಿರುವ ₹5 ಲಕ್ಷವನ್ನು ಒಟ್ಟು ಪರಿಹಾರ ಮೊತ್ತದಿಂದ ಕಡಿತಗೊಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮರ ಖಾಸಗಿ ಜಾಗದಲ್ಲಿತ್ತು ಎಂಬ ಕಾರಣ ನೀಡಿ ಸಾರ್ವಜನಿಕರ ಸುರಕ್ಷತೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸಾರ್ವಜನಿಕ ರಸ್ತೆ ಮತ್ತು ಜನರ ಸುರಕ್ಷತೆಗೆ ಅಪಾಯವಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದರೆ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅವರ ಕಾನೂನುಬದ್ಧ ಕರ್ತವ್ಯ ಎಂದು ನ್ಯಾಯಪೀಠ ಹೇಳಿದೆ.ಅಪಘಾತಕ್ಕೆ ದೈವಿಕ ಕಾರಣವನ್ನು ನೆಪವಾಗಿ ಬಳಸಲಾಗದು ಎಂಬ ಬಿಬಿಎಂಪಿಯ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಘಟನೆ ನಡೆದಿದ್ದು 2024ರ ಮಾರ್ಚ್ 7ರಂದು
2024ರ ಮಾರ್ಚ್ 7ರಂದು ಬೆಳಗ್ಗೆ ಸುಮಾರು 10 ಗಂಟೆಗೆ ಬೆಂಗಳೂರಿನ ಶಾಂತಲಾ ನಗರದ ಕಾನ್ವೆಂಟ್ ರಸ್ತೆಯಲ್ಲಿ ಘಟನೆ ನಡೆದಿತ್ತು. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಜಿ. ಚಂದನ್ ಕಚೇರಿಗೆ ತೆರಳುತ್ತಿದ್ದ ವೇಳೆ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಆವರಣದಲ್ಲಿದ್ದ ಗುಲ್ಮೊಹರ್ ಮರದ ಭಾರೀ ಕೊಂಬೆ ಅವರ ಕುತ್ತಿಗೆಯ ಮೇಲೆ ಬಿದ್ದಿತ್ತು.
ಘಟನೆಯಲ್ಲಿ ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರು ಟ್ರಾಮಾಟಿಕ್ ಪ್ಯಾರಾಪ್ಲೀಜಿಯಾ ಸಮಸ್ಯೆಗೆ ಒಳಗಾಗಿದ್ದರು. ವೈದ್ಯಕೀಯ ಪ್ರಮಾಣಪತ್ರದ ಪ್ರಕಾರ ಶೇ.85ರಷ್ಟು ಅಂಗವೈಕಲ್ಯವಿದ್ದರೂ, ಜೀವನೋಪಾಯ ಮತ್ತು ದೈನಂದಿನ ಚಟುವಟಿಕೆಗಳ ಮೇಲೆ ಉಂಟಾದ ಪರಿಣಾಮವನ್ನು ಪರಿಗಣಿಸಿ ನ್ಯಾಯಾಲಯವು ಅವರ ಅಂಗವೈಕಲ್ಯವನ್ನು ಶೇ.100 ಎಂದು ಪರಿಗಣಿಸಿದೆ.
ಅಪಾಯಕಾರಿ ಮರದ ಕೊಂಬೆಯ ಬಗ್ಗೆ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯು 2024ರ ಫೆಬ್ರವರಿ 16ರಂದು ಬಿಬಿಎಂಪಿಗೆ ಪತ್ರ ಬರೆದಿತ್ತು. ಫೆಬ್ರವರಿ 22ರಂದು ಈ ಮಾಹಿತಿ ಅಧಿಕಾರಿಗಳಿಗೆ ತಲುಪಿತ್ತು. ಕೊಂಬೆ ಯಾವುದೇ ಸಮಯದಲ್ಲಾದರೂ ಮುರಿದು ಬೀಳುವ ಸಾಧ್ಯತೆಯಿದ್ದು, ಮಕ್ಕಳು, ನಿವಾಸಿಗಳು ಹಾಗೂ ವಾಹನಗಳಿಗೆ ಅಪಾಯವಿದೆ ಎಂದು ಶಾಲೆ ಎಚ್ಚರಿಸಿತ್ತು.
ಆದರೆ ಕೊಂಬೆ ಕತ್ತರಿಸಲು ಅನುಮತಿ ನೀಡಿದ್ದು ಅಪಘಾತ ಸಂಭವಿಸಿದ ಮಾರ್ಚ್ 7ರಂದೇ. ಈ ವಿಳಂಬವನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ಪ್ರಮುಖವಾಗಿ ಪರಿಗಣಿಸಿದೆ.
ಪರಿಹಾರದ ಮೊತ್ತದ ವಿವರ
ವೈದ್ಯಕೀಯ ವೆಚ್ಚ – ₹24,44,271
ಭವಿಷ್ಯದ ಆದಾಯ ನಷ್ಟ – ₹1,03,85,424
ಆರೈಕೆದಾರರ ವೆಚ್ಚ – ₹27,00,000
ಭವಿಷ್ಯದ ಚಿಕಿತ್ಸೆ, ಫಿಸಿಯೋಥೆರಪಿ ಮತ್ತು ಪುನರ್ವಸತಿ – ₹1,17,00,000
ನೋವು ಮತ್ತು ಸಂಕಟ – ₹5,00,000
ಜೀವನದ ಸೌಲಭ್ಯಗಳ ನಷ್ಟ – ₹5,00,000
ಒಟ್ಟು ಪರಿಹಾರ – ₹2,82,29,695
ಇದರಲ್ಲಿಂದ ಈಗಾಗಲೇ ಪಾವತಿಸಿರುವ ₹5 ಲಕ್ಷವನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಶೇ.6ರ ಬಡ್ಡಿಯೊಂದಿಗೆ ಪಾವತಿಸಬೇಕಾಗಿದೆ.
ಸಾರ್ವಜನಿಕ ಸುರಕ್ಷತೆ ಬಗ್ಗೆ ಹೈಕೋರ್ಟ್ ಮಹತ್ವದ ನಿರ್ದೇಶನ
ಬೆಂಗಳೂರು ಸೇರಿದಂತೆ ರಾಜ್ಯದ ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅಪಾಯ ಉಂಟುಮಾಡಬಹುದಾದ ಅಂಶಗಳನ್ನು ಗುರುತಿಸಿ ಸಮಗ್ರ ಸುರಕ್ಷತಾ ವ್ಯವಸ್ಥೆ ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಗುಂಡಿಗಳು, ತೆರೆದ ಮ್ಯಾನ್‌ಹೋಲ್‌ಗಳು, ಚರಂಡಿಗಳು, ವಿದ್ಯುತ್ ಅಪಾಯ, ಅಪಾಯಕಾರಿ ಕಟ್ಟಡಗಳು, ನಿರ್ಮಾಣ ಕಾಮಗಾರಿಗಳು ಹಾಗೂ ಅಪಾಯಕಾರಿ ಮರಗಳ ಬಗ್ಗೆಯೂ ಗಮನಹರಿಸುವಂತೆ ಸೂಚಿಸಲಾಗಿದೆ.
ನಾಗರಿಕರು ಫೋಟೊ, ವಿಡಿಯೊ ಮತ್ತು ಸ್ಥಳದ ವಿವರಗಳೊಂದಿಗೆ ದೂರು ಸಲ್ಲಿಸಲು ಸಾಮಾನ್ಯ ಡಿಜಿಟಲ್ ವ್ಯವಸ್ಥೆ ರೂಪಿಸಬೇಕು. ಪ್ರತಿಯೊಂದು ದೂರಿಗೂ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಿ, ದೂರು ಪರಿಹಾರವಾಗುವವರೆಗೆ ಅದರ ಸ್ಥಿತಿಯನ್ನು ಸಾರ್ವಜನಿಕರು ಪರಿಶೀಲಿಸಲು ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಅಪಾಯಗಳನ್ನು ತುರ್ತು, ಹೆಚ್ಚು, ಮಧ್ಯಮ ಮತ್ತು ಸಾಮಾನ್ಯ ಎಂದು ವರ್ಗೀಕರಿಸಿ, ಅಗತ್ಯಕ್ಕೆ ಅನುಗುಣವಾಗಿ ತಕ್ಷಣದ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅಪಾಯಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ (AI) ಬಳಸಬಹುದಾದರೂ, ಕಾನೂನು ಉಲ್ಲಂಘನೆ ಅಥವಾ ಹೊಣೆಗಾರಿಕೆ ನಿರ್ಧರಿಸುವ ಅಧಿಕಾರವನ್ನು AI ವ್ಯವಸ್ಥೆಗಳಿಗೆ ನೀಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಜಾರಿಗೆ ತರಬೇಕು. ಪ್ರಮುಖ ನಿರ್ದೇಶನಗಳನ್ನು ಆರು ತಿಂಗಳೊಳಗೆ ಅನುಷ್ಠಾನಗೊಳಿಸುವಂತೆ ಹಾಗೂ ಅಪಾಯಕಾರಿ ಮರಗಳ ನಿರ್ವಹಣಾ ಕ್ರಮಗಳನ್ನು ಮೂರು ತಿಂಗಳೊಳಗೆ ಪರಿಶೀಲಿಸಿ ಸುಧಾರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

