HomeKarnatakaಶಿಕಾರಿಪುರದಲ್ಲಿ ಸೆ.30ರಂದು ಭಾರತ್ ಜೋಡೋ ಪಾದಯಾತ್ರೆ, ಸಮಾವೇಶ: ಸಚಿವ ಮಧು ಬಂಗಾರಪ್ಪ

ಶಿಕಾರಿಪುರದಲ್ಲಿ ಸೆ.30ರಂದು ಭಾರತ್ ಜೋಡೋ ಪಾದಯಾತ್ರೆ, ಸಮಾವೇಶ: ಸಚಿವ ಮಧು ಬಂಗಾರಪ್ಪ

ಶಿಕಾರಿಪುರ: ನಾಲ್ಕು ವರ್ಷಗಳ ಹಿಂದೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆದ ʻಭಾರತ್ ಜೋಡೋʼ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು 4 ವರ್ಷಗಳಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರಂದು ಶಿಕಾರಿಪುರದಲ್ಲಿ ರಾಜ್ಯಮಟ್ಟದ ‘ಭಾರತ್ ಜೋಡೋ 2.0’ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಕಿಟ್ಟದಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಶಿಕಾರಿಪುರದಲ್ಲಿ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಬೃಹತ್‌ ಸಮಾವೇಶ ನಡೆಯುವ ಸಂತೆ ಮೈದಾನದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿ, ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, 2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ಗುಂಡ್ಲುಪೇಟೆ ಮೂಲಕ ಪ್ರವೇಶಿಸಿತ್ತು. ಇದು ಕೇವಲ ಪಾದಯಾತ್ರೆಯಾಗಿರಲಿಲ್ಲ, ಜಾತಿ, ಧರ್ಮದ ಹೆಸರಲ್ಲಿ ಛಿದ್ರಗೊಂಡಿರುವ ಹೃದಯಗಳನ್ನು ಮತ್ತೆ ಬೆಸೆಯಲು ನಡೆಸಿದ್ದ ಪ್ರೀತಿಯ, ಸಾಮರಸ್ಯದ ಯಾತ್ರೆಯಾಗಿತ್ತು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ್‌ ಜೋಡೊ ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ. ಪಕ್ಷದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ನಾನೂ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್‌ನ ಎಲ್ಲ ನಾಯಕರು ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

10 ಕಿ.ಮೀ. ಪಾದಯಾತ್ರೆ

ಸೆಪ್ಟೆಂಬರ್ 30ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕಿಟ್ಟದಹಳ್ಳಿಯಿಂದ ಆರಂಭವಾಗಿ ಮಡ್ಡಿ ಕೋಟೆ ಕ್ರಾಸ್, ಹೊಸನಗರ ಕ್ರಾಸ್, ನೆಲವಾಗಿಲು ಕ್ರಾಸ್ ಮೂಲಕ ಸುಮಾರು 10 ಕಿ.ಮೀ. ಕ್ರಮಿಸಿ ಶಿಕಾರಿಪುರ ನಗರವನ್ನು ಪ್ರವೇಶಿಸಲಿದೆ ಎಂದು ಸಚಿವರು ವಿವರಿಸಿದರು.

ಇದೊಂದು ರಾಜಕೀಯ ಸಂದೇಶ ಸಾರುವ ಕಾರ್ಯಕ್ರಮ. ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ದಿನ. ಶಿಕಾರಿಪುರದಲ್ಲಿ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವುದಕ್ಕೆ ನಾವೆಲ್ಲರೂ ಪಣ ತೊಡುವ ದಿನ ಎಂದು ಹೇಳಿದರು.

ಜನಸಾಮಾನ್ಯರ ಜೊತೆಯಲ್ಲಿ ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ್ದು ದೇಶವನ್ನು ಒಗ್ಗೂಡಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು. ರಾಹುಲ್ ಗಾಂಧಿ ಅವರ ಹೆಜ್ಜೆಗಳ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದನ್ನು ನಾವು ಹೆಮ್ಮೆಯಿಂದ ಹಾಗೂ ಗೌರವದಿಂದ ಸ್ಮರಿಸುತ್ತೇವೆ ಎಂದು ಹೇಳಿದರು.

ಶಿಕಾರಿಪುರದಿಂದಲೇ ‘ರಣಕಹಳೆ’

ಶಿಕಾರಿಪುರದಲ್ಲೇ ಪಾದಯಾತ್ರೆ ಆಯೋಜಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಭಾರತ್ ಜೋಡೋ ಪಾದಯಾತ್ರೆ ಸಂಬಂಧ ಪಕ್ಷದೊಳಗೆ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ರಾಜ್ಯದಲ್ಲಿ ಎರಡು ಕಡೆ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಚರ್ಚೆಯಾಗಿತ್ತು. ಶಿಕಾರಿಪುರ ನಮಗೆ ಮುಖ್ಯವಾಗಿದ್ದು, ಇಲ್ಲಿಂದಲೇ ರಣಕಹಳೆ ಮೊಳಗಿಸೋಣ ಎಂದು ನಿರ್ಧರಿಸಲಾಗಿದೆ ಎಂದರು.

ವಿಜಯೇಂದ್ರ ಪಾದಯಾತ್ರೆ ಕುರಿತು ಮಧು ಬಂಗಾರಪ್ಪ ತಿರುಗೇಟು

ತಮ್ಮ ಕಾರ್ಯಕ್ರಮದ ದಿನವೇ ಬಿ.ವೈ. ವಿಜಯೇಂದ್ರ ಅವರು ಪಾದಯಾತ್ರೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ ಮಧು ಬಂಗಾರಪ್ಪ, “ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡಬೇಕು. ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಯಾವ ಕಾರಣಕ್ಕೆ ಜೈಲಿಗೆ ಹೋಗಿ ಬಂದಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತಿದೆ. ಅವರದ್ದೇ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದು ಸಾಕಾಗಿಲ್ಲವೇ?” ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ಎಕರೆ ಲೂಟಿ ಕತೆ ಬಿಚ್ಚಿಡಬೇಕಾ? ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ತಂದೆ ಎಸ್. ಬಂಗಾರಪ್ಪ ಅವರು ಯಡಿಯೂರಪ್ಪ ಅವರನ್ನು ಹೇಗೆ ಸೋಲಿಸಿದರು ಗೊತ್ತಿಲ್ಲವೇ? ಸೊರಬದಲ್ಲಿ ನಾನು ಎಷ್ಟು ಅಂತರದಿಂದ ಗೆದ್ದಿದ್ದೇನೆ ಎಂಬುದನ್ನು ನೋಡಲಿ. ವಿಜಯೇಂದ್ರ ಕೊನೆಯ ಕ್ಷಣದಲ್ಲಿ ಹೇಗೋ ಬಚಾವಾಗಿದ್ದಾರೆ. ಈ ಸಲ ಅವರನ್ನು ಸೋಲಿಸುವುದೇ ನಮ್ಮ ಗುರಿ,” ಎಂದರು.

ಸೊರಬದಲ್ಲಿ ಗೆದ್ದು ಬನ್ನಿ ಎಂದು ಅವರ ಸಹೋದರ ರಾಘವೇಂದ್ರ ಹೇಳುತ್ತಾರೆ. ತಾವು ಹೇಗೆ ಗೆದ್ದು ಬಂದಿದ್ದೀರಿ? ಚುನಾವಣೆಯಲ್ಲಿ ಪೊಲೀಸ್ ವಾಹನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆ ಗೊತ್ತಿಲ್ಲವೇ?” ಎಂದು ತಿರುಗೇಟು ನೀಡಿದರು.

13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು?’ ದೇಶದ ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಮಧು ಬಂಗಾರಪ್ಪ, “ಒಂದು ದೇಶದಲ್ಲಿ ಎಂತಹ ದೊಡ್ಡ ಆತಂಕ ಎದುರಾಗಿದೆ. 13 ಕೋಟಿ ಮತದಾರರನ್ನು ಕೈಬಿಡುವುದು ಎಂದರೆ ಏನು? ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಕ್ಕೆ ಬೆಲೆಯೇ ಇಲ್ಲವೇ?” ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವನಾಗಿ ನಮ್ಮ ಶಾಲೆಯ ಮಕ್ಕಳಿಗೆ ಸಂವಿಧಾನದ ಪೀಠಿಕೆ ಓದಿಸುತ್ತಿರುವುದು, ನಾಳೆ ನಮ್ಮನ್ನೆಲ್ಲ ಪ್ರಶ್ನಿಸಬೇಕು ಎಂಬ ಕಾರಣಕ್ಕಾಗಿ ಎಂದು ಹೇಳಿದರು.

ಯುವಕರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಕೇಳುತ್ತಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಬೇಕು. ಭಾರತದ ಚುನಾವಣಾ ವ್ಯವಸ್ಥೆಯ ಮೇಲೆ ಮುಂದೆ ಎಲ್ಲರೂ ನಂಬಿಕೆ ಕಳೆದುಕೊಳ್ಳುವ ದಿನಗಳು ಬರಬಹುದು ಎಂಬ ಆತಂಕ ನಮಗಿದೆ. ಮುಂದೆ ಚುನಾವಣೆಗಳು ಹೇಗೆ ನಡೆಯುತ್ತವೆಯೋ ಎಂಬುದರ ಬಗ್ಗೆ ಆತಂಕವಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, “ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳುಗಳನ್ನು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಅವರು ನೀಡಿದ ಯಾವ ಭರವಸೆಯನ್ನು ಈಡೇರಿಸಿದ್ದಾರೆ? ಯುವಕರಿಗೆ ಉದ್ಯೋಗ ನೀಡಿದರೇ? ಎಲ್ಲಿ ಹೋಯಿತು ಆ ಭರವಸೆ?” ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ ಯೋಗೇಶ್, ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಲತೇಶ್ ಭಂಡಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಶಿವಕುಮಾರ್, ಶಿಕಾರಿಪುರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯ್ಕ್, ಪ್ರಧಾನ ಕಾರ್ಯದರ್ಶಿ ದರ್ಶನ್ ಉಳ್ಳಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಲಗೋಡು ರತ್ನಾಕರ್, ಗೋಣಿ ಮಾಲತೇಶ್, ಈರೇಶ್ ಎನ್.ವಿ, ರಾಘವೇಂದ್ರ ನಾಯ್ಕ್ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular