ಹೆಚ್ಚು ಆಹಾರ ಸೇವಿಸಿದ ನಂತರ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಅಜೀರ್ಣದ ಭಾವನೆ ಉಂಟಾಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ನಮ್ಮ ಮನೆಗಳಲ್ಲಿ ತಲೆತಲಾಂತರಗಳಿಂದ ಓಮ (ಅಜವಾನ) ಮತ್ತು ಸೋಂಪು (ಫೆನ್ನಲ್) ನೀರನ್ನು ಬಳಸುವುದು ವಾಡಿಕೆ. ಆದರೆ ಇವೆರಡೂ ಒಂದೇ ರೀತಿಯಲ್ಲಿ ಕೆಲಸ ಮಾಡುವುದಿಲ್ಲ. ಜೀರ್ಣಕ್ರಿಯೆಯ ಕಿರಿಕಿರಿ ನಿವಾರಣೆಗೆ ಇವೆರಡರಲ್ಲಿ ಯಾವುದು ಹೆಚ್ಚು ಸೂಕ್ತ ಎಂಬುದನ್ನು ಇಲ್ಲಿ ತಿಳಿಯಿರಿ.
ಓಮದ ನೀರು (Ajwain Water): ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಸಮಸ್ಯೆಗೆ ಮನೆಮದ್ದುಗಳಲ್ಲಿ ಓಮಕ್ಕೆ ಪ್ರಮುಖ ಸ್ಥಾನವಿದೆ. ಪೌಷ್ಟಿಕತಜ್ಞೆ ರೂಪಾಲಿ ದತ್ತಾ ಅವರ ಪ್ರಕಾರ, ಅತಿಯಾಗಿ ಆಹಾರ ಸೇವಿಸಿದ ನಂತರ ಉಂಟಾಗುವ ಅಸ್ವಸ್ಥತೆಗೆ ಓಮ ಸಹಕಾರಿ. ಓಮದಲ್ಲಿ ‘ಥೈಮಾಲ್’ (Thymol) ಎಂಬ ನೈಸರ್ಗಿಕ ಸಂಯುಕ್ತವಿದ್ದು, ಇದು ಜೀರ್ಣರಸಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 2017ರ ‘ಅವಿಸೆನ್ನಾ ಜರ್ನಲ್ ಆಫ್ ಫೈಟೋಮೆಡಿಸಿನ್’ ವರದಿಯ ಪ್ರಕಾರ, ಜೀರ್ಣಕ್ರಿಯೆ ಸಮಸ್ಯೆಯಿರುವ ಜನರಲ್ಲಿ ಓಮ ಆಧಾರಿತ ಪದಾರ್ಥಗಳು ಹೊಟ್ಟೆ ಉಬ್ಬರ, ತೇಗು ಮತ್ತು ವಾಕರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಿರುವುದು ಕಂಡುಬಂದಿದೆ. ಹೀಗಾಗಿ ತೀವ್ರತರದ ಗ್ಯಾಸ್ ಹಾಗೂ ಭಾರವಾದ ಭಾವನೆಗೆ ಓಮದ ನೀರು ತಕ್ಷಣದ ಪರಿಹಾರ ನೀಡುತ್ತದೆ.
ಸೋಂಪು ನೀರು : ಊಟದ ನಂತರ ಸೋಂಪು ನೀರು ಕುಡಿಯುವುದು ಅಥವಾ ಸೋಂಪು ಅಗಿಯುವುದು ಹಲವರ ಅಭ್ಯಾಸ. ಪೌಷ್ಟಿಕತಜ್ಞೆ ಮನ್‌ಪ್ರೀತ್ ಕೌರ್ ಅವರ ಪ್ರಕಾರ, ಊಟದ ನಂತರದ ಹೊಟ್ಟೆ ಉಬ್ಬರಕ್ಕೆ ಇದು ಉತ್ತಮ ಪಾನೀಯ. ಸೋಂಪಿನಲ್ಲಿ ‘ಅನೆಥೋಲ್’ (Anethole) ಎಂಬ ಸಂಯುಕ್ತವಿದ್ದು, ಇದು ಜೀರ್ಣಾಂಗವ್ಯೂಹದ ಸ್ನಾಯುಗಳನ್ನು ಸಡಿಲಗೊಳಿಸಲು ನೆರವಾಗುತ್ತದೆ. 2020ರ ಅಧ್ಯಯನ ಒಂದರ ಪ್ರಕಾರ, ಸೋಂಪು ಆಧಾರಿತ ಚಿಕಿತ್ಸೆಯು ಹೊಟ್ಟೆ ಉಬ್ಬರವನ್ನು ಶಮನಗೊಳಿಸಲು ನೆರವಾಗಿದೆ. ಓಮಕ್ಕೆ ಹೋಲಿಸಿದರೆ ಸೋಂಪು ಅತ್ಯಂತ ಮೃದುವಾದ (milder) ಪ್ರಭಾವವನ್ನು ಹೊಂದಿದ್ದು, ನಿಧಾನವಾಗಿ ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತದೆ.
ಯಾವುದು ಉತ್ತಮ?: ನಿಮಗೆ ತೀವ್ರವಾದ ಗ್ಯಾಸ್, ಹೊಟ್ಟೆಯಲ್ಲಿ ಭಾರ ಹಾಗೂ ತಕ್ಷಣದ ಪರಿಹಾರ ಬೇಕಿದ್ದರೆ ಓಮದ ನೀರು ಹೆಚ್ಚು ಸೂಕ್ತ. ಆದರೆ ಹೊಟ್ಟೆಯಲ್ಲಿ ಲಘು ಕಿರಿಕಿರಿ ಅಥವಾ ಮೃದುವಾದ ಜೀರ್ಣಕಾರಿ ಪಾನೀಯ ಬೇಕು ಎನಿಸಿದರೆ ಸೋಂಪು ನೀರನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.

