ನಟಿ ತಾಪ್ಸಿ ಪನ್ನು ಅವರು ಚಿತ್ರರಂಗಕ್ಕೆ ಹೊಸದಾಗಿ ಬಂದ ದಿನಗಳಲ್ಲಿ ಎದುರಿಸಿದ ಕಹಿ ಅನುಭವವೊಂದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಡೇಟ್ಸ್ ಎಲ್ಲವೂ ಲಾಕ್ ಆಗಿದ್ದರೂ ಸಿನಿಮಾವೊಂದರಿಂದ ತಮ್ಮನ್ನು ಏಕಾಏಕಿ ಕೈಬಿಡಲಾಗಿತ್ತು. ಇದಕ್ಕೆ ಕಾರಣ ಕೇಳಿದಾಗ, “ಹೀರೋ ಪತ್ನಿಗೆ ನೀನು ಇಷ್ಟವಿಲ್ಲ” ಎಂದು ಹೇಳಲಾಗಿತ್ತು ಎಂಬ ಶಾಕಿಂಗ್ ವಿಚಾರವನ್ನು ತಾಪ್ಸಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಯಾವುದು, ಆ ಹೀರೋ ಯಾರು ಎಂಬುದನ್ನು ಮಾತ್ರ ಅವರು ಬಹಿರಂಗಪಡಿಸಿಲ್ಲ.
ನಟಿ ತಾಪ್ಸಿ ಪನ್ನು ಅವರು ಚಿತ್ರರಂಗಕ್ಕೆ ಹೊಸದಾಗಿ ಬಂದಾಗ ಎದುರಿಸಿದ ಕೆಲವು ಕಹಿ ಅನುಭವಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಸಿನಿಮಾ ಅವಕಾಶಗಳು ಸಿಗುವುದು ಎಷ್ಟು ಕಷ್ಟವೋ, ಸಿಕ್ಕ ಅವಕಾಶವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟ ಎಂದು ಅವರು ಹೇಳಿದ್ದಾರೆ. ಡೇಟ್ಸ್ ಎಲ್ಲವೂ ನಿಗದಿಯಾಗಿದ್ದರೂ ಒಂದು ಸಿನಿಮಾದಿಂದ ತಮ್ಮನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದ್ದರು ಎಂದು ತಾಪ್ಸಿ ತಿಳಿಸಿದ್ದಾರೆ.
ನಯನ್ದೀಪ್ ರಕ್ಷಿತ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ತಾಪ್ಸಿ ತಮ್ಮ ಬಾಲಿವುಡ್ ಪ್ರಯಾಣದ ಆರಂಭಿಕ ದಿನಗಳ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಯಾವುದೇ ಕಾರಣ ನೀಡದೆ ಸಿನಿಮಾದಿಂದ ಕೈಬಿಟ್ಟಿದ್ದರು
ತಾವು ನಟಿಸಬೇಕಿದ್ದ ಸಿನಿಮಾವೊಂದಕ್ಕೆ ತಾಪ್ಸಿ ಮುಂಚಿತವಾಗಿಯೇ ಡೇಟ್ಸ್ ನೀಡಿದ್ದರಂತೆ. ಆದರೆ ನಂತರ ಯಾವುದೇ ಸ್ಪಷ್ಟ ಕಾರಣ ನೀಡದೆ ತಮ್ಮನ್ನು ಆ ಪ್ರಾಜೆಕ್ಟ್ನಿಂದ ತೆಗೆದುಹಾಕಲಾಯಿತು ಎಂದು ಅವರು ಹೇಳಿದ್ದಾರೆ.
ಹೀಗೆ ಏಕೆ ಮಾಡಲಾಯಿತು ಎಂಬುದು ತಿಳಿಯದೆ ಆ ಸಮಯದಲ್ಲಿ ತಾಪ್ಸಿ ಹಲವು ಅನುಮಾನಗಳಿಗೆ ಒಳಗಾಗಿದ್ದರಂತೆ. ತಮ್ಮನ್ನು ಸಿನಿಮಾದಿಂದ ತೆಗೆದುಹಾಕಲು ಹೀರೋನೇ ಕಾರಣ ಎಂಬುದು ನಂತರ ತಿಳಿದರೂ, ನಿಜವಾದ ಕಾರಣ ಮಾತ್ರ ಯಾರೂ ಹೇಳಿರಲಿಲ್ಲ.
ಹೀರೋಗೆ ತಮ್ಮ ಬದಲಿಗೆ ಬೇರೆ ನಾಯಕಿ ಬೇಕಾಗಿರಬಹುದು ಅಥವಾ ಬೇರೆ ನಟಿಯರೊಂದಿಗೆ ಅವರಿಗೆ ಹೆಚ್ಚಿನ ಆತ್ಮೀಯತೆ ಇರಬಹುದು ಎಂದು ತಾಪ್ಸಿ ಆಗ ಹಲವು ರೀತಿಯಲ್ಲಿ ಊಹಿಸಿಕೊಂಡಿದ್ದರಂತೆ.
‘ಹೀರೋ ಪತ್ನಿಗೆ ನೀನು ಇಷ್ಟವಿಲ್ಲ’ ಎಂದಿದ್ದರಂತೆ
ಈ ಘಟನೆಯ ಬಗ್ಗೆ ತಾಪ್ಸಿ ಹೇಳಿದ ಮಾತು ಇದೀಗ ಗಮನ ಸೆಳೆಯುತ್ತಿದೆ. ತಮ್ಮನ್ನು ಸಿನಿಮಾದಿಂದ ತೆಗೆದುಹಾಕಲು ನೀಡಿದ ಕಾರಣಗಳಲ್ಲಿ ಒಂದು ತಮಗೆ ಅತ್ಯಂತ ವಿಚಿತ್ರವಾಗಿ ಅನಿಸಿತ್ತು ಎಂದು ಅವರು ಹೇಳಿದ್ದಾರೆ.
“ಹೀರೋ ಪತ್ನಿಗೆ ನೀನು ಇಷ್ಟವಿಲ್ಲವಂತೆ” ಎಂದು ತಮ್ಮ ಬಳಿ ಹೇಳಲಾಗಿತ್ತು ಎಂದು ತಾಪ್ಸಿ ಬಹಿರಂಗಪಡಿಸಿದ್ದಾರೆ. ಆದರೆ ಹೀರೋ ಪತ್ನಿಗೆ ತಾವು ಏಕೆ ಇಷ್ಟವಾಗಲಿಲ್ಲ ಎಂಬುದು ಇಂದಿಗೂ ಅರ್ಥವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಈ ಘಟನೆ ಯಾವ ಸಿನಿಮಾ ಸಂದರ್ಭದಲ್ಲಿ ನಡೆದಿತ್ತು ಅಥವಾ ಆ ಹೀರೋ ಯಾರು ಎಂಬುದನ್ನು ತಾಪ್ಸಿ ಬಹಿರಂಗಪಡಿಸಿಲ್ಲ.
ಶೂಟಿಂಗ್ನಲ್ಲಿ ಗ್ಲಾಮರ್ ಎಂದುಕೊಂಡಿದ್ದ ದೃಶ್ಯಗಳು ವಲ್ಗರ್ ಆಗಿ ಕಾಣಿಸಿದ್ದವು
ಚಿತ್ರರಂಗಕ್ಕೆ ಹೊಸದಾಗಿ ಬಂದಾಗ ಎದುರಿಸಿದ ಮತ್ತೊಂದು ಅನುಭವವನ್ನೂ ತಾಪ್ಸಿ ಹಂಚಿಕೊಂಡಿದ್ದಾರೆ. ಕೆಲವು ದೃಶ್ಯಗಳ ಚಿತ್ರೀಕರಣದ ವೇಳೆ ಅವು ತೆರೆ ಮೇಲೆ ಅಗತ್ಯಕ್ಕಿಂತ ಹೆಚ್ಚು ಶೃಂಗಾರಭರಿತವಾಗಿ ಕಾಣಬಹುದು ಎಂಬುದು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ.
ಶೂಟಿಂಗ್ ಸಮಯದಲ್ಲಿ ದೃಶ್ಯವನ್ನು ಸುಂದರವಾಗಿ ಚಿತ್ರೀಕರಿಸಲಾಗುತ್ತಿದೆ ಎಂದುಕೊಂಡಿದ್ದೆ. ಆದರೆ ಅಂತಿಮವಾಗಿ ಸಿನಿಮಾ ನೋಡಿದಾಗ ಅದನ್ನು ಅನಗತ್ಯವಾಗಿ ವಲ್ಗರ್ ಆಗಿ ತೋರಿಸಲಾಗಿದೆ ಎಂದು ಅನಿಸಿತ್ತು ಎಂದು ತಾಪ್ಸಿ ಹೇಳಿದ್ದಾರೆ.
ಆರಂಭದಲ್ಲಿ ಚಿತ್ರರಂಗದವರ ಮಾತನ್ನೆಲ್ಲ ನಂಬುತ್ತಿದ್ದೆ
ಚಿತ್ರರಂಗದ ಬಗ್ಗೆ ಹೆಚ್ಚಿನ ಅನುಭವವಿಲ್ಲದ ಕಾರಣ, ಸುತ್ತಮುತ್ತಲಿನವರು ಹೇಳುತ್ತಿದ್ದುದನ್ನೆಲ್ಲ ಸರಿಯೆಂದು ನಂಬುತ್ತಿದ್ದೆ ಎಂದು ತಾಪ್ಸಿ ತಿಳಿಸಿದ್ದಾರೆ.
“ಎಲ್ಲರೂ ಹೀಗೆ ಮಾಡುತ್ತಾರೆ” ಎಂದು ಯಾರಾದರೂ ಹೇಳಿದಾಗ, ತಾನು ಬೇರೆ ಹಿನ್ನೆಲೆಯಿಂದ ಬಂದಿದ್ದರಿಂದ ಬಹುಶಃ ಈ ವಿಚಾರಗಳು ತನ್ನಗೆ ಗೊತ್ತಿಲ್ಲ ಎಂದುಕೊಂಡು ಸುಮ್ಮನಾಗುತ್ತಿದ್ದೆ ಎಂದಿದ್ದಾರೆ.
ಆದರೆ ನಂತರ ಸಿನಿಮಾದಲ್ಲಿ ಕೆಲವು ವಿಷಯಗಳು ಕಡ್ಡಾಯವಾಗಿ ಇರಬೇಕಾದ ಅಗತ್ಯವಿಲ್ಲ ಎಂಬುದು ಅರ್ಥವಾಯಿತು ಎಂದು ಹೇಳಿದ್ದಾರೆ.
ಗ್ಲಾಮರಸ್ ಆಗಿ ಕಾಣಿಸುವುದು ಮತ್ತು ಮಿತಿಮೀರಿದ ಶೃಂಗಾರವನ್ನು ತೋರಿಸುವುದು ಎರಡೂ ಒಂದೇ ಅಲ್ಲ ಎಂದು ತಾಪ್ಸಿ ಸ್ಪಷ್ಟಪಡಿಸಿದ್ದಾರೆ. ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ಮಾತ್ರಕ್ಕೆ ದೃಶ್ಯಗಳನ್ನು ಅನಗತ್ಯವಾಗಿ ವಲ್ಗರ್ ಆಗಿ ತೋರಿಸುವ ಅಗತ್ಯವಿಲ್ಲ ಎಂಬುದು ಅವರ ಅಭಿಪ್ರಾಯ.
‘ಗಾಂಧಾರಿ’ ಸಿನಿಮಾದಲ್ಲಿ ತಾಪ್ಸಿ
ಇನ್ನು ವೃತ್ತಿಜೀವನದ ವಿಚಾರಕ್ಕೆ ಬಂದರೆ, ತಾಪ್ಸಿ ಪನ್ನು ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ ‘ಗಾಂಧಾರಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದ ತಾಪ್ಸಿ ಇದೀಗ ಟಾಲಿವುಡ್ನಿಂದ ದೂರ ಉಳಿದಿದ್ದಾರೆ.

