HomeKarnatakaಸಚಿವ ಸತೀಶ್ ಜಾರಕಿಹೊಳಿಗೆ ಇಡಿ ತನಿಖೆ ಉರುಳು: ದೆಹಲಿ ಘಟಕಕ್ಕೆ ಪ್ರಕರಣ ಹಸ್ತಾಂತರ ಸಾಧ್ಯತೆ

ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ತನಿಖೆ ಉರುಳು: ದೆಹಲಿ ಘಟಕಕ್ಕೆ ಪ್ರಕರಣ ಹಸ್ತಾಂತರ ಸಾಧ್ಯತೆ

ಬೆಂಗಳೂರು-ಲೋಕೋಪಯೋಗಿ ಇಲಾಖೆ (PWD) ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ವಿರುದ್ಧ ಜಾರಿ ನಿರ್ದೇಶನಾಲಯ (ED) ಕೈಗೊಂಡಿರುವ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.

ಸದ್ಯ ಲಭ್ಯವಿರುವ ಮಾಹಿತಿಯಂತೆ, ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿ ಬೆಂಗಳೂರು ವಲಯದ ತನಿಖೆಯನ್ನು ದೆಹಲಿ ಇಡಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳ ತಂಡಕ್ಕೆ ವಹಿಸಲು ಸಿದ್ಧತೆಗಳು ನಡೆದಿವೆ.

ಇತ್ತೀಚೆಗೆ ಸ್ವತಃ ಇಡಿ ನಿರ್ದೇಶಕ ರಾಹುಲ್ ನವೀನ್ ಅವರು ಬೆಂಗಳೂರಿಗೆ ಭೇಟಿ ನೀಡಿ ಪ್ರಕರಣದ ಪರಿಶೀಲನೆ ನಡೆಸಿರುವುದು ತನಿಖೆಯ ದಿಕ್ಕು ಬದಲಾಗುತ್ತಿರುವುದಕ್ಕೆ ಪುಷ್ಟಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಡಿ ಅಧಿಕಾರಿಗಳು ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದ 21 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಸಿದ ಸರಣಿ ದಾಳಿಯ ಸಂದರ್ಭದಲ್ಲಿ ಸುಮಾರು ₹3.3 ಕೋಟಿ ನಗದು ಮತ್ತು ₹15 ಲಕ್ಷ ಮೌಲ್ಯದ ವಿದೇಶಿ ವಿನಿಮಯ ನಗದು ಹಾಗೂ ಮಹತ್ವದ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಅನುಮೋದನೆಗೊಂಡಿದ್ದ ₹3,190 ಕೋಟಿ ಮೌಲ್ಯದ 110 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಯೋಜನೆಗಳಲ್ಲಿ ಭಾರಿ ಪ್ರಮಾಣದ ಕಮಿಷನ್/ಲಂಚ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಶ್ಚಿಮ ಬಂಗಾಳ ಮೂಲದ ‘ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್’ (BVEPL) ಕಂಪನಿಯಿಂದ ಕಾಮಗಾರಿ ಗುತ್ತಿಗೆ ಪಡೆಯಲು ಲಂಚ ಪಾವತಿಸಲಾಗಿದ್ದು, ಈ ಹಣವನ್ನು ಅಕ್ರಮ ಮಾರ್ಗದ ಮೂಲಕ ವರ್ಗಾಯಿಸಲಾಗಿದೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ.

ಆಫ್ರಿಕಾದಲ್ಲಿ ವಿದೇಶಿ ಬಂಡವಾಳ ಹೂಡಿಕೆ

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ನಿಯಮಗಳನ್ನು ಉಲ್ಲಂಘಿಸಿ ವಿದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಲಾಗಿರುವುದು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಫ್ರಿಕಾದ ಕಾಂಗೋ (Congo) ದೇಶದ ಗಣಿ ಉದ್ಯಮ ಸಂಸ್ಥೆಯೊಂದರಲ್ಲಿ ಸತೀಶ್ ಜಾರಕಿಹೊಳಿ ಶೇ.40 ರಷ್ಟು ಪಾಲುದಾರಿಕೆ ಹೊಂದಿದ್ದಾರೆ ಎನ್ನಲಾದ ದಾಖಲೆಗಳು ಲಭ್ಯವಾಗಿವೆ.ಜೊತೆಗೆ ಅವರ ಕುಟುಂಬದ ಸದಸ್ಯರ ಹೆಸರಿನಲ್ಲೂ ವಿದೇಶಿ ಕಂಪನಿಗಳ ಶೇರುಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ.

ಸಚಿವ ಸತೀಶ್ ಜಾರಕಿಹೊಳಿ ಅವರ ಸ್ಪಷ್ಟನೆ:

ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, “ವಿದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಯೋಜನೆ ರೂಪಿಸಲಾಗಿತ್ತೇ ವಿನಃ ಇನ್ನೂ ಹೂಡಿಕೆ ಮಾಡಿಲ್ಲ. ನಿಯಮಾನುಸಾರ ಆರ್‌ಬಿಐ ಹಾಗೂ ಇತರ ಸಂಸ್ಥೆಗಳ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ. ಇಡಿ ವಶಪಡಿಸಿಕೊಂಡಿರುವ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನ್ಯಾಯಾಲಯ ಮತ್ತು ಅಧಿಕಾರಿಗಳಿಗೆ ಸಲ್ಲಿಸಿ ಕಾನೂನುಬದ್ಧವಾಗಿ ಬಿಡಿಸಿಕೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಈ ದಾಳಿಯನ್ನು “ರಾಜಕೀಯ ಪ್ರೇರಿತ” ಎಂದು ಕರೆದಿದ್ದರೆ, ವಿರೋಧ ಪಕ್ಷಗಳು ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಪ್ರಸ್ತುತ ಪ್ರಕರಣ ದೆಹಲಿ ಇಡಿ ತನಿಖಾಧಿಕಾರಿಗಳ ಅಂಗಳಕ್ಕೆ ತಲುಪುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ತನಿಖೆ ಮತ್ತಷ್ಟು ಕಠಿಣಗೊಳ್ಳುವ ಸಾಧ್ಯತೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular