ಬೆಂಗಳೂರು: ಅಟ್ಟಿಕಾ ಗೋಲ್ಡ್ ಕಂಪನಿಗೆ ಸಂಬಂಧಿಸಿದ ಕಚೇರಿಗಳು ಹಾಗೂ ಇತರ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿ ತನಿಖೆ ಮುಂದುವರಿಸಿದ್ದ ಬೆನ್ನಲ್ಲೇ ಇದೀಗ ಆದಾಯ ತೆರಿಗೆ (IT) ಅಧಿಕಾರಿಗಳು ಕೂಡ ದಾಳಿ ನಡೆಸಿದ್ದಾರೆ. ED ಅಧಿಕಾರಿಗಳು ನಿನ್ನೆ ರಾತ್ರಿ ದಾಳಿ ಹಾಗೂ ಶೋಧ ಕಾರ್ಯಾಚರಣೆ ಮುಕ್ತಾಯಗೊಳಿಸಿದ ಬಳಿಕವೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿರುವುದು ಗಮನ ಸೆಳೆದಿದೆ.
ಅಟ್ಟಿಕಾ ಗೋಲ್ಡ್ ಕಂಪನಿಗೆ ಸಂಬಂಧಿಸಿದ 19 ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಂಪನಿಯ ಹಣಕಾಸು ವ್ಯವಹಾರಗಳು, ದಾಖಲೆಗಳು, ಲೆಕ್ಕಪತ್ರಗಳು ಹಾಗೂ ಇತರ ಸಂಬಂಧಿತ ಮಾಹಿತಿಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಪ್ರಧಾನ ಕಚೇರಿ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಒಟ್ಟು 19ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು.
ಈ ಹಿಂದೆ ಅಟ್ಟಿಕಾ ಗೋಲ್ಡ್ಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ED ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ರಾತ್ರಿ ಈ ದಾಳಿ ಅಂತ್ಯಗೊಂಡಿತ್ತು. ಇದೀಗ ಅದರ ಬೆನ್ನಲ್ಲೇ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ.
ದಾಳಿಯ ವೇಳೆ ಅಧಿಕಾರಿಗಳು ಪ್ರಮುಖ ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸುತ್ತಿರುವ ಸಾಧ್ಯತೆ ಇದೆ. ಆದರೆ ದಾಳಿಯ ವೇಳೆ ಏನು ಪತ್ತೆಯಾಗಿದೆ ಅಥವಾ ಯಾವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಬಗ್ಗೆ ಅಧಿಕೃತವಾಗಿ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ನಿರಂತರ ಕಾರ್ಯಾಚರಣೆ
ED ದಾಳಿ ಮುಕ್ತಾಯಗೊಂಡ ಕೆಲವೇ ಗಂಟೆಗಳಲ್ಲಿ IT ಇಲಾಖೆ 19 ಸ್ಥಳಗಳಲ್ಲಿ ದಾಳಿ ನಡೆಸಿರುವುದರಿಂದ ಅಟ್ಟಿಕಾ ಗೋಲ್ಡ್ ಕಂಪನಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಕುರಿತು ತನಿಖಾ ಸಂಸ್ಥೆಗಳ ಗಮನ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಪರಿಶೀಲನೆಯ ಬಳಿಕ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 26 ರಿಂದ ಸಕ್ರೆಬೈಲು ಆನೆ ಬಿಡಾರ ಸಾರ್ವಜನಿಕ ಪ್ರವೇಶಕ್ಕೆ ಪುನರಾರಂಭ
ಶಿವಮೊಗ್ಗ : ದಿನಾಂಕ 18.04.2026 ರಂದು ದುಬಾರೆ ಆನೆ ಶಿಬಿರದಲ್ಲಿ ನಡೆದ ಆಕಸ್ಮಿಕ ದುರ್ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ, ರಾಜ್ಯದಲ್ಲಿರುವ ಎಲ್ಲಾ ಆನೆ ಶಿಬಿರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅರಣ್ಯ ಸಚಿವರು ಸೂಚಿಸಿದ್ದರು. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡ ನಂತರವಷ್ಟೇ ಶಿಬಿರಗಳನ್ನು ಪುನರಾರಂಭಿಸಲು ನಿರ್ದೇಶಿಸಲಾಗಿತ್ತು.
ಅರಣ್ಯ ಇಲಾಖೆ ನೀಡಿರುವ ಸುರಕ್ಷತಾ ಮಾರ್ಗಸೂಚಿಗಳಂತೆ ಈಗ ಸಕ್ರೆಬೈಲು ಆನೆ ಬಿಡಾರದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಪ್ರತ್ಯೇಕ ಮಾರ್ಗಗಳ ವ್ಯವಸ್ಥೆ: ಸಾರ್ವಜನಿಕರಿಗೆ ಮತ್ತು ಆನೆಗಳಿಗೆ ಪ್ರತ್ಯೇಕ ಮಾರ್ಗಗಳನ್ನು ಗುರುತಿಸಲಾಗಿದೆ.
ಸಾರ್ವಜನಿಕರು ಮತ್ತು ಆನೆಗಳ ನಡುವೆ ನೇರ ಸಂಪರ್ಕ ಬಾರದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.
ಸೂಚನಾ ಫಲಕಗಳು: ಪ್ರವಾಸಿಗರ ಮಾಹಿತಿ ಮತ್ತು ಜಾಗೃತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಈ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಲಾಗಿದ್ದು, ದಿನಾಂಕ 26.09.2026 ರಿಂದ ಸಕ್ರೆಬೈಲು ಆನೆ ಬಿಡಾರವನ್ನು ಸಾರ್ವಜನಿಕರ ಪ್ರವೇಶಕ್ಕೆ ಅಧಿಕೃತವಾಗಿ ಪುನರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

