₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಅಕ್ಟೋಬರ್ 15, 2026ರಿಂದ MDR ಶುಲ್ಕ ಜಾರಿಗೆ ಬರಲಿದೆ ಎಂಬ ಹಿನ್ನೆಲೆಯಲ್ಲಿ ರೈಲು ಟಿಕೆಟ್ ದರ ಹೆಚ್ಚಳವಾಗಲಿದೆಯೇ ಎಂಬ ಆತಂಕ ಪ್ರಯಾಣಿಕರಲ್ಲಿ ಮೂಡಿದೆ. ಆದರೆ IRCTC ಮೂಲಕ ರೈಲು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ರೈಲ್ವೆ ಟಿಕೆಟ್ ಬುಕಿಂಗ್ನಂತಹ ಅಗತ್ಯ ಸೇವೆಗಳಿಗೆ ಮರ್ಚೆಂಟ್ಗಳ ಮೇಲೆ ಗರಿಷ್ಠ ₹5 ಶುಲ್ಕ ಮಾತ್ರ ಅನ್ವಯವಾಗಲಿದ್ದು, ಈ ವೆಚ್ಚವನ್ನು ಪ್ರಯಾಣಿಕರಿಂದ ವಸೂಲು ಮಾಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹೌದು. ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ 2026ರ ಅಕ್ಟೋಬರ್ 15ರಿಂದ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ₹2,000ಕ್ಕಿಂತ ಹೆಚ್ಚಿನ ಮೌಲ್ಯದ UPI ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲು ನಿರ್ಧರಿಸಲಾಗಿದೆ.
ಆದರೆ ರೈಲ್ವೆ ಟಿಕೆಟ್ ಬುಕಿಂಗ್ ಸೇರಿದಂತೆ ಇತರ ಅಗತ್ಯ ಸೇವೆಗಳ ವಹಿವಾಟುಗಳ ಮೇಲೆ ಈ ನಿಯಮದ ಪರಿಣಾಮ ಹೇಗಿರಲಿದೆ ಎಂಬ ಬಗ್ಗೆ ಗ್ರಾಹಕರಲ್ಲಿ ಆತಂಕ ಮೂಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಈ ಶುಲ್ಕವನ್ನು ವ್ಯಾಪಾರಿಗಳು ಮತ್ತು ಸೇವಾ ಪೂರೈಕೆದಾರರು ಮಾತ್ರ ಪಾವತಿಸಬೇಕು. ಹೀಗಾಗಿ ಪ್ರಯಾಣಿಕರು ಅಥವಾ ಸಾಮಾನ್ಯ ಗ್ರಾಹಕರ ಖಾತೆಯಿಂದ ಹೆಚ್ಚುವರಿಯಾಗಿ ಒಂದು ರೂಪಾಯಿಯನ್ನೂ ಕಡಿತಗೊಳಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರೈಲು ಟಿಕೆಟ್ ಬುಕಿಂಗ್: ಮರ್ಚೆಂಟ್ಗೆ ಗರಿಷ್ಠ ₹5 ಶುಲ್ಕ
ಸಾಮಾನ್ಯವಾಗಿ ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳ ಮೇಲೆ ಶೇ.0.4ರಷ್ಟು MDR ಶುಲ್ಕ ಅನ್ವಯವಾಗುತ್ತದೆ. ಆದರೆ ಇಂಡಿಯನ್ ರೈಲ್ವೇಸ್ (IRCTC) ಅಗತ್ಯ ಸೇವೆಯ ವ್ಯಾಪ್ತಿಗೆ ಬರುವುದರಿಂದ, ಎಷ್ಟೇ ಮೊತ್ತದ ಟಿಕೆಟ್ ಬುಕ್ ಮಾಡಿದರೂ ಮರ್ಚೆಂಟ್ಗೆ ಗರಿಷ್ಠ ₹5 ಫ್ಲ್ಯಾಟ್ ಶುಲ್ಕ ಮಾತ್ರ ವಿಧಿಸಲಾಗುತ್ತದೆ.
ಉದಾಹರಣೆಗೆ, ₹10,000 ಮೌಲ್ಯದ ರೈಲು ಟಿಕೆಟ್ ಬುಕ್ ಮಾಡಿದರೂ ಮರ್ಚೆಂಟ್ ₹5 ಮಾತ್ರ ಪಾವತಿಸಬೇಕು. ಇದೇ ಮೊತ್ತವನ್ನು ಸಾಮಾನ್ಯ ಅಂಗಡಿಯಲ್ಲಿ ವಹಿವಾಟು ಮಾಡಿದರೆ ₹40ರವರೆಗೆ ಶುಲ್ಕ ಬರಬಹುದು.
ಈ ರಿಯಾಯಿತಿ ಶುಲ್ಕ ವ್ಯವಸ್ಥೆ ರೈಲ್ವೆಯ ಜೊತೆಗೆ ಇಂಧನ ಖರೀದಿ, ಟೆಲಿಕಾಂ ಬಿಲ್ಗಳು, ವಿಮಾ ಪ್ರೀಮಿಯಂಗಳು ಮತ್ತು ಇತರ ಅಗತ್ಯ ಸೇವೆಗಳಿಗೂ ಅನ್ವಯವಾಗಲಿದೆ.
ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕವಿಲ್ಲ
ರೈಲ್ವೇ ಜಾಲದಾದ್ಯಂತ ಪ್ರತಿದಿನ ಸಾವಿರಾರು ವಹಿವಾಟುಗಳು ನಡೆಯುತ್ತಿದ್ದು, ಈ ಶುಲ್ಕದ ಹೊರೆಯನ್ನು ಇಂಡಿಯನ್ ರೈಲ್ವೇಸ್, IRCTC ಮತ್ತು ಸಂಬಂಧಿತ ಬ್ಯಾಂಕ್ಗಳು ಹಂಚಿಕೊಳ್ಳಲಿವೆ.ಈ ವೆಚ್ಚವನ್ನು ಕಾನೂನುಬದ್ಧವಾಗಿ ಪ್ರಯಾಣಿಕರ ಮೇಲೆ ವರ್ಗಾಯಿಸಲು ಅವಕಾಶವಿಲ್ಲ. ಮತ್ತೊಂದೆಡೆ, ₹2,000ಕ್ಕಿಂತ ಕಡಿಮೆ ಮೊತ್ತದ ಸಾಮಾನ್ಯ UPI ವಹಿವಾಟುಗಳು ಹಿಂದಿನಂತೆಯೇ ಉಚಿತವಾಗಿ ಮುಂದುವರಿಯಲಿವೆ.
ಹೀಗಾಗಿ UPI ಹೊಸ ನಿಯಮದಿಂದ ರೈಲು ಪ್ರಯಾಣಿಕರ ಟಿಕೆಟ್ ದರದಲ್ಲಿ ನೇರ ಏರಿಕೆಯಾಗುವುದಿಲ್ಲ. ಸಾಮಾನ್ಯ ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ಡಿಜಿಟಲ್ ಪಾವತಿಗಳು ಮುಂದುವರಿಯಲಿವೆ.

