ನವದೆಹಲಿ: ಬಾಲಿವುಡ್ ನಟ ರಾಕೇಶ್ ಬೇಡಿ ಅವರು ತಮ್ಮ ವ್ಯಕ್ತಿತ್ವ ಹಕ್ಕುಗಳ (Personality Rights) ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬಾಲಿವುಡ್ನ ಹಿರಿಯ ನಟ ರಾಕೇಶ್ ಬೇಡಿ ಅವರು ತಮ್ಮ ಹೆಸರು, ಚಿತ್ರ, ಧ್ವನಿ, ವ್ಯಕ್ತಿತ್ವ ಸೇರಿದಂತೆ ವೈಯಕ್ತಿಕ ಗುರುತಿನ ಅಂಶಗಳನ್ನು ಅನುಮತಿಯಿಲ್ಲದೆ ಬಳಸುವುದನ್ನು ತಡೆಯುವಂತೆ ಕೋರಿ ವ್ಯಕ್ತಿತ್ವ ಹಕ್ಕುಗಳ (Personality Rights) ರಕ್ಷಣೆಗಾಗಿ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ವಿಚಾರಣೆಗಾಗಿ ಹೈಕೋರ್ಟ್ನ ಬೌದ್ಧಿಕ ಆಸ್ತಿ ವಿಭಾಗ (IPD)ದ ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗಿದೆ.
ಈ ಪ್ರಕರಣವನ್ನು ಬುಧವಾರ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅವರ ಮುಂದೆ ಪಟ್ಟಿ ಮಾಡಲಾಗಿತ್ತು. ಆದರೆ ಪ್ರಕರಣವನ್ನು ಪ್ರಸ್ತಾಪಿಸಿದ ಬಳಿಕ, ಬೌದ್ಧಿಕ ಆಸ್ತಿ ವಿಭಾಗ (IPD – Intellectual Property Division)ಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುವ ಮತ್ತೊಂದು ಪೀಠಕ್ಕೆ ಕಳುಹಿಸಲಾಗಿದೆ.
ಈ ಹಿಂದೆ ದೆಹಲಿ ಹೈಕೋರ್ಟ್ ಹಲವು ಖ್ಯಾತ ವ್ಯಕ್ತಿಗಳ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ಆದೇಶಗಳನ್ನು ನೀಡಿದೆ. ನಟಿ ಟಬು, ಕ್ರಿಕೆಟಿಗರಾದ ಅಭಿಷೇಕ್ ಶರ್ಮಾ ಮತ್ತು ಯುವರಾಜ್ ಸಿಂಗ್, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವ್ಯಕ್ತಿತ್ವ ಹಕ್ಕುಗಳಿಗೂ ನ್ಯಾಯಾಲಯ ರಕ್ಷಣೆ ನೀಡಿದೆ.
ಇದಲ್ಲದೆ ಉದ್ಯಮಿ ಅಮನ್ ಗುಪ್ತಾ, ತೆಲುಗು ನಟ ಅಲ್ಲು ಅರ್ಜುನ್, ಮಲಯಾಳಂ ನಟ ಮೋಹನ್ಲಾಲ್, ಆಧ್ಯಾತ್ಮಿಕ ಪ್ರವಚನಕಾರ ಅನಿರುದ್ಧಾಚಾರ್ಯ, ಗಾಯಕ ಜುಬಿನ್ ನೌಟಿಯಾಲ್, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹಾಗೂ ನಟರಾದ ಕಾಜೋಲ್ ದೇವಗನ್, ಆರ್. ಮಾಧವನ್ ಮತ್ತು ಜೂನಿಯರ್ ಎನ್ಟಿಆರ್ ಅವರ ವ್ಯಕ್ತಿತ್ವ ಹಕ್ಕುಗಳಿಗೂ ನ್ಯಾಯಾಲಯ ರಕ್ಷಣೆ ನೀಡಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಇದೇ ರೀತಿಯ ಪ್ರಕರಣವನ್ನು ದಾಖಲಿಸಿದ್ದಾರೆ. ಇದೇ ರೀತಿಯಾಗಿ ದೆಹಲಿ ಹೈಕೋರ್ಟ್ನ ವಿವಿಧ ಪೀಠಗಳು ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್, ತೆಲುಗು ನಟ ನಾಗಾರ್ಜುನ, ಬಾಲಿವುಡ್ ನಟರಾದ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ಆದೇಶಗಳನ್ನು ನೀಡಿವೆ.
ಗಮನಾರ್ಹವಾಗಿ, ಪತ್ರಕರ್ತ ಸುಧೀರ್ ಚೌಧರಿ ಅವರ ವ್ಯಕ್ತಿತ್ವ ಹಕ್ಕುಗಳಿಗೂ ನ್ಯಾಯಾಲಯ ರಕ್ಷಣೆ ನೀಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ತಪ್ಪುದಾರಿಗೆಳೆಯುವ ಹಾಗೂ AI ಮೂಲಕ ಸೃಷ್ಟಿಸಲಾಗಿದೆ ಎನ್ನಲಾದ ವಿಡಿಯೋಗಳು ಹರಿದಾಡುತ್ತಿರುವುದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದೇ ವೇಳೆ ಪಾಡ್ಕಾಸ್ಟರ್ ರಾಜ್ ಶಮಾಣಿ ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸುವ ಜಾನ್ ಡೋ ಆದೇಶವನ್ನೂ ನ್ಯಾಯಾಲಯ ನೀಡಿತ್ತು. ಭಾರತದಲ್ಲಿ, ವಿಶೇಷವಾಗಿ ಕಂಟೆಂಟ್ ಕ್ರಿಯೇಷನ್ ಕ್ಷೇತ್ರದಲ್ಲಿ ಅವರು ಪರಿಚಿತ ಮುಖವಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

