ನಾರ್ವೆಯ ಕರಾವಳಿ ತೀರದಲ್ಲಿ ಸುಮಾರು 4,000 ವರ್ಷಗಳ ಹಿಂದೆ ವಾಸಿಸುತ್ತಿದ್ದ ಪ್ರಾಚೀನ ಸಮುದಾಯ ಹಾಗೂ ಸ್ಕ್ಯಾಂಡಿನೇವಿಯಾ ಭಾಗದಲ್ಲಿ ಕೃಷಿ ಪದ್ಧತಿ ವಿಸ್ತರಣೆಯಾದ ಕಾಲಘಟ್ಟದ ಕುರಿತು ಮಹತ್ವದ ಮಾಹಿತಿ ಬಿಚ್ಚಿಡುವ ಅಪರೂಪದ ಪುರಾತತ್ವ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ನಾರ್ವೆಯ ಬರ್ಗೆನ್ ಸಮೀಪದ ವ್ಯಾಕ್ಸ್ಡಾಲ್ ಪ್ರದೇಶದಲ್ಲಿರುವ ‘ಸ್ಕಿಪ್ಸ್ಹೆಲ್ಲೆರೆನ್’ ಎಂಬ ನೈಸರ್ಗಿಕ ಕಲ್ಲಿನ ಗುಹೆಯಲ್ಲಿ (Rock shelter) ಪ್ರಾಚೀನ ಕಾಲದ ಮಗುವಿನ ಅಸ್ಥಿಪಂಜರದ ಕಾಣೆಯಾಗಿದ್ದ ಪ್ರಮುಖ ಭಾಗಗಳು ಮರು ಉತ್ಖನನದ ವೇಳೆ ಪತ್ತೆಯಾಗಿವೆ.
ಸ್ಕಿಪ್ಸ್ಹೆಲ್ಲೆರೆನ್ ಗುಹೆಯು ಪುರಾತತ್ವ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ಥಳವಾಗಿದ್ದು, ಇಲ್ಲಿ ಸುಮಾರು 7,500 ವರ್ಷಗಳಿಗೂ ಹೆಚ್ಚು ಕಾಲ ಮಾನವರು ವಾಸವಿದ್ದ ಕುರುಹುಗಳಿವೆ. 1931 ರಲ್ಲೇ ಇಲ್ಲಿ ಉತ್ಖನನ ನಡೆಸಲಾಗಿತ್ತಾದರೂ, ಇತ್ತೀಚೆಗೆ ‘ಇಂಡಿಕೇವ್’ (INDICAVE) ಯೋಜನೆಯ ಸಂಶೋಧಕರು ಹಳೆಯ ದಾಖಲೆಗಳನ್ನು ಮರುಪರಿಶೀಲಿಸಿದಾಗ, ಅಂದು ಮುಟ್ಟದೆ ಉಳಿದಿದ್ದ ಕೆಲ ಪ್ರಾಚೀನ ಪದರಗಳು ಬೆಳಕಿಗೆ ಬಂದವು. ಪ್ರಸ್ತುತ ನಡೆಸಲಾದ ಉತ್ಖನನದಲ್ಲಿ ಸುಮಾರು 40,000 ಪ್ರಾಣಿಗಳ ಮೂಳೆಗಳು, ಕಲ್ಲಿನ ಮತ್ತು ಮೂಳೆಯಿಂದ ಮಾಡಿದ ಪ್ರಾಚೀನ ಉಪಕರಣಗಳು ಹಾಗೂ ಮಡಕೆ ಚೂರುಗಳು ಪತ್ತೆಯಾಗಿವೆ. ಇವುಗಳಲ್ಲಿ ಕೆಲವು ಕಲಾಕೃತಿಗಳು 7,000 ವರ್ಷಗಳಷ್ಟು ಹಳೆಯದಾಗಿವೆ ಎಂದು ಬರ್ಗೆನ್ ವಿಶ್ವವಿದ್ಯಾಲಯ ತಿಳಿಸಿದೆ.
ಈ ಸಂಶೋಧನೆಯಲ್ಲಿ ಅತ್ಯಂತ ಅಚ್ಚರಿಯ ವಿಷಯವೆಂದರೆ ಈ ಮಗುವಿನ ಅಸ್ಥಿಪಂಜರದ ಹಿನ್ನೆಲೆ. 1955 ರಲ್ಲಿ ಜಾರ್ಗ್ ಡೇಮ್ರಿಂಗ್ ಬೆರ್ಗೆ ಎಂಬ 10 ವರ್ಷದ ಬಾಲಕಿ ಇದೇ ಗುಹೆಯಲ್ಲಿ ತಲೆಬುರುಡೆ, ದವಡೆ ಮತ್ತು ಪಕ್ಕೆಲುಬು ಸೇರಿದಂತೆ ಮಾನವ ಅವಶೇಷಗಳನ್ನು ಆಕಸ್ಮಿಕವಾಗಿ ಪತ್ತೆಹಚ್ಚಿದ್ದಳು. ಕಾರ್ಬನ್ ಡೇಟಿಂಗ್ ಪರೀಕ್ಷೆಯಲ್ಲಿ ಅದು 4,000 ವರ್ಷಗಳಷ್ಟು ಹಳೆಯ ಮಗುವಿನ ಮೂಳೆಗಳು ಎಂಬುದು ಸಾಬೀತಾಗಿತ್ತು. ಇದೀಗ 81 ವರ್ಷದ ವೃದ್ಧೆಯಾಗಿರುವ ಅದೇ ಬೆರ್ಗೆ ಅವರು, ಸಂಶೋಧನಾ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಅಂದು ತಮಗೆ ಅಸ್ಥಿಪಂಜರ ಸಿಕ್ಕಿದ್ದ ನಿಖರ ಜಾಗವನ್ನು ಗುರುತಿಸಲು ನೆರವಾಗಿದ್ದಾರೆ. ಆಕೆಯ ಮಾರ್ಗದರ್ಶನದ ನಂತರ ಅದೇ ಮಗುವಿಗೆ ಸೇರಿದ ಉಳಿದ ಅಸ್ಥಿಪಂಜರದ ಭಾಗಗಳು ಸಂಶೋಧಕರ ಕೈಸೇರಿವೆ.
ಕಲ್ಲಿನ ಯುಗದಲ್ಲಿ ಈ ನೈಸರ್ಗಿಕ ಗುಹೆಯನ್ನು ಕೇವಲ ವಾಸಸ್ಥಳವಾಗಿ ಮಾತ್ರವಲ್ಲದೆ ಸಮಾಧಿ ಸ್ಥಳವಾಗಿಯೂ ಬಳಸಲಾಗಿತ್ತು ಎಂಬುದಕ್ಕೆ ಈ ಅವಶೇಷಗಳು ಪುಷ್ಟಿ ನೀಡಿವೆ. ಉತ್ತರ ಯುರೋಪ್ನಲ್ಲಿ ಕೇವಲ ಬೇಟೆಯಾಡುವುದು ಮತ್ತು ಮೀನುಗಾರಿಕೆಯಿಂದ ಕೃಷಿ ಸಂಸ್ಕೃತಿಗೆ ಮಾನವ ಹೊರಳಿದ ಪರಿವರ್ತನೆಯ ಹಂತವನ್ನು ಅರಿಯಲು ಈ ಮಗುವಿನ ಪ್ರಾಚೀನ ಡಿಎನ್ಎ (Ancient DNA) ಹಾಗೂ ಐಸೊಟೋಪಿಕ್ ವಿಶ್ಲೇಷಣೆಗಳು ಅತ್ಯಂತ ನಿರ್ಣಾಯಕವಾಗಿವೆ. ಮಗುವಿನ ವಂಶಾವಳಿ, ಆಹಾರ ಪದ್ಧತಿ ಹಾಗೂ ಅಂದಿನ ಜನರ ವಲಸೆಯ ಇತಿಹಾಸವನ್ನು ಭೇದಿಸಲು ವಿಜ್ಞಾನಿಗಳು ಈ ಅವಶೇಷಗಳ ಜೈವಿಕ ಅಣು ಪರೀಕ್ಷೆಯನ್ನು ಆರಂಭಿಸಿದ್ದಾರೆ.

