ಬೆಂಗಳೂರು- ರಾಜ್ಯದಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯಡಿ 15,000 ಕಿ.ಮೀ ರಸ್ತೆಗಳನ್ನು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ ಹಣಕಾಸು ಇಲಾಖೆಯು ಆರ್ಥಿಕ ನೈಜತೆಯ ಆಧಾರದ ಮೇಲೆ ತಡೆ ಒಡ್ಡಿದೆ.
ರಾಜ್ಯದ ಪ್ರಸ್ತುತ ಆರ್ಥಿಕ ಸ್ಥಿತಿಗತಿ ಮತ್ತು ಬೊಕ್ಕಸದ ಮೇಲಿನ ಒತ್ತಡವನ್ನು ಪರಿಗಣಿಸಿ, ಹೊಸ ಯೋಜನೆಗಳ ಅನುಷ್ಠಾನಕ್ಕೆ ಸದ್ಯಕ್ಕೆ ನಿಲುವು ತಾಳುವಂತೆ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.
ಅನುದಾನದ ಕೊರತೆ ಮತ್ತು ಸಾಲದ ಸಮಸ್ಯೆಗಳು
ಅನುದಾನದ ಕೊರತೆ:
2026-27 ಹಾಗೂ 2027-28ನೇ ಸಾಲಿಗೆ ಸುಮಾರು 1000 ಕೋಟಿ ರೂಪಾಯಿಗಳ ವೆಚ್ಚದ ಬೇಡಿಕೆಯನ್ನು ಮುಂದಿಡಲಾಗಿದ್ದರೂ, ಬಜೆಟ್‌ನಲ್ಲಿ ಇದಕ್ಕೆ ತಕ್ಕಂತೆ ಅನುದಾನ ಮೀಸಲಿಟ್ಟಿಲ್ಲ. ಇದು ವಿತ್ತೀಯ ನಿರ್ವಹಣೆ ಮತ್ತು ಹಣದ ಹರಿವಿನ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ.
ಸಾಲದ ಮಿತಿ ಮುಕ್ತಾಯ:
ರಾಜ್ಯ ಸರ್ಕಾರವು ಈಗಾಗಲೇ ತನ್ನ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ತಲುಪಿದೆ. ಪರಿಣಾಮವಾಗಿ, ಹೊಸ ಯೋಜನೆಗಳಿಗಾಗಿ ಮಾರುಕಟ್ಟೆಯಿಂದ ಸಾಲ ಪಡೆಯುವುದಕ್ಕೆ ಕಠಿಣ ಆರ್ಥಿಕ ನಿಯಮಗಳ ಅಡಳಿತಾತ್ಮಕ ತೊಡಕುಗಳಿವೆ.
ಬಾಕಿ ಬಿಲ್ ಹಾಗೂ ಕಾಮಗಾರಿಗಳ ಭಾರ: ರಾಜ್ಯದಲ್ಲಿ ಈಗಾಗಲೇ ಸುಮಾರು ಎರಡು ಲಕ್ಷ ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಬಾಕಿ ಇವೆ. ಇದರೊಂದಿಗೆ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಒಟ್ಟು 36,136 ಕೋಟಿ ರೂಪಾಯಿಗಳ ಬಿಲ್ ಪಾವತಿಸುವುದು ಬಾಕಿ ಉಳಿದಿದೆ.
ಇತರ ಆರ್ಥಿಕ ಹೊಣೆಗಾರಿಕೆಗಳು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬಜೆಟ್ ಹಂಚಿಕೆಯನ್ನು ಮೀರಿ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಕೃಷಿ ಪಂಪ್‌ಸೆಟ್‌ಗಳ ಸಹಾಯಧನ ಬಾಬ್ತು 4 ರಿಂದ 5 ಸಾವಿರ ಕೋಟಿ ರೂಪಾಯಿ ನೀಡುವುದು ಬಾಕಿ ಉಳಿದಿದೆ.
ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ಮೇಲಿನ ಪರಿಣಾಮ
ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ಮೇಲಿನ ಪರಿಣಾಮ
ಹೊಸ ಯೋಜನೆಗಳಿಗೆ ಅನುದಾನ ಒದಗಿಸಲು ಮುಂದಾದರೆ, ಈಗಾಗಲೇ ಬಜೆಟ್‌ನಲ್ಲಿ ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿರುವ ಅನುದಾನವನ್ನು ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಇದರಿಂದ ಚಾಲ್ತಿಯಲ್ಲಿರುವ ಹಲವು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳುವ ಅಥವಾ ವಿಳಂಬವಾಗುವ ಆತಂಕವಿದೆ.
ಅಲ್ಲದೆ, ರಾಜ್ಯದ ರಸ್ತೆ ಸಾರಿಗೆ ನಿಗಮಗಳು, ನೀರಾವರಿ ನಿಗಮ ಹಾಗೂ ಎಸ್ಕಾಂ (ವಿದ್ಯುತ್ ಸರಬರಾಜು ಕಂಪನಿಗಳು) ಸಿಬ್ಬಂದಿಗೆ ವೇತನ ಪಾವತಿಸಲು ಸಹ ಹಣಕಾಸಿನ ಕೊರತೆ ಎದುರಾಗಿದ್ದು, ಸಾರ್ವಜನಿಕ ವಲಯದ ಮಾಸಿಕ ಪಿಂಚಣಿ ಪಾವತಿಯಲ್ಲೂ ವಿಳಂಬವಾಗುತ್ತಿರುವುದನ್ನು ಹಣಕಾಸು ಇಲಾಖೆ ತನ್ನ ಟಿಪ್ಪಣಿಯಲ್ಲಿ ಕಳವಳದಿಂದ ಉಲ್ಲೇಖಿಸಿದೆ.
ಹೆಚ್ಚುವರಿ ಸಂಪನ್ಮೂಲಗಳ ಕ್ರೋಡೀಕರಣ ಹಾಗೂ ಅಸ್ತಿತ್ವದಲ್ಲಿರುವ ಅನುದಾನಗಳ ಮರುಹಂಚಿಕೆ (Re-appropriation) ಸಮರ್ಪಕವಾಗಿ ನಡೆಯದ ಹೊರತು, ಬೊಕ್ಕಸದ ಮೇಲೆ ಹೆಚ್ಚಿನ ಹೊರೆ ಹೊರುವ ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವುದು ಕಷ್ಟಸಾಧ್ಯ ಎಂಬುದು ಇಲಾಖೆಯ ಸ್ಪಷ್ಟ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ, ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಹೊಸ ಯೋಜನೆಗಳ ಜಾರಿಗೆ ಸ್ವಲ್ಪ ಸಮಯ ಕಾಯುವುದು ಉತ್ತಮ ಎಂದು ತಜ್ಞರು ಮತ್ತು ಆಡಳಿತಾತ್ಮಕ ವಲಯದಲ್ಲಿ ಚರ್ಚೆಯಾಗುತ್ತಿದೆ.

