ಬಿಸಿ ಬಿಸಿ ಚಹಾದ ಪರಿಮಳದ ಜೊತೆ ಕೈಯಲ್ಲಿ ಗರಿಗರಿಯಾದ ರಸ್ಕ್ ತುಂಡು… ಈ ಕಾಂಬಿನೇಷನ್ ಭಾರತದ ಕೋಟ್ಯಂತರ ಜನರ ದಿನಚರಿಯ ಒಂದು ಭಾಗವಾಗಿದೆ. ಬೀದಿ ಬದಿಯ ಚಹಾ ಅಂಗಡಿಯಿಂದ ಹಿಡಿದು ಹಳೆಯ ಬೇಕರಿಗಳವರೆಗೆ ರಸ್ಕ್ ಬಹುತೇಕ ಎಲ್ಲೆಡೆ ಕಾಣಸಿಗುತ್ತದೆ.
ಬಂಗಾರದ ಬಣ್ಣಕ್ಕೆ ತಿರುಗಿದ ಈ ಗರಿಗರಿ ತುಂಡನ್ನು ಬಿಸಿ ಚಹಾದಲ್ಲಿ ಅದ್ದಿ ತಿನ್ನುವ ಅನುಭವವೇ ವಿಭಿನ್ನ. ಆದರೆ ಸಾಮಾನ್ಯ ಬ್ರೆಡ್ ಅನ್ನು ಎರಡು ಬಾರಿ ಬೇಯಿಸಿ ತಯಾರಿಸುವ ಈ ರಸ್ಕ್ ಭಾರತದಲ್ಲಿ ಇಷ್ಟೊಂದು ಜನಪ್ರಿಯವಾಗಿದ್ದು ಹೇಗೆ? ಇದರ ಹಿಂದೆ ಶತಮಾನಗಳ ಇತಿಹಾಸವೇ ಇದೆ.
ರಸ್ಕ್ ಕಥೆ ಎಲ್ಲಿಂದ ಆರಂಭವಾಯಿತು?
ರಸ್ಕ್ನ ಇತಿಹಾಸವು ಹಲವು ಶತಮಾನಗಳು, ದೇಶಗಳು ಮತ್ತು ಸಾಮ್ರಾಜ್ಯಗಳನ್ನು ದಾಟಿ ಬಂದಿದೆ. ಇಂದು ಇದು ಭಾರತೀಯ ಚಹಾದ ಅವಿಭಾಜ್ಯ ಸಂಗಾತಿಯಂತೆ ಕಂಡರೂ, ಇದರ ಮೂಲವು ಭಾರತದ ಹೊರಗಿನ ಪ್ರದೇಶಗಳಿಗೂ ಸಂಬಂಧಿಸಿದೆ.
ರಸ್ಕ್ನ ಆರಂಭಿಕ ರೂಪಗಳು ಪರ್ಷಿಯಾ ಪ್ರದೇಶದಲ್ಲಿ ಕಾಣಿಸಿಕೊಂಡಿರಬಹುದು ಎಂದು ನಂಬಲಾಗಿದೆ. ಗೋಧಿ ಬೆಳೆಯುವಿಕೆ ಹೆಚ್ಚಾದ ನಂತರ, ಬ್ರೆಡ್ ಅನ್ನು ಹೆಚ್ಚು ಕಾಲ ಸಂರಕ್ಷಿಸಿಡಲು ಎರಡು ಬಾರಿ ಬೇಯಿಸುವ ಪದ್ಧತಿ ಬಳಕೆಗೆ ಬಂದಿತ್ತು. ಇದೇ ರೀತಿಯ ಸಂರಕ್ಷಿತ, ಗರಿಗರಿ ಬ್ರೆಡ್ ನಂತರ ವಿವಿಧ ದೇಶಗಳಲ್ಲಿ ಬೇರೆ ಬೇರೆ ರೂಪಗಳನ್ನು ಪಡೆದುಕೊಂಡಿತು.
ಭಾರತಕ್ಕೆ ಬಂದ ಬಳಿಕ ಹಲವು ರುಚಿಗಳಾದ ರಸ್ಕ್
ಭಾರತಕ್ಕೆ ರಸ್ಕ್ ಪರಿಚಯವಾದ ನಂತರ ಸ್ಥಳೀಯ ಬೇಕರಿಗಳು ತಮ್ಮದೇ ಆದ ರೀತಿಯಲ್ಲಿ ಪ್ರಯೋಗಗಳನ್ನು ಆರಂಭಿಸಿದವು. ಇದರ ಪರಿಣಾಮವಾಗಿ ಏಲಕ್ಕಿ ರಸ್ಕ್, ತುಪ್ಪದ ರಸ್ಕ್ ಮತ್ತು ಕೇಕ್ ರಸ್ಕ್ ಸೇರಿದಂತೆ ಹಲವು ಬಗೆಯ ರಸ್ಕ್ಗಳು ಜನಪ್ರಿಯವಾದವು.
ಪುಣೆ ಮತ್ತು ಮುಂಬೈ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರಸ್ಕ್ ಅನ್ನು ಸರಳವಾಗಿ ‘ಟೋಸ್ಟ್’ ಎಂದೂ ಕರೆಯಲಾಗುತ್ತದೆ. ಉಳಿದ ಬ್ರೆಡ್ ತುಂಡುಗಳನ್ನು ಮತ್ತೊಮ್ಮೆ ಬೇಯಿಸಿ ಗರಿಗರಿಯಾಗಿ ತಯಾರಿಸುವ ವಿಧಾನವೂ ಇಲ್ಲಿ ಕಂಡುಬರುತ್ತದೆ.
ರಸ್ಕ್ ಎಲ್ಲ ವರ್ಗದ ಜನರ ತಿಂಡಿಯಾಗಿದ್ದು ಹೇಗೆ?
ರಸ್ಕ್ ಜನಪ್ರಿಯವಾಗಲು ಅದರ ಕಡಿಮೆ ಬೆಲೆ ಮತ್ತು ಹೆಚ್ಚು ದಿನ ಕೆಡದೆ ಉಳಿಯುವ ಗುಣ ಪ್ರಮುಖ ಕಾರಣಗಳಾಗಿವೆ.
ಇದನ್ನು ತಯಾರಿಸಿದ ಬಳಿಕ ಸಾಮಾನ್ಯವಾಗಿ ಫ್ರಿಜ್ನಲ್ಲಿ ಇಡುವ ಅಗತ್ಯವಿಲ್ಲ. ವಿಶೇಷ ಪ್ಯಾಕೇಜಿಂಗ್ ಕೂಡ ಅಗತ್ಯವಿಲ್ಲ. ಹೀಗಾಗಿ ಭಾರತದ ವಿವಿಧ ನಗರಗಳು ಮತ್ತು ಪಟ್ಟಣಗಳ ಬೇಕರಿಗಳು ತಮ್ಮದೇ ಆದ ರಸ್ಕ್ ತಯಾರಿಸಲು ಆರಂಭಿಸಿದವು.
20ನೇ ಶತಮಾನದ ಮಧ್ಯಭಾಗದ ವೇಳೆಗೆ ರಸ್ಕ್ ದೇಶದ ಹಲವು ಭಾಗಗಳಲ್ಲಿ ಸಾಮಾನ್ಯ ತಿಂಡಿಯಾಗಿ ಬೆಳೆದಿತ್ತು. ಪ್ರಾದೇಶಿಕ ರುಚಿಗೆ ಅನುಗುಣವಾಗಿ ಅದರ ರೂಪ ಬದಲಾದರೂ, ರಸ್ಕ್ ಮಾತ್ರ ವಿವಿಧ ಪ್ರದೇಶಗಳು ಮತ್ತು ಸಾಮಾಜಿಕ ವರ್ಗಗಳನ್ನು ದಾಟಿ ಜನಪ್ರಿಯವಾಯಿತು.ಇಂದಿಗೂ ಶಾಲಾ ಮಕ್ಕಳು, ಯುವಕರು ಮತ್ತು ಹಿರಿಯರು ಸೇರಿದಂತೆ ಹಲವು ವಯೋಮಾನದವರು ರಸ್ಕ್ ಅನ್ನು ಇಷ್ಟಪಡುತ್ತಾರೆ.
ಚಹಾದ ಜೊತೆ ರಸ್ಕ್ ಏಕೆ ಇಷ್ಟ?
ಭಾರತದಲ್ಲಿ ಚಹಾ ಸೇವನೆಯ ಸಂಸ್ಕೃತಿ ಬೆಳೆಯುತ್ತಿದ್ದಂತೆ ರಸ್ಕ್ನ ಜನಪ್ರಿಯತೆಯೂ ಹೆಚ್ಚಾಯಿತು.20ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಚಹಾ ಸೇವನೆಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆದವು. ಸಿಹಿ ಮತ್ತು ಹಾಲು ಸೇರಿಸಿದ ಚಹಾ ಜನಪ್ರಿಯವಾಗತೊಡಗಿತು. ನಂತರ ಶುಂಠಿ, ಏಲಕ್ಕಿ, ಲವಂಗ ಸೇರಿದಂತೆ ವಿವಿಧ ಮಸಾಲೆಗಳನ್ನು ಸೇರಿಸಿದ ಕಡಕ್ ಚಹಾ ಕೂಡ ಭಾರತೀಯರ ನೆಚ್ಚಿನ ಪಾನೀಯವಾಯಿತು.
ಇಂತಹ ಬಿಸಿ ಚಹಾದೊಂದಿಗೆ ರಸ್ಕ್ ಉತ್ತಮ ಸಂಗಾತಿಯಾಯಿತು. ಸಾಮಾನ್ಯ ಬಿಸ್ಕತ್ಗಳಂತೆ ಚಹಾದಲ್ಲಿ ಅದ್ದಿದಾಗ ತಕ್ಷಣ ಕರಗಿಹೋಗದೆ, ರಸ್ಕ್ ಸ್ವಲ್ಪ ಸಮಯ ಗಟ್ಟಿಯಾಗಿ ಉಳಿಯುತ್ತದೆ. ಹೀಗಾಗಿ ಚಹಾದ ರುಚಿಯನ್ನು ಹೀರಿಕೊಂಡ ಗರಿಗರಿ ರಸ್ಕ್ ತಿನ್ನುವುದು ವಿಶೇಷ ಅನುಭವವಾಯಿತು.
ಚಹಾದಲ್ಲಿ ಅದ್ದಿ ತಿನ್ನುವ ಅಭ್ಯಾಸ
ರಸ್ಕ್ ಅನ್ನು ಚಹಾದಲ್ಲಿ ಅದ್ದಿ ತಿನ್ನುವುದು ಇಂದು ಅನೇಕರ ದೈನಂದಿನ ಅಭ್ಯಾಸವಾಗಿದೆ. ಇದಕ್ಕಾಗಿ ಯಾವುದೇ ವಿಶೇಷ ತಯಾರಿ ಬೇಕಾಗಿಲ್ಲ. ಒಂದು ಕಪ್ ಚಹಾ ಮತ್ತು ಒಂದೆರಡು ರಸ್ಕ್ ತುಂಡುಗಳು ಸಾಕು.
ಬೆಳಗಿನ ಉಪಾಹಾರ, ಸಂಜೆ ಚಹಾ ಅಥವಾ ಕೆಲಸದ ನಡುವಿನ ಸಣ್ಣ ವಿರಾಮ—ಯಾವ ಸಂದರ್ಭದಲ್ಲಾದರೂ ರಸ್ಕ್ ಸುಲಭವಾಗಿ ಹೊಂದಿಕೊಳ್ಳುತ್ತದೆ.
ಭಾರತ ಮಾತ್ರವಲ್ಲ, ಹಲವು ದೇಶಗಳಲ್ಲೂ ರಸ್ಕ್ ರೀತಿಯ ತಿಂಡಿಗಳಿವೆ
ಎರಡು ಬಾರಿ ಬೇಯಿಸಿದ ಗರಿಗರಿ ಬ್ರೆಡ್ ರೀತಿಯ ತಿಂಡಿಗಳು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ‘Beskuit’, ನೆದರ್ಲ್ಯಾಂಡ್ಸ್ನಲ್ಲಿ ‘Beschuit’ ಸೇರಿದಂತೆ ವಿವಿಧ ದೇಶಗಳಲ್ಲಿ ಇದೇ ರೀತಿಯ ಸಂಪ್ರದಾಯಿಕ ತಿಂಡಿಗಳು ಕಂಡುಬರುತ್ತವೆ. ಇರಾನ್ನಲ್ಲಿಯೂ ಹಣ್ಣುಗಳನ್ನು ಬಳಸಿದ ರಸ್ಕ್ನ ವಿಭಿನ್ನ ರೂಪಗಳಿವೆ.
ಸರಳತೆಯಲ್ಲೇ ರಸ್ಕ್ನ ವಿಶೇಷತೆ
ಟುಟ್ಟಿ ಫ್ರುಟ್ಟಿ ತುಂಡುಗಳೊಂದಿಗೆ ಸಿಗುವ ರಸ್ಕ್ ಆಗಿರಲಿ ಅಥವಾ ಯಾವುದೇ ಅಲಂಕಾರವಿಲ್ಲದ ಸರಳ ರಸ್ಕ್ ಆಗಿರಲಿ, ಇದರ ಜನಪ್ರಿಯತೆಗೆ ಮುಖ್ಯ ಕಾರಣ ಅದರ ಸರಳ ರುಚಿ, ಗರಿಗರಿತನ ಮತ್ತು ಚಹಾದೊಂದಿಗೆ ಹೊಂದಿಕೊಳ್ಳುವ ಗುಣ.
ಹೀಗಾಗಿ ಚಹಾದ ಜೊತೆ ರಸ್ಕ್ ತಿನ್ನುವ ಅಭ್ಯಾಸ ಕೇವಲ ಒಂದು ತಿಂಡಿ ತಿನ್ನುವ ಪದ್ಧತಿಯಲ್ಲ. ಇದು ಭಾರತದ ಚಹಾ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಹಲವು ತಲೆಮಾರುಗಳ ಹಳೆಯ ಆಹಾರ ಪರಂಪರೆಯ ಒಂದು ಭಾಗವಾಗಿದೆ.

