ಹಾಸನ: ಬಲವಂತವಾಗಿ ಹಣ ಕೇಳುವುದು ತಪ್ಪು, ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡುವುದು ಸಾರ್ವಜನಿಕರ ಧರ್ಮ ಎಂದು ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ನಂತರ ಸಚಿವರು ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಸಕಲೇಶಪುರದಲ್ಲಿ ಶನಿವಾರ ನಡೆದ ಪ್ರಜಾ ಸೇವಾ ಆಂದೋಲನ ಸಭೆಯಲ್ಲಿ ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ
ಈ ವೇಳೆ ಪ್ರತಿಕ್ರಿಸಿದ ಸಚಿವ ಶಿವಲಿಂಗೇಗೌಡ, ಅಧಿಕಾರಿಗಳು ಕೆಲಸ ಮಾಡಿಕೊಟ್ಟಿದ್ದಕ್ಕೆ ಗೌರವಯುತವಾಗಿ ಕಾಣಿಕೆ ನೀಡುವುದು ಸಾರ್ವಜನಿಕರ ಧರ್ಮ ಎಂದು ಹೇಳಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಸಭೆಯಲ್ಲಿದ್ದ ಕೆಲವರು ಸಚಿವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಅಸಮಾಧಾನಗೊಂಡ ಸಚಿವರು, ಹೇಳಿಕೆಯನ್ನು ದೊಡ್ಡದು ಮಾಡಬೇಡಿ, ಸಭೆಗೆ ಅಡ್ಡಿಪಡಿಸಬಾರದು ಎಂದು ಹೇಳಿದ್ದಾರೆ.
ಆಕ್ಷೇಪಿಸಿದ ವ್ಯಕ್ತಿ ಆಲೂರಿನವರು ಎಂದು ಸಭೆಯಲ್ಲಿದ್ದವರು ಹೇಳಿದಾಗ ನಿಮ್ಮೂರಿಗೆ ಬರುತ್ತೇನೆ, ನಿಮ್ಮ ಸಮಸ್ಯೆಯನ್ನು ಹೇಳು, ಇಲ್ಲಿನ ಸಭೆಗೆ ಅಡ್ಡಿಪಡಿಸಬೇಡ ಎಂದು ದಬಾಯಿಸಿ ಅವರನ್ನು ಸಭೆಯಿಂದ ಹೊರಗೆ ಕಳುಹಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ವೇಳೆ ಪ್ರಶ್ನೆ ಮಾಡಿದ ವ್ಯಕ್ತಿ ಸರ್ಕಾರಿ ಅಧಿಕಾರಿಗಳಿಗೆ ಗೌರವಯುತವಾಗಿ ಏಕೆ ನೀಡಬೇಕು ಎಂದು ಪ್ರಶ್ನೆ ಮುಂದುವರೆಸಿದ್ದಾರೆ. ಆಗ ಸಚಿವರ ಸೂಚನೆಯಂತೆ ವ್ಯಕ್ತಿಯನ್ನು ಪೊಲೀಸರು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ.
ತಮ್ಮ ಹೇಳಿಕೆ ಗೊಂದಲ ಸೃಷ್ಟಿಸಿದ ಬಗ್ಗೆ ಸ್ಪಷ್ಟನೆ ನೀಡಿದ ಶಿವಲಿಂಗೇಗೌಡ, ಅಧಿಕಾರಿಗಳಿಗೆ ಲಂಚ ಕೊಡಿ ಎಂದು ನಾನು ಹೇಳಿಲ್ಲ. ಸಚಿವನಾಗಿ ನನಗೂ ಜವಾಬ್ದಾರಿ ಇದೆ. ಗೌರವ ಕೊಡಿ ಎಂದು ಹೇಳಿದ್ದನ್ನು ತಿರುಚಿ ದುರುದ್ದೇಶದಿಂದ ಕೆಲವರು ಗೊಂದಲ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಸಚಿವರ ಹೇಳಿಕೆ ವಿಡಿಯೋ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷಗಳು ಸಚಿವರನ್ನು ತಾರಾಟೆಗೆ ತೆಗೆದುಕೊಂಡಿವೆ. ಅಧಿಕಾರಿಗಳಿಗೆ ಗೌರವಯುತವಾಗಿ ಕೊಡಿ ಎಂದು ಹೇಳುವ ಮೂಲಕ ಸಚಿವರು ಲಂಚ ಆಮಿಷಕ್ಕೆ ಪ್ರೋತ್ಸಾಹ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ತರಾಟೆ
ಅಧಿಕಾರಿಗಳು ಕೆಲಸ ಮಾಡಿಕೊಟ್ಟರೆ ಲಂಚ ಕೊಡೋದು ಧರ್ಮವಂತೆ! ಸಚಿವ ಶಿವಲಿಂಗೇಗೌಡರ ಬಾಯಲ್ಲೇ ಲಂಚಕೋರ ಕಾಂಗ್ರೆಸ್ ಸರ್ಕಾರದ ಅಸಲಿತನ ಬಯಲಾಗಿದೆ. ಲಂಚ ಕೊಡೋದು ಧರ್ಮ ಎಂದ ಸಚಿವರಿಗೆ ಜನರೇ ಕ್ಲಾಸ್ ತಗೆದುಕೊಂಡಿದ್ದಾರೆ.
ದಿನಬೆಳಗಾದರೆ ವಸೂಲಿ ದಂಧೆ ನಡೆಸುವುದನ್ನೇ ಸರ್ಕಾರ ನಡೆಸೋದು ಅಂತ ತಿಳಿದುಕೊಂಡಿದ್ದಾರೆ. ಜನಸಾಮಾನ್ಯರ ಜೇಬಿಗೆ ಕನ್ನ ಹಾಕುವುದನ್ನೇ ಧರ್ಮ ಎಂದು ಸಾರುತ್ತಿರುವ ಈ ವಸೂಲಿ ಕಾಂಗ್ರೆಸ್‌ಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಸಾರ್ವಜನಿಕರ ಸೇವೆಯನ್ನೇ ಪರಮ ಕರ್ತವ್ಯವಾಗಿ ಕೆಲಸ ಮಾಡಬೇಕಾದ ಅಧಿಕಾರಿಗಳಿಗೆ ಕೆಲಸ ಮಾಡಿಕೊಟ್ಟ ನಂತರ “ಜನ ಗೌರವಯುತವಾಗಿ ಲಂಚ ನೀಡಿ” ಎನ್ನುವುದೇ ಕಾಂಗ್ರೆಸ್ ಸರ್ಕಾರದ ಪ್ರಜಾ ಸೇವೆಯೇ? ಲಂಚಕ್ಕೆ ಸಮರ್ಥನೆ, ಜನರಿಗೆ ಶೋಷಣೆ ಇದೇ ಕಾಂಗ್ರೆಸ್ ಆಡಳಿತದ ಕೊಡುಗೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

