ಹಾಸನ: ನಿಮ್ಮ ಧ್ವನಿಯಾಗಿ ನಿಲ್ಲಲು ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಎಪಿಎಂಸಿ ಯಾರ್ಡ್ ಅವರಣದಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಪ್ರಮುಖಾಂಶಗಳು ಇಂತಿವೆ:
• ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಅಧಿಸೂಚನೆ ಹೊರಡಿಸಿ ಸೆಪ್ಟೆಂಬರ್ 27ರ ಒಳಗೆ ಉತ್ತರ ನೀಡುವಂತೆ ಸೂಚಿಸಿದ್ದು, ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನಿಸಿದ ಬಳಿಕ ಶಾಸಕರು, ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರ ಬಳಿಗೆ ಕರೆದೊಯ್ದು ರೈತರ ಅಭಿಪ್ರಾಯ ಮುಟ್ಟಿಸುತ್ತೇವೆ.
• ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ವರದಿ ತಿರಸ್ಕರಿಸಿದ್ದೆವು; ಈ ಮಧ್ಯೆ ಅಕ್ಕಪಕ್ಕದ ರಾಜ್ಯಗಳು ಕೆಲವು ಕ್ರಮಗಳ ಮೂಲಕ ತಿದ್ದುಪಡಿ ತಂದಿದ್ದು, ನಿಮ್ಮ ಪರವಾಗಿ ಹಾಗೂ ನಿಮ್ಮ ಧ್ವನಿಯಾಗಿ ನಿಲ್ಲಲು ನಮ್ಮ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ.
• ಕೆಲವರು ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿ ಎಂದು ಸಲಹೆ ನೀಡಿದ್ದಾರೆ, ಆದರೆ ಹಾಗೆ ಮಾಡಿದರೆ ಏನಾಗುತ್ತದೆ ಎಂದು ಆಲೋಚಿಸಬೇಕು; ಭೌತಿಕ ಸಮೀಕ್ಷೆ, ಗ್ರಾಮ ಸಭೆ, ಸೂಕ್ಷ್ಮ ಪರಿಸರ ವಲಯ, ವಲಯ ನಿರ್ವಹಣೆ ಯೋಜನೆ ಹಾಗೂ ಭೂಮಿ ಹಕ್ಕನ್ನು ಕೇಂದ್ರವು ರಾಜ್ಯಕ್ಕೆ ನೀಡಬೇಕೆಂಬ ಸಲಹೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುವುದು.
ರೈತರಿಗೆ ರಕ್ಷಣೆ, ಅರಣ್ಯ ಹಕ್ಕು ಹಾಗೂ ಭೂಮಿ ವಿಲೇವಾರಿ:
• ಅರಣ್ಯ ಅಧಿಕಾರಿಗಳು ರೈತರಿಗೆ ನೋಟೀಸ್ ಕೊಟ್ಟು ಕಿರುಕುಳ ನೀಡಬಾರದು ಮತ್ತು ಜನ ಭಯದ ವಾತಾವರಣದಲ್ಲಿ ಬದುಕಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಲಾಗುವುದು.
• ಅರಣ್ಯ ಹಕ್ಕು ಕಾಯ್ದೆಯಲ್ಲಿ ಬುಡಕಟ್ಟು ಜನರಿಗೆ 25 ವರ್ಷ ಹಾಗೂ ಇತರರಿಗೆ 75 ವರ್ಷಗಳ ಮಿತಿ ಇದ್ದು, ಮುಂದಿನ ದಿನಗಳಲ್ಲಿ ಎಲ್ಲರಿಗೂ 25 ವರ್ಷಗಳ ಮಿತಿ ನಿಗದಿ ಮಾಡಲು ತೀರ್ಮಾನಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು; ಆಗ ಬಿಜೆಪಿ ಹಾಗೂ ಜೆಡಿಎಸ್ ಸಂಸದರು, ನಾಯಕರು ಯಾವ ರೀತಿ ಸಹಕಾರ ನೀಡುತ್ತಾರೆ ನೋಡೋಣ.
• ಅಕ್ರಮ ಸಕ್ರಮ, ಬಗರ್ ಹುಕ್ಕುಂ ಹಾಗೂ ಅರಣ್ಯ ಹಕ್ಕು ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ.
ಸರ್ಕಾರದ ಬದ್ಧತೆ ಹಾಗೂ ಅಕ್ರಮ ಬಂದೂಕುಗಳ ಕುರಿತ ಎಚ್ಚರಿಕೆ:
• ಬೇರೆ ಪಕ್ಷದವರು ಭಾವನೆ ಮೇಲೆ ರಾಜಕಾರಣ ಮಾಡಿದರೆ, ನಾನು ಜನರ ಬದುಕಿನ ಮೇಲೆ ರಾಜಕಾರಣ ಮಾಡಲು ಹಾಗೂ ನಿಮ್ಮ ನೋವು, ಸಮಸ್ಯೆ ಆಲಿಸಲು ಬಂದಿದ್ದೇನೆ; ವಿಧಾನ ಸೌಧದಲ್ಲಿ ಚರ್ಚಿಸುವ ಮುನ್ನ ನಮ್ಮ ಪಕ್ಷದ ಶಾಸಕರಿಲ್ಲದ ಕ್ಷೇತ್ರಗಳ ಜನರ ಅಭಿಪ್ರಾಯ ಸಂಗ್ರಹಿಸಲು ಬಂದಿರುವೆ.
• ರೈತರು ತಲೆಮಾರುಗಳಿಂದ ತಮ್ಮ ಭೂಮಿಯನ್ನು ಕಾಪಾಡಿಕೊಂಡು ಬರುತ್ತಿದ್ದು, ಹೊಸದಾಗಿ ಯಾರೂ ಒತ್ತುವರಿ ಮಾಡಬಾರದು.
• ಪರವಾನಗಿ ಇಲ್ಲದೆ ಅಕ್ರಮವಾಗಿ ಬಂದೂಕು ಇಟ್ಟುಕೊಂಡಿರುವವರು ನವೆಂಬರ್ 1ರ ಒಳಗೆ ಸರ್ಕಾರಕ್ಕೆ ಒಪ್ಪಿಸಬೇಕು; ಅಗತ್ಯವಿದ್ದರೆ ಸರ್ಕಾರವೇ ಪರವಾನಗಿ ನೀಡಲಿದ್ದು, ಅಕ್ರಮವಾಗಿ ಇಟ್ಟುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಶಿವಲಿಂಗೇಗೌಡ, ಸಂಸದರಾದ ಶ್ರೇಯಸ್ ಪಟೇಲ್, ಜಿ.ಸಿ. ಚಂದ್ರಶೇಖರ್, ಶಾಸಕರಾದ ಸಿಮೆಂಟ್ ಮಂಜು, ಟಿ.ಡಿ. ರಾಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಜಿಲ್ಲಾಧಿಕಾರಿ ಲತಾ ಕುಮಾರಿ, ಮಾಜಿ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಬಿ.ಆರ್. ಗುರುದೇವ್, ಹೆಚ್.ಎಂ. ವಿಶ್ವನಾಥ್, ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

