ಬೆಂಗಳೂರು: ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನಸಂದಣಿಯ ನಡುವೆ ಸಿಲುಕಿ ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ. ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ದೃಶ್ಯ ನೋಡಿ ಗಾಬರಿಯಾಯಿತು, ತೀವ್ರ ನೋವಾಯಿತು ಎಂದು ಹೇಳಿದ್ದಾರೆ.
ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಪ್ರತಿಭಟನಾ ಮೆರವಣಿಗೆ ನಡೆಯುವ ವೇಳೆ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಜನಸಂದಣಿಯ ನಡುವೆ ಸಿಲುಕಿ ನಿಯಂತ್ರಣ ತಪ್ಪುವಂತಾಗಿದ್ದ ದೃಶ್ಯ ಚರ್ಚೆಗೆ ಕಾರಣವಾಗಿದೆ.
ಈ ದೃಶ್ಯ ನೋಡಿ ಗಾಬರಿಯಾಯಿತು!, ತೀವ್ರ ನೋವಾಯಿತು. ಇದು ತಮಾಷೆ ಆಡುವ ವಿಷಯವಲ್ಲ. ಕಾಳಜಿ ಇಲ್ಲದ, ಸ್ಪಂದನೆ ಇಲ್ಲದ ನಾಯಕ, ತಂಡವನ್ನು ಲೀಡ್ ಮಾಡಿದರೆ, ಏನಾಗುತ್ತದೆ, ಎನ್ನುವುದಕ್ಕೆ ಉತ್ತಮ ಉದಾಹರಣೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ ಆದ ಅವಮಾನವಿದು. ರಾಜ್ಯದ 7 ಕೋಟಿ ಕನ್ನಡಿಗರಿಗೆ ಆದ ನೋವಿದು. ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ನಾಯಕ ನಿಮ್ಮ ವಯಸ್ಸಿಗಾದರೂ ಗೌರವ ನೀಡಿ, ಕಾಲ್ತುಳಿತಕ್ಕೆ ಅಥವಾ ನೂಕಾಟಕ್ಕೆ ಒಳಗಾದಾಗ, ನಿಮ್ಮನ್ನು ಬಂದು ವಿಚಾರಿಸಬೇಕಿತ್ತು. ಆ ಕನಿಷ್ಠ ಸೌಜನ್ಯ ಇಲ್ಲದ ನಿಮ್ಮ ನಾಯಕ ರಾಹುಲ್ ಗಾಂಧಿಯನ್ನು ನೀವು ಪ್ರಧಾನಿ ಮಾಡುತ್ತೇನೆ ಎನ್ನುತ್ತೀದ್ದೀರಿ. ಅವರು “ತುಳಿಯುವ ನಾಯಕ, ಬೆಳೆಸುವ ನಾಯಕ” ಅಲ್ಲ ಎನ್ನೋದು ಇಂದಿನ ಭೀಕರ ದೃಶ್ಯ ನೋಡಿದ ಮೇಲೆ ಮತ್ತೊಮ್ಮೆ ಸಾಬೀತಾಯಿತು ಎಂದಿದ್ದಾರೆ.
ಸಿದ್ದರಾಮಯ್ಯನವರು ವೀಲ್ ಚೇರ್’ನಲ್ಲಿ ಇದ್ದಾಗ, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರು, ವೀಲ್ ಚೇರ್ ತಳ್ಳಿಕೊಂಡು ಹೋಗಿದ್ದು ನೆನಪಿಗೆ ಬಂತು. ಎಲ್ಲದಕ್ಕೂ ಸಂಸ್ಕಾರ ಮುಖ್ಯ ಎನ್ನೋದು, ಇಂತಹ ಘಟನೆ ನೋಡಿದಾಗ ಅನಿಸುತ್ತದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಸಿಕ್ಕ ರಾಜ ಮರ್ಯಾದೆ ಇದೇನಾ?: ಜೆಡಿಎಸ್
ರಾಜ್ಯದಲ್ಲಿ ಬರದ ಬರೆ, ರೈತರ ಕಣ್ಣೀರು ಒರೆಸೋದು ಬಿಟ್ಟು ಹೈಕಮಾಂಡ್ ಮೆಚ್ಚಿಸಲು ದೆಹಲಿಗೆ ಹೋದ ನಮ್ಮ ಮುಖ್ಯಮಂತ್ರಿಗಳಿಗೆ ಸಿಕ್ಕ ರಾಜ ಮರ್ಯಾದೆ ಇದೇನಾ ಎಂದು ಜೆಡಿಎಸ್ ಪ್ರಶ್ನಿಸಿದೆ.
ನಾನೇ ಮುಂದಿರ್ತೀನಿ ಅಂದ್ರೆ… ಸೈಡಿಗೆ ನಡಿ ಸಾಕು ಅಂದ್ಬಿಟ್ರು! ದೇಶದೆಲ್ಲೆಡೆ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ತೆರೆಯುತ್ತೇವೆ ಎಂದು ಬೊಬ್ಬೆ ಹೊಡೆಯುವ ರಾಹುಲ್ ಗಾಂಧಿ ಅವರ ನೈಜ ಮುಖ ಇಲ್ಲಿದೆ ನೋಡಿ. ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ‘ಕೈ’ ನೀಡುವ ಬದಲು, ‘ಮೊಣಕೈ’ನಿಂದ ಗುದ್ದಿ ತಳ್ಳಿದ್ದಾರೆ. ರಾಹುಲ್ ಗಾಂಧಿಯ ನಡವಳಿಕೆ ಅವರ ನೈಜ ಮನಸ್ಥಿತಿಯನ್ನು ತೋರಿಸುತ್ತಿದೆ. ಕಾಂಗ್ರೆಸ್ ನಾಯಕರಿಗೆ ತಮ್ಮದೇ ಕಾರ್ಯಕರ್ತರು ಕೇವಲ ಕಾಲಾಳುಗಳಷ್ಟೇ! ಇದೇನಾ ನಿಮ್ಮ ಪ್ರೀತಿಯ ಅಂಗಡಿಯಲ್ಲಿ ಸಿಗುವ ‘ಸ್ಪೆಷಲ್ ಟ್ರೀಟ್‌ಮೆಂಟ್’ ಎಂದು ಜೆಡಿಎಸ್ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಚಲೋ ಮೆರವಣಿಗೆಯಲ್ಲಿ ನಡೆದಿದ್ದೇನು?
ಅಕ್ಟೋಬರ್ 12ರಂದು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತ್ತು.
ಈ ಮೆರವಣಿಗೆಯಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸುಪ್ರೀಂ ಕೋರ್ಟ್‌ನತ್ತ ಸಾಗುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಗಿ, ಡಿ.ಕೆ. ಶಿವಕುಮಾರ್ ಅವರು ಸಮತೋಲನ ಕಳೆದುಕೊಂಡು ಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ರಾಜಕೀಯ ವಲಯದಲ್ಲಿ ಚರ್ಚೆ
ವಿಡಿಯೋ ವೈರಲ್ ಆದ ಬಳಿಕ ಮೆರವಣಿಗೆಯಲ್ಲಿನ ನೂಕುನುಗ್ಗಲು, ನಾಯಕರ ಸುರಕ್ಷತೆ ಮತ್ತು ಡಿ.ಕೆ. ಶಿವಕುಮಾರ್ ಅವರೊಂದಿಗೆ ನಡೆದುಕೊಂಡ ರೀತಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

