ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಅನುಭವಿ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅಪರೂಪದ ಮೈಲಿಗಲ್ಲು ನೆಟ್ಟಿದ್ದಾರೆ. ಪಂದ್ಯದಲ್ಲಿ 62 ರನ್ ನೀಡಿ 2 ವಿಕೆಟ್ ಕಬಳಿಸಿದ ಅವರು, ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ ಪೂರೈಸಿದ ಆಸ್ಟ್ರೇಲಿಯಾದ ಎರಡನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ದಿಗ್ಗಜ ಆಟಗಾರ ಷೇನ್ ವಾರ್ನ್ ಮಾತ್ರ ಈ ಸಾಧನೆ ಮಾಡಿದ್ದರು.
ಇದುವರೆಗೆ ೧೨೩ ಏಕದಿನ ಪಂದ್ಯಗಳನ್ನು ಆಡಿರುವ ಝಂಪಾ ಒಟ್ಟು ೨೦೧ ವಿಕೆಟ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಏಕದಿನ ಪಂದ್ಯಗಳಲ್ಲಿ ೨೦೦ಕ್ಕೂ ಹೆಚ್ಚು ವಿಕೆಟ್ ಪಡೆದ ಒಟ್ಟಾರೆ ೭ನೇ ಬೌಲರ್ ಎಂಬ ಕೀರ್ತಿಗೂ ಇವರು ಭಾಜನರಾಗಿದ್ದಾರೆ. ೩೮೦ ವಿಕೆಟ್ ಗಳಿಸಿರುವ ಗ್ಲೆನ್ ಮೆಕ್ಗ್ರಾತ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ೨೯೧ ವಿಕೆಟ್ ಪಡೆದಿರುವ ಷೇನ್ ವಾರ್ನ್ ಸ್ಪಿನ್ನರ್ಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 9000 ರನ್ಗಳ ಮೈಲಿಗಲ್ಲನ್ನು ದಾಟಿದ್ದಾರೆ. ಇವರ ಸ್ಪೋಟಕ ೧೧೨ ರನ್ ಹಾಗೂ ಮಿಚೆಲ್ ಮಾರ್ಷ್ ಮತ್ತು ಕೂಪರ್ ಕೊನೊಲಿ ಅವರ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 356 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಸವಾಲಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡವು ಸಿಖಂದರ್ ರಾಜಾ ಅವರ 45 ರನ್ಗಳ ಹೋರಾಟದ ಹೊರತಾಗಿಯೂ 272 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ 84 ರನ್ಗಳ ಜಯ ದಾಖಲಿಸಿದ ಆಸ್ಟ್ರೇಲಿಯಾ, ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 3 ಪಂದ್ಯಗಳ ಸರಣಿಯನ್ನು ೨-೦ ಅಂತರದಿಂದ ತನ್ನದಾಗಿಸಿಕೊಂಡಿದೆ.

