ಬೆಂಗಳೂರು: ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಖಾಲಿ ಇರುವ ವಾರ್ಡರ್ (ವೀಕ್ಷಕರು) 560 ಹಾಗೂ ದ್ವಿತೀಯ ದರ್ಜೆ ಬೋಧಕರು (Instructor Grade-II) 16 ಸೇರಿದಂತೆ ಒಟ್ಟು 576 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ವಾರ್ಡರ್ (ವೀಕ್ಷಕರು)560 ಹುದ್ದೆ, ₹37,500–₹76,100
ದ್ವಿತೀಯ ದರ್ಜೆ ಬೋಧಕರು16 ಹುದ್ದೆ, ವೇತನ ₹37,500–₹76,100
ಒಟ್ಟು576
ವಿದ್ಯಾರ್ಹತೆ ಏನು?
ವಾರ್ಡರ್ (ವೀಕ್ಷಕರು): ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ದ್ವಿತೀಯ ದರ್ಜೆ ಬೋಧಕರು: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದರ ಜೊತೆಗೆ, ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಾರ್ಪೆಂಟ್ರಿ, ಟೈಲರಿಂಗ್, ಟೆಕ್ಸ್‌ಟೈಲ್/ವೀವಿಂಗ್, ಕಾರ್ಪೆಟ್ ಮೇಕಿಂಗ್ ಮುಂತಾದ ಕ್ಷೇತ್ರಗಳಲ್ಲಿ ಡಿಪ್ಲೊಮಾ ಅಥವಾ ಪ್ರಮಾಣಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆಯನ್ನು ಪಡೆದಿರಬೇಕು. ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ವಯೋಮಿತಿ
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಕನಿಷ್ಠ 20 ವರ್ಷ ಪೂರ್ಣಗೊಂಡಿರಬೇಕು.
-
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು: ಗರಿಷ್ಠ 31 ವರ್ಷ
-
ಎಸ್‌ಸಿ/ಎಸ್‌ಟಿ/ಪ್ರವರ್ಗ-1/2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ಗರಿಷ್ಠ 33 ವರ್ಷ
-
ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಅರ್ಜಿ ಸಲ್ಲಿಕೆ ದಿನಾಂಕ
-
ಅರ್ಜಿ ಆರಂಭ: 19 ಸೆಪ್ಟೆಂಬರ್ 2026
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026
-
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಅಕ್ಟೋಬರ್ 2026
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಮಾಹಿತಿಯನ್ನು ಬದಲಾಯಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಶುಲ್ಕ
-
ಸಾಮಾನ್ಯ ಅರ್ಹತೆ ಹಾಗೂ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ₹750
-
ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹500
ಪಾವತಿಸಿದ ಅರ್ಜಿ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ.
ಲಿಖಿತ ಪರೀಕ್ಷೆ ಹೇಗಿರಲಿದೆ?
ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್‌ಲೈನ್ OMR ಮಾದರಿಯಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಒಟ್ಟು 100 ಬಹು ಆಯ್ಕೆ ಪ್ರಶ್ನೆಗಳು, 100 ಅಂಕಗಳು ಇರಲಿದ್ದು, ಪರೀಕ್ಷೆಯ ಅವಧಿ 90 ನಿಮಿಷಗಳು.
ಪ್ರಶ್ನೆಗಳು ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿ ಹಾಗೂ ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿರುತ್ತವೆ.
ಲಿಖಿತ ಪರೀಕ್ಷೆ:
21 ನವೆಂಬರ್ 2026
ಮಧ್ಯಾಹ್ನ 3ರಿಂದ 4.30ರವರೆಗೆ
ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತವಾಗಲಿದೆ. ಯಾವುದೇ ಉತ್ತರವನ್ನು ಗುರುತಿಸದಿದ್ದರೆ ಒಎಂಆರ್‌ನಲ್ಲಿರುವ ಐದನೇ ಆಯ್ಕೆಯನ್ನು ಶೇಡ್ ಮಾಡಲು ಹೆಚ್ಚುವರಿ ಐದು ನಿಮಿಷಗಳ ಅವಕಾಶ ನೀಡಲಾಗುತ್ತದೆ.
ದೈಹಿಕ ಪರೀಕ್ಷೆ ಕಡ್ಡಾಯ
ಲಿಖಿತ ಪರೀಕ್ಷೆ ಹಾಗೂ ವಿದ್ಯಾರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ದೇಹದಾರ್ಢ್ಯತೆ ಪರೀಕ್ಷೆ (PST) ಮತ್ತು ಸಹಿಷ್ಣುತೆ ಪರೀಕ್ಷೆಗೆ (ET) ಕರೆಯಲಾಗುತ್ತದೆ.
ಪುರುಷ ಅಭ್ಯರ್ಥಿಗಳಿಗೆ:
-
ಕನಿಷ್ಠ ಎತ್ತರ: 168 ಸೆಂ.ಮೀ.
-
ಎದೆ ಸುತ್ತಳತೆ: 86 ಸೆಂ.ಮೀ.
-
ಎದೆ ವಿಸ್ತರಣೆ: 5 ಸೆಂ.ಮೀ.
ಮಹಿಳಾ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ:
-
ಕನಿಷ್ಠ ಎತ್ತರ: 157 ಸೆಂ.ಮೀ.
-
ಕನಿಷ್ಠ ತೂಕ: 46 ಕೆ.ಜಿ.
ಸಹಿಷ್ಣುತೆ ಪರೀಕ್ಷೆ
ಪುರುಷ ಅಭ್ಯರ್ಥಿಗಳಿಗೆ:
-
100 ಮೀಟರ್ ಓಟ – 15 ಸೆಕೆಂಡ್
-
ಎತ್ತರ ಜಿಗಿತ – 1.20 ಮೀಟರ್
-
ಉದ್ದ ಜಿಗಿತ – 3.80 ಮೀಟರ್
-
ಗುಂಡು ಎಸೆತ (7.26 ಕೆ.ಜಿ.) – 5.60 ಮೀಟರ್
-
800 ಮೀಟರ್ ಓಟ – 2 ನಿಮಿಷ 50 ಸೆಕೆಂಡ್
ಮಹಿಳಾ, ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ:
-
100 ಮೀಟರ್ ಓಟ – 18.5 ಸೆಕೆಂಡ್
-
ಎತ್ತರ ಜಿಗಿತ – 0.90 ಮೀಟರ್
-
ಉದ್ದ ಜಿಗಿತ – 2.50 ಮೀಟರ್
-
ಗುಂಡು ಎಸೆತ (3.63 ಕೆ.ಜಿ.) – 3.75 ಮೀಟರ್
-
200 ಮೀಟರ್ ಓಟ – 40 ಸೆಕೆಂಡ್
ಐದು ಸಹಿಷ್ಣುತೆ ಪರೀಕ್ಷೆಗಳಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಬೇಕು. ಈ ಪರೀಕ್ಷೆಗಳಿಗೆ ಯಾವುದೇ ಅಂಕಗಳನ್ನು ನೀಡಲಾಗುವುದಿಲ್ಲ; ಅರ್ಹತೆ ಮಾತ್ರ ಪರಿಗಣಿಸಲಾಗುತ್ತದೆ.
ವೈದ್ಯಕೀಯ ಪರೀಕ್ಷೆಯೂ ಇರಲಿದೆ
ದೈಹಿಕ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ದೃಷ್ಟಿ, ಶ್ರವಣ ಶಕ್ತಿ ಸೇರಿದಂತೆ ವಿವಿಧ ವೈದ್ಯಕೀಯ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ. ವರ್ಣಾಂಧತೆ, ಫ್ಲಾಟ್ ಫೀಟ್, ನಾಕ್ ನೀಸ್, ಕೆಲವು ಕಣ್ಣಿನ ದೋಷಗಳು, ಶ್ರವಣದೋಷ, ವೆರಿಕೋಸ್ ವೇನ್ಸ್ ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿಯಾಗುವ ದೈಹಿಕ ನ್ಯೂನತೆಗಳು ವೈದ್ಯಕೀಯ ಅನರ್ಹತೆಗೆ ಕಾರಣವಾಗಬಹುದು.
ತರಬೇತಿ ಮತ್ತು ಸೇವಾ ಅವಧಿ
ಆಯ್ಕೆಯಾದ ಅಭ್ಯರ್ಥಿಗಳು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ನಿಗದಿಪಡಿಸುವ ತರಬೇತಿ ಶಾಲೆಯಲ್ಲಿ 9 ತಿಂಗಳ ಮೂಲ ಬುನಾದಿ ತರಬೇತಿ ಪಡೆಯಬೇಕು. ನೇಮಕಗೊಂಡ ಬಳಿಕ 2 ವರ್ಷಗಳ ಖಾಯಂ ಪೂರ್ವ ಅವಧಿ ಇರಲಿದೆ.
ವೇತನ ಶ್ರೇಣಿ ₹37,500ರಿಂದ ₹76,100ರವರೆಗೆ ಇರಲಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ಅನ್ವಯವಾಗಲಿದೆ.
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯಲ್ಲಿ ನೀಡಿರುವ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ದೈಹಿಕ ಮತ್ತು ವೈದ್ಯಕೀಯ ಅರ್ಹತೆ ಸೇರಿದಂತೆ ಎಲ್ಲ ನಿಯಮಗಳನ್ನು ಪರಿಶೀಲಿಸಬೇಕು. ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ಯಾವುದೇ ಹಂತದಲ್ಲಾದರೂ ಅಭ್ಯರ್ಥಿತನವನ್ನು ರದ್ದುಗೊಳಿಸುವ ಸಾಧ್ಯತೆ ಇದೆ.
ನೇಮಕಾತಿ ಸಂಬಂಧಿಸಿದ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಪ್ರವೇಶ ಪತ್ರದ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳನ್ನು ಪರಿಶೀಲಿಸುತ್ತಿರಬೇಕು.
ಹೆಚ್ಚಿನ ಮಾಹಿತಿಗಾಗಿ

