ತನ್ನ ಮುದ್ದಿನ ಮಗಳ ಹುಟ್ಟುಹಬ್ಬಕ್ಕೆ ಬಲೂನ್, ಮೇಣದಬತ್ತಿ ಮತ್ತು ಸಿಹಿತಿಂಡಿಗಳನ್ನು ಸಿದ್ಧಪಡಿಸಿ ಅಲಂಕಾರ ಮಾಡಿದ್ದ ತಂದೆಯೊಬ್ಬ, ಅದೇ ಮಗಳನ್ನು ಉಸಿರುಗಟ್ಟಿಸಿ ಕೊಂದು ನಂತರ ತಾನೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕಟ್ಟಡ ನಿರ್ಮಾಣ ಕಾಮಗಾರಿಗಳ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದ 40 ವರ್ಷದ ಕಿಶೋರ್ ಧನಕ್ ಎಂಬಾತನೇ ಈ ಕೃತ್ಯ ಎಸಗಿದ ದುರ್ದೈವಿ. ಆತ ತನ್ನ 5 ವರ್ಷದ ಪುತ್ರಿ ಹಿಮಾನ್ಶಿಯನ್ನು ಬಾಯಿಗೆ ಕೈಯಿಟ್ಟು ಉಸಿರುಗಟ್ಟಿಸಿ ಸಾಯಿಸಿದ್ದು, ನಂತರ ಆಕೆಯ ಮೃತದೇಹವನ್ನು ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಇರಿಸಿದ್ದಾನೆ. ಬಳಿಕ ತಾನೂ ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ವೇಳೆ ಕೋಣೆಯಲ್ಲಿದ್ದ ದೃಶ್ಯಗಳು ಎಲ್ಲರನ್ನೂ ದಿಗ್ಭ್ರಮೆಗೊಳಿಸಿವೆ. ಇಡೀ ಕೋಣೆಯನ್ನು ಬಲೂನ್ ಹಾಗೂ ಮೇಣದಬತ್ತಿಗಳಿಂದ ಶೃಂಗರಿಸಲಾಗಿತ್ತು. ಮನೆ ತುಂಬಾ ಹಾಗೂ ಫ್ರಿಡ್ಜ್ ನಲ್ಲೂ ಚಾಕೊಲೇಟ್ಗಳನ್ನು ಇಡಲಾಗಿತ್ತು. ಶೈತ್ಯಾಗಾರದ ಹೊರಭಾಗದಲ್ಲಿ ಮಗಳಿಗೆ ಜನ್ಮದಿನದ ಶುಭಾಶಯ ಕೋರುವ ಬರಹದ ಹಾಳೆಯನ್ನು ಅಂಟಿಸಲಾಗಿತ್ತು. ಅಷ್ಟೇ ಅಲ್ಲದೆ, ಮಗುವಿನ ಮೃತದೇಹಕ್ಕೆ ಹೊಸ ಬಿಳಿ ಉಡುಪು ತೊಡಿಸಿ, ತಲೆಯ ಮೇಲೆ ಸೆರಗು ಹೊದಿಸಲಾಗಿತ್ತು. ಫ್ರಿಡ್ಜ್ ನ ಒಳಗೆ ಮೆತ್ತನೆಯ ದಿಂಬುಗಳನ್ನು ಇರಿಸಿ, ಮಗುವಿನ ತುಟಿಯ ಮೇಲೆ ತುಳಸಿ ದಳಗಳನ್ನು ಇಡಲಾಗಿತ್ತು. ಕೋಣೆಯಲ್ಲಿ ಪೂಜಾ ಸಾಮಗ್ರಿಗಳು ಹಾಗೂ ದೇವರ ಮೂರ್ತಿಗಳೂ ಪತ್ತೆಯಾಗಿದ್ದು, ಸಾವಿಗೂ ಮುನ್ನ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿರುವ ಸಾಧ್ಯತೆ ಕಂಡುಬಂದಿದೆ.
ಕಿಶೋರ್ ಧನಕ್ ಬರೆದಿಟ್ಟಿರುವ 3 ಮರಣ ಪತ್ರಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟು ಈ ನಿರ್ಧಾರ ಕೈಗೊಂಡಿರುವುದಾಗಿ ಆತ ಪತ್ರಗಳಲ್ಲಿ ಉಲ್ಲೇಖಿಸಿದ್ದಾನೆ. ಕಾಮಗಾರಿಗಾಗಿ ಆತ ವೈಯಕ್ತಿಕವಾಗಿ ಸಾಲ ಮಾಡಿಕೊಂಡಿದ್ದನು ಹಾಗೂ ವ್ಯಾಪಾರ ವಹಿವಾಟಿನಲ್ಲಿ ಆತನಿಗೆ ಬರಬೇಕಾಗಿದ್ದ 7.25 ಲಕ್ಷ ರೂಪಾಯಿ ಹಣ ಕೈಸೇರಿರಲಿಲ್ಲ. ಇದರಿಂದ ತೀವ್ರ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ್ದ ಆತ, ತನ್ನ ಸಾವಿನ ಬಳಿಕ ಪುತ್ರಿ ತಬ್ಬಲಿಯಾಗಿ ಅನಾಥಳಾಗಿ ಕಷ್ಟಪಡಬಾರದು ಎಂಬ ಕಾರಣಕ್ಕೆ ಆಕೆಯನ್ನು ಕೊಂದಿರುವುದಾಗಿ ಮತ್ತು ತನ್ನ ತಪ್ಪಿಗೆ ಕ್ಷಮೆಯಾಚಿಸುವುದಾಗಿ ಬರೆದಿದ್ದಾನೆ.
ಕಿಶೋರ್ ಅವರ ಪತ್ನಿ ಮಂಜುಬೆನ್ ಸೆಪ್ಟೆಂಬರ್ 14 ರಂದು ತವರು ಮನೆಗೆ ತೆರಳಿದ್ದರು. ಬುಧವಾರ ಪತಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗದ ಕಾರಣ ಅನುಮಾನಗೊಂಡು ಸಹೋದರನನ್ನು ಮನೆಗೆ ಕಳುಹಿಸಿದ್ದರು. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಮಂಜುಬೆನ್ ಸ್ಥಳಕ್ಕೆ ಧಾವಿಸಿ ಬಾಗಿಲು ಮುರಿದು ಒಳನುಗ್ಗಿದಾಗ ಪತಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನಂತರ ಶೋಧ ನಡೆಸಿದಾಗ ಫ್ರಿಡ್ಜ್ ನಲ್ಲಿ ಪುತ್ರಿಯ ಶವ ಕಂಡುಬಂದಿದೆ.
ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣ ಪತ್ರಗಳ ಪರಿಶೀಲನೆ ನಡೆಸುತ್ತಿದ್ದು ಎಲ್ಲಾ ಆಯಾಮಗಳಿಂದ ಸಮಗ್ರ ತನಿಖೆ ಮುಂದುವರಿಸಿದ್ದಾರೆ.

