HomeKarnatakaಇ-ಸ್ವತ್ತು 03 ತಂತ್ರಾಂಶ ಸಿದ್ಧಪಡಿಸಲು ಈಶ್ವರ ಖಂಡ್ರೆ ಸೂಚನೆ

ಇ-ಸ್ವತ್ತು 03 ತಂತ್ರಾಂಶ ಸಿದ್ಧಪಡಿಸಲು ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು- ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿನ ವಿಳಂಬ ತಪ್ಪಿಸಲು ಕ್ರಮ ವಹಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಪ್ರಥಮ ಹಂತದಲ್ಲಿ ಅಕ್ಟೋಬರ್ 2ರಿಂದ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದಾರೆ.

ಇ-ಸ್ವತ್ತು ಪ್ರಕ್ರಿಯೆಯ ಸರಳೀಕರಣ

ತತ್ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಇ-ಸ್ವತ್ತು ನೀಡಿಕೆಯಲ್ಲಿನ ತೊಡಕು ನಿವಾರಣೆಗೆ ಸರಳೀಕೃತವಾದ ಪ್ರಕ್ರಿಯೆಯೊಂದಿಗೆ ಇ-ಸ್ವತ್ತು -03 ತಂತ್ರಾಂಶ ಸಿದ್ಧಪಡಿಸಲು ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯಾಯಾಲಯಗಳಲ್ಲಿ ವ್ಯಾಜ್ಯ ಇರುವ, ಸರ್ಕಾರಿ ಜಾಗದಲ್ಲಿ, ಕೆರೆ ಅಂಗಳದಲ್ಲಿ, ಬಿ ಖರಾಬು ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿರುವಂತಹ ಹಾಗೂ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಕಟ್ಟಿದ ಸ್ವತ್ತುಗಳನ್ನು ಹೊರತುಪಡಿಸಿ ನ್ಯಾಯಬದ್ಧವಾದ ವಾರೀಸುದಾರರಿಗೆ ನಿಯಮಾನುಸಾರ ಇ-ಸ್ವತ್ತು ನೀಡಲು ಅ.2ರಿಂದ ಅರ್ಜಿ ಸ್ವೀಕರಿಸಿ, ರಾಜ್ಯೋತ್ಸವ ಮಾಸವಾದ ನವೆಂಬರ್ ನಲ್ಲಿ ಕನಿಷ್ಠ 10 ಲಕ್ಷ ಆಸ್ತಿಗಳಿಗೆ ಇ-ಸ್ವತ್ತುಗಳನ್ನು ಮನೆಬಾಗಿಲಿಗೇ ತಲುಪಿಸಲು ಸೂಚಿಸಿದ್ದಾರೆ.

ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದ ಆಸ್ತಿಗಳಿಗೆ ಹಿತ್ತಲು, ಮನೆ ಅಂಗಳ ಸೇರಿದಂತೆ 4000 ಚದರಡಿ ಒಳಗಿರುವ ಆಸ್ತಿಗಳಿಗೆ ಮಾತ್ರ ಇ-ಸ್ವತ್ತು ನೀಡುವ ಸಲುವಾಗಿ ಒಂದು ಗ್ರಾಮಪಂಚಾಯತಿ ವ್ಯಾಪ್ತಿಗೆ ಒಳಪಡುವ ವಿವಿಧ ಹಳ್ಳಿಗಳಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸಿ, ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿರುವವರು ಅದೇ ಗ್ರಾಮದಲ್ಲಿ ಅದೇ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆಯೇ, ಅವರೇ ಸ್ವತ್ತಿನ ನೈಜ ಮಾಲೀಕರೇ ಎಂಬುದನ್ನು ಗ್ರಾಮಸ್ಥರ ಸಮ್ಮುಖದಲ್ಲೇ ಖಚಿತಪಡಿಸಿಕೊಂಡು ಮತ್ತು ಸಾರ್ವಜನಿಕರಿಂದ ಆಕ್ಷೇಪಣೆ ಕರೆದು 21 ದಿನಗಳ ಕಾಲಾವಕಾಶ ನೀಡಿ, ಪಂಚಾಯತಿ ಕಚೇರಿಗಳಲ್ಲಿ ಕಾಣುವಂತೆ ಈ ಆಕ್ಷೇಪಣಾ ನೋಟಿಸ್ ಅಂಟಿಸಿ, ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಇ-ಸ್ವತ್ತು ನೀಡಲು ನಿಯಮಾನುಸಾರ ಕ್ರಮ ವಹಿಸಲು ಈಶ್ವರ ಖಂಡ್ರೆ ನಿರ್ದೇಶನ ನೀಡಿದ್ದಾರೆ.

ಹೆಚ್ಚುವರಿ ಕ್ರಮಗಳು

ರಾಜ್ಯದ ಪಂಚಾಯತಿ ವ್ಯಾಪ್ತಿಯಲ್ಲಿರುವ ಅನೇಕ ಆಸ್ತಿಗಳ ಮಾಲೀಕರು ಇ-ಸ್ವತ್ತು ಕೋರಿ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದಿದ್ದರೂ ತಾಂತ್ರಿಕ ಕಾರಣಗಳಿಂದ ಅವರಿಗೆ ಇ-ಸ್ವತ್ತು ನೀಡಲು ವಿಳಂಬವಾಗುತ್ತಿರುವ ಹಾಗೂ ಗ್ರಾಮಠಾಣಾಗಳಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಬಹುತೇಕರ ಬಳಿ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ದಾಖಲಾತಿಗಳು ಇಲ್ಲದ ಕಾರಣ ಅವರಿಗೆ ಇ-ಸ್ವತ್ತು ನೀಡಲು ಸಾಧ್ಯವಾಗಿರುವುದಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಈಶ್ವರ ಖಂಡ್ರೆ ಕಾರ್ಯದರ್ಶಿ ನೇತೃತ್ವದಲ್ಲಿ ಪಂಚ ಸದಸ್ಯರ ಸಮಿತಿ ರಚಿಸಿ ವರದಿ ಪಡೆದಿದ್ದರು.

ಗ್ರಾಮಠಾಣಾ ವ್ಯಾಪ್ತಿಯಲ್ಲಿ ಹಲವು ವರ್ಷದಿಂದ ವಾಸಿಸುತ್ತಿದ್ದರೂ, ತಮ್ಮ ಸ್ವತ್ತಿಗೆ ಸಂಬಂಧಿಸಿದಂತೆ ನೋಂದಾಯಿತ ಕ್ರಯಪತ್ರ, ಹಕ್ಕುಪತ್ರ ಇತ್ಯಾದಿ ದಾಖಲೆ ಇಲ್ಲದ ಆಸ್ತಿಯ ಮಾಲೀಕರಿಗೆ ಇ-ಸ್ವತ್ತು ನೀಡಲು ಅವರು ವಾಸಿಸುತ್ತಿರುವ ಕಟ್ಟಡದ ವಿದ್ಯುತ್ ಬಿಲ್, ಈ ಹಿಂದೆ ಮನೆಗಂದಾಯ ಅಥವಾ ತೆರಿಗೆ ಪಾವತಿಸಿದ ರಸೀತಿ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ನಿವಾಸಿ ಪ್ರಮಾಣಪತ್ರ ಇತ್ಯಾದಿ ದಾಖಲಾತಿಗಳೊಂದಿಗೆ ಹಾಗೂ ಹಾಗೂ ಆಸ್ತಿಗೆ ತಾವೇ ಮಾಲೀಕರಾಗಿದ್ದು, ತಾವು ಒದಗಿಸಿರುವ ದಾಖಲೆ /ಮಾಹಿತಿ ತಪ್ಪಾಗಿದ್ದಲ್ಲಿ ತಮ್ಮ ಇ-ಸ್ವತ್ತು ರದ್ದು ಮಾಡಬಹುದು ಎಂಬ ಮುಚ್ಚಳಿಕೆ ಸಹಿತ ಅಫಿಡವಿಟ್ ನೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಗಾಂಧೀ ಜಯಂತಿ ದಿನವಾದ ಅಕ್ಟೋಬರ್ 2ರಿಂದ ಪಂಚನಾಮೆ, ಸ್ಥಳ ಪರಿಶೀಲನಾ ಪ್ರಕ್ರಿಯೆ ಆರಂಭಿಸಿ, ನವೆಂಬರ್ 1ರಿಂದ ಮನೆ ಬಾಗಿಲಿಗೇ ಇ-ಸ್ವತ್ತು ಅಭಿಯಾನ ಆರಂಭಿಸಲು ಕ್ರಮವಹಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular