HomeIndiaಮೋದಿ ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದ ಎಂದು ಕೊಂಡಾಡಿದ ಟೀಚರ್; ಮೋದಿ, ಅವರ ಟೀಚರ್ ಒಂದೇ ವಯಸ್ಸಿನವರಾ ಎಂದು...

ಮೋದಿ ಬ್ರಿಲಿಯಂಟ್ ವಿದ್ಯಾರ್ಥಿಯಾಗಿದ್ದ ಎಂದು ಕೊಂಡಾಡಿದ ಟೀಚರ್; ಮೋದಿ, ಅವರ ಟೀಚರ್ ಒಂದೇ ವಯಸ್ಸಿನವರಾ ಎಂದು ಅನುಮಾನಿಸಿ ಸುಳ್ಳೆಂದ ನೆಟ್ಟಿಗರು!

ನವದೆಹಲಿ: ನಿನ್ನೆ ( ಸೆಪ್ಟೆಂಬರ್ 17 ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಶಾಲಾ ದಿನಗಳ ಶಿಕ್ಷಕ ಎಚ್‌.ಸಿ. ಪಟೇಲ್‌ ಅವರು ಹಲವು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು ಹಾಗೂ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 1965ರಿಂದ 1967ರವರೆಗೆ ವಡ್ನಗರದ ಬಿಎನ್‌ ಹೈಸ್ಕೂಲ್‌ನಲ್ಲಿ ಗಣಿತ ಮತ್ತು ವಿಜ್ಞಾನ ಬೋಧಿಸಿದ್ದ ಪಟೇಲ್‌, ಮೋದಿ ಚುರುಕು ವಿದ್ಯಾರ್ಥಿಯಾಗಿದ್ದರು ಹಾಗೂ ಶಾಲೆಯ ಬಹುತೇಕ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ಹೇಳಿದ್ದರು.

ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಕುರಿತು ಸಂಶಯ ಹಾಗೂ ಟೀಕೆಗಳನ್ನು ಹಲವು ನೆಟ್ಟಿಗರು ವ್ಯಕ್ತಪಡಿಸಿದ್ದು, ಮೋದಿಗೆ 76 ವರ್ಷ ಹಾಗೂ ಅವರ ಟೀಚರ್‌ಗೆ 75 ವರ್ಷ ಎಂದು ಬರೆದುಕೊಂಡಿದ್ದಾರೆ. ಮೋದಿ ಅವರ ಶಿಕ್ಷಕರ ವಯಸ್ಸು ಅಧಿಕೃತವಾಗಿ ಲಭ್ಯವಾಗಿಲ್ಲ. ಇನ್ನೂ ಕೆಲವರು ಮೋದಿ ಹಾಗೂ ಅವರ ಶಿಕ್ಷಕ ಇಬ್ಬರೂ ಒಂದೇ ವಯಸ್ಸಿನವರ ಹಾಗೆ ಕಾಣಿಸುತ್ತಾರೆ, ಇದೆಲ್ಲ ಪ್ರಚಾರದ ಗಿಮಿಕ್ ಎಂದು ಮೋದಿ ಕಾಲೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೋದಿ ಬಗ್ಗೆ ಎಚ್. ಸಿ ಪಟೇಲ್ ಇನ್ನೇನು ಹೇಳಿದರು?

ಶಾಲೆಯಲ್ಲಿ ಪ್ರತಿ ಗುರುವಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮೋದಿ ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ನಾಯಕರ ಕುರಿತು ಭಾಷಣ ಮಾಡುತ್ತಿದ್ದರು ಎಂದು ಪಟೇಲ್‌ ನೆನಪಿಸಿಕೊಂಡಿದ್ದಾರೆ. ಶಾಲೆಯ ಆವರಣದ ಗೋಡೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಆಯೋಜಿಸಿದ್ದ ನಾಟಕದಲ್ಲಿ ಮೋದಿ ‘ಜೋಗಿದಾಸ್ ಖುಮಾನ್’ ಪಾತ್ರ ನಿರ್ವಹಿಸಿದ್ದರು. ಕೈಯಲ್ಲಿ ಕತ್ತಿ ಹಿಡಿದು ಕಠಿಯಾವಾಡಿ ಭಾಷೆಯಲ್ಲಿ ಸಂಭಾಷಣೆ ಹೇಳಿದ ಅವರ ಅಭಿನಯಕ್ಕೆ ಸುಮಾರು 10 ಸಾವಿರ ಮಂದಿ ಪ್ರೇಕ್ಷಕರು 10 ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.

ಮೋದಿ ಶಾಲಾ ದಿನಗಳಲ್ಲಿ ವಿವಿಧ ಧರ್ಮಗಳ ಸ್ನೇಹಿತರೊಂದಿಗೆ ಆತ್ಮೀಯವಾಗಿದ್ದರು ಎಂದೂ ಪಟೇಲ್‌ ಹೇಳಿದ್ದಾರೆ. 11ನೇ ತರಗತಿಯಲ್ಲಿ ತಮ್ಮ ಮುಸ್ಲಿಂ ಸಹಪಾಠಿಯೊಬ್ಬರನ್ನು ಮನೆಗೆ ಕರೆದುಕೊಂಡು ಬಂದು ಒಟ್ಟಿಗೆ ಊಟ ಮಾಡುತ್ತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.

ವಡ್ನಗರದ ಶರ್ಮಿಷ್ಠಾ ಕೆರೆ ಮೋದಿ ಅವರ ನೆಚ್ಚಿನ ಸ್ಥಳವಾಗಿತ್ತು. ಈಜು ಕಲಿಯುವ ಆಸಕ್ತಿಯಿದ್ದ ಅವರು ಒಮ್ಮೆ ಕೆರೆಯಿಂದ ಮೊಸಳೆಯ ಮರಿಯನ್ನು ಮನೆಗೆ ತಂದಿದ್ದರು. ಆದರೆ ತಾಯಿ ಹೀರಾಬೆನ್‌ ಅವರ ಸೂಚನೆಯಂತೆ ಅದನ್ನು ಮತ್ತೆ ಕೆರೆಗೆ ಬಿಟ್ಟಿದ್ದರು ಎಂದು ಪಟೇಲ್‌ ತಿಳಿಸಿದ್ದಾರೆ.

ಇದರ ಜೊತೆಗೆ, ತಂದೆ ದಾಮೋದರದಾಸ್ ಮೋದಿ ನಡೆಸುತ್ತಿದ್ದ ಚಹಾ ಅಂಗಡಿಯಲ್ಲಿ ಬಾಲ್ಯದಲ್ಲಿ ಮೋದಿ ಸಹಾಯ ಮಾಡುತ್ತಿದ್ದರು. ವಡ್ನಗರ ರೈಲು ನಿಲ್ದಾಣಕ್ಕೆ ದಿನಕ್ಕೆ ಎರಡು ಬಾರಿ ತೆರಳಿ ಪ್ರಯಾಣಿಕರಿಗೆ ಚಹಾ ಮಾರಾಟ ಮಾಡಲು ತಂದೆಗೆ ನೆರವಾಗುತ್ತಿದ್ದರು ಎಂದು ಪಟೇಲ್‌ ಹೇಳಿದ್ದಾರೆ.

2001ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲೂ ತಮ್ಮ ಶಿಕ್ಷಕರನ್ನು ಭೇಟಿಯಾಗಿ ಗೌರವಿಸಿದ್ದನ್ನು ಪಟೇಲ್‌ ನೆನಪಿಸಿಕೊಂಡಿದ್ದಾರೆ. 2005ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 26 ಮಂದಿ ಶಿಕ್ಷಕರನ್ನು ಮೋದಿ ಸನ್ಮಾನಿಸಿದ್ದರು ಎಂದು ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular