ಇಸ್ಲಾಮಾಬಾದ್: ಶುಕ್ರವಾರದ ಪ್ರಾರ್ಥನೆಯ ವೇಳೆಯೇ ಮಸೀದಿಯೊಂದರ ಬಳಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದ್ದು, 15 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕೋಹಾತ್ನಲ್ಲಿ ನಡೆದಿದೆ.
ಬಾಂಬ್ ಸ್ಫೋಟದಲ್ಲಿ 15 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಅಧ್ಯತೆ ಇದೆ. ಮೃತಪಟ್ಟವರಲ್ಲಿ ಐವರು ಸೈನಿಕರು ಕೂಡ ಸೇರಿದ್ದಾರೆ.
ಘಟನೆ ಬಳಿಕ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಈ ಸ್ಫೋಟವು ಕೋಹಾತ್ನ ಹಳೆಯ ಪೊಲೀಸ್ ಲೈನ್ಸ್ ಕಾಂಪೌಂಡ್ನ ಒಳಗಿರುವ ಮಸೀದಿಯ ಬಳಿ ಸಂಭವಿಸಿದೆ.
ಜನರು ಮಸೀದಿಯಲ್ಲಿ ಇಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಅದು ಇಡೀ ಪ್ರದೇಶವನ್ನು ನಡುಗಿಸಿತು. ಮಸೀದಿ ಸೇರಿದಂತೆ ಹತ್ತಿರದ ಹಲವಾರು ಕಟ್ಟಡಗಳು ಹಾನಿಗೊಳಗಾದವು. ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ ಎಂದು ರೆಸ್ಕ್ಯೂ 1122 ವಕ್ತಾರ ಬಿಲಾಲ್ ಅಹ್ಮದ್ ಫೈಜಿ ತಿಳಿಸಿದ್ದಾರೆ.
ಮಸೀದಿ ಬಳಿ ಸ್ಫೋಟ ಘಟನೆಯನ್ನು ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ತೀವ್ರವಾಗಿ ಖಂಡಿಸಿದ್ದಾರೆ. ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಹೇಯ ಕೃತ್ಯ ನಡೆಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಫೋಟದ ತನಿಖೆಗೆ ಆದೇಶಿಸಿ, ಸಂಬಂಧಿತ ಪೊಲೀಸ್ ಅಧಿಕಾರಿಗಳಿಂದ ವಿವರವಾದ ವರದಿ ಕೇಳಿದ್ದಾರೆ.

