2027ನೇ ಸಾಲಿನ ಜುಲೈ ಅಧಿವೇಶನಕ್ಕಾಗಿ ಡೆಹರಾಡೂನ್ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‍ನಲ್ಲಿ 8ನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯು ದಿನಾಂಕ 06-12-2026 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದೆ.
7ನೇ ತರಗತಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ದಿನಾಂಕ 01-07-2026ಕ್ಕೆ 12 1/2 ವರ್ಷದಿಂದ 14 ವರ್ಷದೊಳಗಿರುವ (02-07-2013 ರಿಂದ 01-01-2015 ರೊಳಗೆ ಜನಿಸಿರುವ) ಬಾಲಕ ಮತ್ತು ಬಾಲಕಿಯರು ಆನ್‍ಲೈನ್ ಮೂಲಕ ದಿನಾಂಕ 30-09-2025 ರೊಳಗಾಗಿ “https://examinationservices.nic.in/ExamSys26Part2/Root/Home.aspx?enc=Ei4cajBkK1gZSfgr53ImFQBut9oTMxhETt9bNm6zcP2ghS+a59eor30/A5h2io4z” ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ನಿರ್ದೇಶನಾಲಯದ ದೂರವಾಣಿ ಸಂಖ್ಯೆ : 080-25589459 ಹಾಗೂ ಜಾಲತಾಣ rimc.edu.in ಅಥವಾ ಹತ್ತಿರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ)ಡಾ.ಸಿ.ಎ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅ.04 ರಂದು ಮಾಜಿ ಸೈನಿಕರುಗಳ ರ್ಯಾಲಿ
ಶಿವಮೊಗ್ಗ : ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರನಾರಿಯರ ಕುಂದು ಕೊರತೆಗಳನ್ನು ಆಲಿಸುವ ಸಲುವಾಗಿ ಹಾಗೂ ಮಾಜಿ ಸೈನಿಕರುಗಳಿಗೆ ಸಂಬಂಧಿಸಿದ ಇತರೆ ಸೇವೆಗಳನ್ನು ಕಲ್ಪಿಸುವ ಉದ್ದೇಶದಿಂದ ಅ. 04 ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾಜಿ ಸೈನಿಕರ ರ್ಯಾಲಿಯನ್ನು ಬೆಳಗಾವಿಯ ಮರಾಠ ಲೈ ರೆಜಿಮೆಂಟಲ್ ಸೆಂಟರ್ ಇಲ್ಲಿ ಆಯೋಜಿಸಲಾಗಿದೆ.
ಈ ರ‍್ಯಾಲಿಯಲ್ಲಿ ಹಲವು ರೆಜಿಮೆಂಟ್‌ನ ಅಭಿಲೇಖಾಲಯದ ಪ್ರತಿನಿಧಿಗಳು ಹಾಗೂ ಮಾಜಿ ಸೈನಿಕರುಗಳಿಗೆ ಸಂಬಂಧಿತ ಆರೋಗ್ಯ, ಬ್ಯಾಂಕಿಂಗ್, ಕ್ಯಾಂಟೀನ್, ಕಾನೂನು ಸೇವೆ, ಸ್ಪರ್ಶ್ ಇತ್ಯಾದಿ ಸೇವೆಗಳ ಪ್ರತಿನಿಧಿಗಳು ಉಪಸ್ಥಿತರಿರಲಿದ್ದು, ಆಸಕ್ತ ಮಾಜಿ ಸೈನಿಕರು ಮತ್ತು ಅವಲಂಬಿತರು ಹಾಗೂ ವೀರನಾರಿಯರು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. ಸಂ.: 7975258008/9558865333/ 9205405193/ 8813831371 ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ (ಪ್ರ) ಡಾ. ಸಿ.ಎ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಬಿಡುಗಡೆ: ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲು ಸೂಚನೆ
ಶಿವಮೊಗ್ಗ : ಪ್ರಸ್ತುತ ಸಾಲಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಾಗಿ ಜಲಾಶಯದ ವಿತರಣಾ ನಾಲೆಗಳಿಗೆ ದಿನಾಂಕ 17.09.2026ರ ಮಧ್ಯರಾತ್ರಿ 12.00 ಗಂಟೆಯಿಂದ ದಿನಾಂಕ 02.10.2026 ರವರೆಗೆ ಒಟ್ಟು 15 ದಿನಗಳ ಕಾಲ ನೀರನ್ನು ಹರಿಸಲು ನಿರ್ಧರಿಸಲಾಗಿದೆ. ಅಚ್ಚುಕಟ್ಟು ಭಾಗದಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಹಾಗೂ ಕೆರೆ-ಹಳ್ಳಗಳನ್ನು ತುಂಬಿಸಲು ನೀರು ಹರಿಸುವಂತೆ ರೈತರು, ಶಾಸಕರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದರು. ಅಲ್ಲದೆ ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಮತ್ತು ಮಲೆಬೆನ್ನೂರು ಭಾಗಗಳಲ್ಲಿ ಪ್ರತಿಭಟನೆಗಳು ಸಹ ನಡೆದಿದ್ದವು.
ಈ ಕುರಿತು ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯ ಅನ್ವಯ, ಜಲಸಂಪನ್ಮೂಲ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಶ್ರೀ ಮಧು ಬಂಗಾರಪ್ಪ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ನೀರನ್ನು ಕೇವಲ ಕುಡಿಯುವ ನೀರು, ಅಂತರ್ಜಲ ವೃದ್ಧಿ ಹಾಗೂ ಕೆರೆಗಳನ್ನು ತುಂಬಿಸಲು ಮಾತ್ರ ಬಳಸಬೇಕಾಗಿದ್ದು, ಡಿಸೆಂಬರ್ 2026 ರವರೆಗೆ ಅಭಾವ ಎದುರಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕು.
ಯಾವುದೇ ಕಾರಣಕ್ಕೂ ಈ ನೀರನ್ನು ಬೆಳೆಗಳಿಗೆ ಬಳಸುವಂತಿಲ್ಲ ಹಾಗೂ ಅನಧಿಕೃತವಾಗಿ ನೀರೆತ್ತುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದನ್ನು ನಿಷೇಧಿಸಲಾಗಿದ್ದು, ಅಚ್ಚುಕಟ್ಟು ಭಾಗದ ರೈತರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ

