ಬೆಂಗಳೂರು: ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯ ಹಿನ್ನೆಲೆಯಲ್ಲಿ ಬಾಲಕಿಯೊಬ್ಬಳ ಹೆಸರನ್ನು ಬದಲಾಯಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರಿನ ರಾಜಗೋಪಾಲನಗರದ ನಿವಾಸಿ ನಿಂಗೇಗೌಡ ಎಂಬವರು ತಮ್ಮ ಮಗಳ ಹೆಸರನ್ನು ಬದಲಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ, ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹೆಸರಿನಿಂದ ಗುರುತಿಸಿಕೊಳ್ಳುವುದು ಆತನ ಮೂಲಭೂತ ನಾಗರಿಕ ಹಕ್ಕು. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ನಂಬಿಕೆಯ ಹಿನ್ನೆಲೆಯಲ್ಲಿ ಬಾಲಕಿಯ ಹೆಸರನ್ನು ಬದಲಾಯಿಸಲು ಅವಕಾಶವಿದೆ ಎಂದು ತಿಳಿಸಿದೆ.
ಹೆಸರು ಬದಲಾವಣೆಗೆ ಅನುಮತಿ ನೀಡಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿದ್ದು, ಶಾಲಾ ದಾಖಲಾತಿಗಳಲ್ಲಿ ಹೆಸರು ಬದಲಾಯಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ ಅರ್ಜಿದಾರರ ಮಗಳನ್ನು ‘ಲಕ್ಷ್ಮಿ ಎನ್.’ ಎಂಬುದಕ್ಕೆ ಬದಲಾಗಿ ‘ವೀಣಾ ಎನ್.’ ಎಂಬ ಹೆಸರಿನಲ್ಲಿ ಕರೆದಲ್ಲಿ ಅವರ ಜೀವನದಲ್ಲಿ ಹೆಚ್ಚಿನ ಸಮೃದ್ಧಿಯನ್ನು ತರಲಿದೆ ಎಂಬುದು ನಂಬಿಕೆಯಾಗಿದೆ. ಹೆಸರು ಬದಲಾಯಿಸಲು ಕೋರಿರುವವರು ಅಪ್ರಾಪ್ತ ವಯಸ್ಕಳಾಗಿದ್ದು, ಆಕೆಯ ತಂದೆ ಹಾಗೂ ನೈಸರ್ಗಿಕ ಪಾಲಕರಾಗಿ ಆಕೆಯ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ.
ಅಲ್ಲದೆ, ಶಾಲಾ ದಾಖಲಾತಿಗಳಲ್ಲೇ ಹೆಸರು ಬದಲಾವಣೆ ಮಾಡಬೇಕಿರುವಾಗ, ಮುಂಚಿತವಾಗಿಯೇ ಹೊಸ ಹೆಸರಿನ ದಾಖಲೆಗಳನ್ನು ಹಾಜರುಪಡಿಸಬೇಕು ಎಂಬ ನಿಯಮವಿಲ್ಲ. ರಾಜ್ಯ ಸರ್ಕಾರ 2014ರಲ್ಲಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಶಾಲಾ ದಾಖಲೆಗಳಲ್ಲಿ ಹೆಸರು ಅಥವಾ ಜನ್ಮ ದಿನಾಂಕ ಬದಲಾಯಿಸಲು ಸಿವಿಲ್ ನ್ಯಾಯಾಲಯದ ಆದೇಶ ಕಡ್ಡಾಯವಾಗಿದೆ. ಸಿವಿಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 9ರ ಅಡಿ ಹೆಸರು ಬದಲಾವಣೆಯ ಅರ್ಜಿಗಳನ್ನು ವಿಚಾರಣೆ ನಡೆಸಲು ಸಿವಿಲ್ ನ್ಯಾಯಾಲಯಕ್ಕೆ ಪೂರ್ಣ ಅಧಿಕಾರವಿದೆ ಎಂದು ಪೀಠ ಹೇಳಿದೆ.
ವ್ಯಕ್ತಿಯೊಬ್ಬರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವುದರಿಂದ ಪ್ರತಿವಾದಿಗಳಿಗಾಗಲಿ ಅಥವಾ ಸಮಾಜಕ್ಕಾಗಲಿ ಯಾವುದೇ ತೊಂದರೆ ಅಥವಾ ನಷ್ಟ ಉಂಟಾಗುವುದಿಲ್ಲ ಎಂದು ತಿಳಿಸಿದ ನ್ಯಾಯಪೀಠ, ಬಾಲಕಿಯ ಹೆಸರನ್ನು ಲಕ್ಷ್ಮಿ ಎನ್. ಬದಲಿಗೆ ವೀಣಾ ಎನ್. ಎಂದು ಬದಲಾಯಿಸಲು ಅನುಮತಿ ನೀಡಿದೆ.
ಶಾಲಾ ದಾಖಲಾತಿಗಳು ಸೇರಿದಂತೆ ಮುಂದಿನ ಎಲ್ಲಾ ಅಧಿಕೃತ ಉದ್ದೇಶಗಳಿಗೂ ಆಕೆಯನ್ನು ನಿಂಗೇಗೌಡ ಅವರ ಪುತ್ರಿ ವೀಣಾ ಎನ್. ಎಂದೇ ಪರಿಗಣಿಸಬೇಕು ಹಾಗೂ ಶಾಲಾ ದಾಖಲೆಗಳಲ್ಲಿ ತಕ್ಷಣವೇ ಇದನ್ನು ತಿದ್ದುಪಡಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೆ ಸೂಚಿಸಿದೆ.
ಅರ್ಜಿದಾರರ ನಿಂಗೇಗೌಡರಿಗೆ 2010ರ ಅಕ್ಟೋಬರ್ 20ರಂದು ಹೆಣ್ಣು ಮಗು ಜನಿಸಿತ್ತು. ನಾಮಕರಣ ಸಮಾರಂಭದಲ್ಲಿ ಲಕ್ಷ್ಮೀ ಎಂಬುದಾಗಿ ಹೆಸರಿಟ್ಟಿದ್ದರು. ಬಳಿಕ ಭವಿಷ್ಯದ ಏಳಿಗೆಗಾಗಿ ಹೆಸರನ್ನು ‘ವೀಣಾ’ ಎಂದು ಬದಲಾಯಿಸಲು ಪೋಷಕರು ನಿರ್ಧರಿಸಿದ್ದರು. ಇದಕ್ಕೆ ಅನುಮತಿ ನೀಡಲು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 5ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯವು, ಬಾಲಕಿಯ ಹೆಸರು ವೀಣಾ ಎಂಬುದಕ್ಕೆ ಯಾವುದೇ ಪೂರಕ ದಾಖಲೆಗಳಿಲ್ಲ ಮತ್ತು ಪತ್ರಿಕಾ ಪ್ರಕಟಣೆ ನೀಡಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

