HomeIndiaಆಹಾರ ಸಂಗ್ರಹಿಸುವ ಜಾಗದಲ್ಲಿಯೇ ಮೂತ್ರ ವಿಸರ್ಜನೆ; ನೈರ್ಮಲ್ಯ ಲೋಪ: ಪ್ರತಿಷ್ಠಿತ ಒಲಿಂಪಿಯಾ ಕಾಫಿ ಹೌಸ್ ಲೈಸೆನ್ಸ್...

ಆಹಾರ ಸಂಗ್ರಹಿಸುವ ಜಾಗದಲ್ಲಿಯೇ ಮೂತ್ರ ವಿಸರ್ಜನೆ; ನೈರ್ಮಲ್ಯ ಲೋಪ: ಪ್ರತಿಷ್ಠಿತ ಒಲಿಂಪಿಯಾ ಕಾಫಿ ಹೌಸ್ ಲೈಸೆನ್ಸ್ ಸಸ್ಪೆಂಡ್ ಮಾಡಿದ ಎಫ್‌ಡಿಎ

ಮುಂಬೈ: ಶತಮಾನದ ಇತಿಹಾಸವಿರುವ ಪ್ರತಿಷ್ಠಿತ ಒಲಿಂಪಿಯಾ ಕಾಫಿ ಹೌಸ್ ರೆಸ್ಟೋರೆಂಟ್‌ ನ ಲೈಸನ್ಸ್ ಅಮಾನತುಗೊಳಿಸಿ ಎಫ್‌ಡಿಎ ಆದೇಶ ಹೊರಡಿಸಿದೆ.

ಗ್ರಾಹಕರ ದೂರಿನ ಮೇರೆಗೆ ಮುಂಬೈನ ಪ್ರತಿಷ್ಠಿತ ಒಲಂಪಿಯಾ ಕಾಫಿ ಹೌಸ್ ರೆಸ್ಟೋರೆಂಟ್ ಮೇಲೆ ಎಫ್ ಡಿಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಆಹಾರ ಸಂಗ್ರಹಿಸುವ ಜಾಗದಲ್ಲೇ ಮೂತ್ರ ವಿಸರ್ಜನೆ ಮಾಡಿರುವುದು ಹಾಗೂ ಫ್ರಿಡ್ಜ್‌ನಲ್ಲಿ ಹಸಿ ಮಾಂಸದ ರಕ್ತದ ಕಲೆಗಳು ಪತ್ತೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಲಿಂಪಿಯಾ ಕಾಫಿ ಹೌಸ್ ನಲ್ಲಿ ಗಂಭೀರ ನೈರ್ಮಲ್ಯ ಲೋಪ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಅದರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಸ್ಪೆಂಡ್ ಮಾಡಿದೆ.

ದಾಳಿ ವೇಳೆ ಆಹಾರ ಪದಾರ್ಥಗಳನ್ನು ನೇರವಾಗಿ ಸ್ವಚ್ಛತೆ ಇಲ್ಲದ ನೆಲದ ಮೇಲೆ ಇಟ್ಟು ನಿರ್ವಹಿಸಲಾಗುತ್ತಿತ್ತು. ಅಡುಗೆ ಮತ್ತು ಪಾತ್ರೆ ತೊಳೆಯುವ ಜಾಗ ಕಳಪೆಯಾಗಿದ್ದು, ಆವರಣವಿಡೀ ಜಿರಳೆಗಳು ಮತ್ತು ನೊಣಗಳು ಮುತ್ತಿಕೊಂಡಿದ್ದವು. ಹಾನಿಗೊಳಗಾದ ಮರದ ಕಟಿಂಗ್ ಬೋರ್ಡ್‌ಗಳನ್ನು ಬಳಸಲಾಗುತ್ತಿತ್ತು ಹಾಗೂ ಅಶುದ್ಧ ನೀರಿನಿಂದ ಅಡುಗೆ ಮಾಡಲಾಗುತ್ತಿತ್ತು. ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಪ್ರತ್ಯೇಕಿಸದೆ ಒಂದೇ ಕಡೆ ಇಟ್ಟಿದ್ದರಿಂದ ಆಹಾರ ಕಲುಷಿತಗೊಳ್ಳುವ ಅಪಾಯವಿತ್ತು.

ಇನ್ನು ರೆಸ್ಟೋರೆಂಟ್‌ನ 35 ಆಹಾರ ನಿರ್ವಾಹಕರಲ್ಲಿ 34ಮಂದಿಗೆ ಯಾವುದೇ ಕಡ್ಡಾಯ ಆಹಾರ ಸುರಕ್ಷತಾ ತರಬೇತಿ ಇರಲಿಲ್ಲ. ನೀರಿನ ಗುಣಮಟ್ಟ ಪರೀಕ್ಷಾ ವರದಿ ಮತ್ತು ನೈರ್ಮಲ್ಯ ದಾಖಲೆಗಳನ್ನು ಒದಗಿಸಲು ಆಡಳಿತ ಮಂಡಳಿ ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಸೆಕ್ಷನ್ 32(3) ಅಡಿಯಲ್ಲಿ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಎಲ್ಲಾ ಲೋಪಗಳನ್ನು ಸರಿಪಡಿಸಿ ಮುಂದಿನ ತಪಾಸಣೆಯಲ್ಲಿ ತೇರ್ಗಡೆಯಾಗುವವರೆಗೂ ಈ ರೆಸ್ಟೋರೆಂಟ್ ನಲ್ಲಿ ಆಹಾರ ಖರೀದಿ, ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇದೇ ವೇಳೆ ಮುಂಬೈ ಸೆಂಟ್ರಲ್‌ನ ನಾಯರ್ ಆಸ್ಪತ್ರೆಯ ಕ್ಯಾಂಟೀನ್, ಕೊಲಾಬಾದ ಖ್ಯಾತ ‘ಕೆಫೆ ಮಾಂಡೆಗರ್’, ಮಹಾರಾಷ್ಟ್ರ ಬಿರಿಯಾನಿ ಸೆಂಟರ್, ತ್ರಿಭುವನ್ ಡೈರಿ ಫಾರ್ಮ್ ಹಾಗೂ ಮಹಾವೀರ್ ಕ್ಯಾಶ್ಯೂ & ಫುಡ್ಸ್ ಸಂಸ್ಥೆಗಳ ಪರವಾನಗಿಗಳನ್ನೂ ಇತ್ತೀಚೆಗಷ್ಟೇ ಎಫ್‌ಡಿಎ ಅಮಾನತುಗೊಳಿಸಿದೆ.

ಐಎಎಸ್ ಅಧಿಕಾರಿ ತುಕಾರಾಮ್ ಮುಂಢೆ ಅವರು ಎಫ್‌ಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ‘ಸುರಕ್ಷಿತ ಆಹಾರ ಸುರಕ್ಷಿತ ಮಹಾರಾಷ್ಟ್ರ’ ಅಭಿಯಾನ ಆರಂಭವಾಗಿದ್ದು, ಕಳೆದ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಬರೋಬ್ಬರಿ 1,800ಕ್ಕೂ ಹೆಚ್ಚು ಹೋಟೆಲ್‌ಗಳು, ಧಾಬಾಗಳು ಮತ್ತು ಕ್ಲಬ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular