ನವದೆಹಲಿ: ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರಾಟಕ್ಕೂ ಮುನ್ನ ಮುಂಬೈ ಮತ್ತು ದೆಹಲಿಯ ಆಪಲ್ ಸ್ಟೋರ್ಗಳ ಮುಂದೆ ಜನಸಾಗರ ಕಂಡು ಬಂದಿದೆ.
ಭಾರತದಲ್ಲಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ನ ಅಧಿಕೃತ ಮಾರಾಟ ಆರಂಭವಾಗುವ ಮುನ್ನವೇ, ಮುಂಬೈನ ಆಪಲ್ ಸ್ಟೋರ್ನ ಹೊರಗೆ ಉತ್ಸುಕ ಗ್ರಾಹಕರು ಸಾಲಿನಲ್ಲಿ ನಿಂತಿದ್ದರಿಂದ ಭಾರಿ ಜನಸಂದಣಿ ಉಂಟಾಯಿತು.
ನಾವು ಇಡೀ ರಾತ್ರಿ ಇಲ್ಲಿಯೇ ನಿಂತಿದ್ದೇವೆ. ಐಫೋನ್ 18 ಪ್ರೊ, ಐಫೋನ್ 18 ಪ್ರೊ ಮ್ಯಾಕ್ಸ್ ಖರೀದಿಸಲು ನಮಗೆ ತುಂಬಾ ಉತ್ಸಾಹವಿದೆ. ನಮ್ಮ ಬಳಿ ಬಾರ್ ಕೋಡ್ ಇಲ್ಲದಿದ್ದರೂ, ನಾವು ಸಾಲಿನಲ್ಲಿ ನಿಂತಿದ್ದೇವೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಗ್ರಾಹಕ ಹಿತೇಶ್ ಪಟೇಲ್, ನಾನು ನಾಸಿಕ್ನಿಂದ ಇಲ್ಲಿಗೆ ಬಂದಿದ್ದೇನೆ. ನಾವು ನಿನ್ನೆ ರಾತ್ರಿ 10 ಗಂಟೆಯಿಂದಲೇ ಸಾಲಿನಲ್ಲಿ ನಿಂತಿದ್ದೇವೆ. ನನಗೆ ಬೆಳಿಗ್ಗೆ 8 ಗಂಟೆಯ ಮೊದಲ ಸ್ಲಾಟ್(ಸಮಯದ ಅವಕಾಶ) ಸಿಕ್ಕಿದೆ. ಇದರ ನಂತರ, ನಮಗೆ ನಮ್ಮ ಉತ್ಪನ್ನ ಸಿಗಲಿದೆ. ನಾನು ಪ್ರತಿ ವರ್ಷವೂ ನನ್ನ ಮೊಬೈಲ್ ಬದಲಾಯಿಸುತ್ತೇನೆ. ಸದ್ಯಕ್ಕೆ ನನ್ನ ಬಳಿ 17 ಪ್ರೊ ಮ್ಯಾಕ್ಸ್ ಇದೆ, ಮತ್ತು ಈಗ ನಾನು 18 ಪ್ರೊ ಮ್ಯಾಕ್ಸ್ ಪಡೆಯಲಿದ್ದೇನೆ” ಎಂದು ತಿಳಿಸಿದ್ದಾರೆ.
ಸಾಕೆಟ್ನ ‘ಸೆಲೆಕ್ಟ್ ಸಿಟಿವಾಕ್ ಮಾಲ್’ ನಲ್ಲಿರುವ ಆಪಲ್ ಸ್ಟೋರ್ ಹೊರಗೆ ಜನಸಂದಣಿ
ಅದೇ ರೀತಿಯಲ್ಲಿ, ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ನ ಬಹುನಿರೀಕ್ಷಿತ ಮಾರಾಟ ಆರಂಭವಾಗುವ ಮುನ್ನವೇ, ಸಾಕೆಟ್ನ ‘ಸೆಲೆಕ್ಟ್ ಸಿಟಿವಾಕ್ ಮಾಲ್’ನಲ್ಲಿರುವ ಆಪಲ್ ಸ್ಟೋರ್ ಹೊರಗೆ ಬೆಳಿಗ್ಗೆಯಿಂದಲೇ ಜನರ ಗುಂಪು ಸೇರಲು ಪ್ರಾರಂಭಿಸಿತು.
ಮುಂಬೈನಲ್ಲಿ ಐಫೋನ್ 18 ಪ್ರೊ ಮಾರಾಟವು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗುತ್ತಿದೆ. ಮಾರಾಟ ಆರಂಭವಾಗುವ ಮುನ್ನವೇ, ಮುಂಬೈನ ಬಿಕೆಸಿ(BKC) ಸ್ಟೋರ್ನ ಹೊರಗೆ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆಗಮಿಸಿದ್ದು, ಜನರು ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದ್ದಾರೆ.
ಜನಸಂದಣಿ ವ್ಯವಸ್ಥಿತವಾಗಿ ನಿರ್ವಹಿಸಲು ಆಪಲ್ ವ್ಯವಸ್ಥೆ
ಆದಾಗ್ಯೂ, ಈ ಬಾರಿ ಸಾಲು ಮತ್ತು ಜನಸಂದಣಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಆಪಲ್ ಈಗಾಗಲೇ ವ್ಯವಸ್ಥೆ ಮಾಡಿದೆ. ಗ್ರಾಹಕರಿಗೆ ಪ್ರೀ-ಬುಕಿಂಗ್ (ಮುಂಗಡ ಬುಕಿಂಗ್) ಸಮಯದಲ್ಲಿಯೇ ಕೋಡ್ ಮತ್ತು ಸ್ಲಾಟ್ ಬಗ್ಗೆ ಮಾಹಿತಿ ನೀಡಲಾಗಿತ್ತು. ಸ್ಟೋರ್ ನ ಹೊರಗೆ ಅನಿಯಂತ್ರಿತ ಜನಸಂದಣಿಯನ್ನು ತಪ್ಪಿಸಲು, ನಿಗದಿತ ವ್ಯವಸ್ಥೆಯ ಅಡಿಯಲ್ಲಿ ಬೆಳಿಗ್ಗೆ 7 ಮತ್ತು 9 ಗಂಟೆಯ ಸ್ಲಾಟ್ ಹೊಂದಿರುವ ಗ್ರಾಹಕರನ್ನು ಮೊದಲು ಒಳಗೆ ಕಳುಹಿಸಲಾಗುತ್ತಿದೆ.
ಆಪಲ್ ನ ಹಿರಿಯ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದು, ಗ್ರಾಹಕರ ಸಾಲನ್ನು ವ್ಯವಸ್ಥಿತಗೊಳಿಸುತ್ತಿರುವುದು ಕಂಡುಬಂದಿದೆ. ಸಾಲಿನ ಮುಂಭಾಗದಲ್ಲಿ ನಿಂತಿದ್ದ ಮಿಕೇಶ್ ಪಟೇಲ್, ತಾವು ಈಗಾಗಲೇ ಐಫೋನ್ 17 ಬಳಸುತ್ತಿದ್ದು, ಹೊಸ ತಂತ್ರಜ್ಞಾನದೊಂದಿಗೆ ತಮ್ಮ ಫೋನ್ ಅನ್ನು ಅಪ್ಗ್ರೇಡ್ ಮಾಡಲು ಐಫೋನ್ 18 ಪ್ರೊ ಪಡೆಯಲು ಬಂದಿರುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ, ತಮ್ಮ ಕುಟುಂಬದ ಸದಸ್ಯರಿಗಾಗಿ ಫೋನ್ ಗಳನ್ನು ಬುಕ್ ಮಾಡಿರುವ ಗ್ರಾಹಕರೂ ಇದ್ದಾರೆ. ತಮ್ಮ ತಂದೆಯ ಹುಟ್ಟುಹಬ್ಬದ ಉಡುಗೊರೆಯಾಗಿ ಐಫೋನ್ 18 ಪ್ರೊ(iPhone 18 Pro) ಅನ್ನು ಬುಕ್ ಮಾಡಿದ್ದ ಗ್ರಾಹಕರೊಬ್ಬರು, ಅದನ್ನು ಪಡೆದುಕೊಳ್ಳಲು ಇಂದು ಆಗಮಿಸಿದ್ದರು.
ಭಾರತದಲ್ಲಿ ಇಂದಿನಿಂದ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಲಭ್ಯ
ಅತ್ಯಾಧುನಿಕ ಶ್ರೇಣಿಯ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾದರಿಗಳು ಸೆಪ್ಟೆಂಬರ್ 18 ರಿಂದ ಭಾರತದಲ್ಲಿ ಲಭ್ಯವಾಗಲಿವೆ; ಇವುಗಳ ಆರಂಭಿಕ ಬೆಲೆ ಕ್ರಮವಾಗಿ ₹1,64,900 ಮತ್ತು ₹1,79,900 ಆಗಿದೆ. ಐಫೋನ್ ಪ್ರಿಯರು ಗಮನಿಸಬೇಕಾದ ವಿಷಯವೆಂದರೆ, ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿವೆ. ಅವುಗಳೆಂದರೆ ಕಪ್ಪು (black), ಬೆಳ್ಳಿ (silver), ಗ್ಲೇಸಿಯರ್ (glacier) ಮತ್ತು ಸಂಪೂರ್ಣ ಹೊಸದಾದ ಬರ್ಗಂಡಿ (burgundy).
“ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ 256GB, 512GB, 1TB ಮತ್ತು 2TB ಸಂಗ್ರಹಣಾ ಸಾಮರ್ಥ್ಯಗಳಲ್ಲಿ ಲಭ್ಯವಿರುತ್ತವೆ. ಬರ್ಗಂಡಿ, ಗ್ಲೇಸಿಯರ್, ಬೆಳ್ಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಐಫೋನ್ 18 ಪ್ರೊನ ಆರಂಭಿಕ ಬೆಲೆ ₹1,64,900 ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ನ ಆರಂಭಿಕ ಬೆಲೆ ₹1,79,900 ಆಗಿದೆ” ಎಂದು ಕಂಪನಿಯು ತಿಳಿಸಿದೆ.

