HomeIndiaಲಡಾಖ್ ಮುಡಿಗೆ ಮತ್ತೊಂದು ಗರಿ ; ಜಗತ್ತಿನ ಅತಿ ಎತ್ತರದ ಅವಳಿ ಪುಷ್ಪ ಕಣಿವೆ ಲೋಕಾರ್ಪಣೆ...

ಲಡಾಖ್ ಮುಡಿಗೆ ಮತ್ತೊಂದು ಗರಿ ; ಜಗತ್ತಿನ ಅತಿ ಎತ್ತರದ ಅವಳಿ ಪುಷ್ಪ ಕಣಿವೆ ಲೋಕಾರ್ಪಣೆ !

ಕೇಂದ್ರಾಡಳಿತ ಪ್ರದೇಶ ಲಡಾಖ್ ತನ್ನ ಕಿರೀಟಕ್ಕೆ ಮತ್ತೊಂದು ಜಾಗತಿಕ ಗರಿ ಮುಡಿಗೇರಿಸಿಕೊಂಡಿದೆ. ಲೇಹ್‌ನಲ್ಲಿ ಜಗತ್ತಿನಲ್ಲೇ ಅತ್ಯಂತ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾದ ಅವಳಿ ಪುಷ್ಪ ಕಣಿವೆಗಳು (Twin flower fields) ಗುರುವಾರ ಅಧಿಕೃತವಾಗಿ ಲೋಕಾರ್ಪಣೆಗೊಂಡಿವೆ. ವಾಣಿಜ್ಯ ಪುಷ್ಪ ಕೃಷಿಗೆ ಉತ್ತೇಜನ ನೀಡುವ ಮತ್ತು ಸ್ಥಳೀಯ ರೈತರಿಗೆ ಹೊಸ ಆರ್ಥಿಕ ಆದಾಯದ ಮೂಲಗಳನ್ನು ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 76 ನೇ ಜನ್ಮದಿನದ ಅಂಗವಾಗಿ, ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಚೋಗ್ಲಾಮ್‌ಸಾರ್ ಮತ್ತು ಸ್ಟಾಕ್ನಾ ಎಂಬಲ್ಲಿ ಈ ಅವಳಿ ಹೂವಿನ ತೋಟಗಳನ್ನು ಉದ್ಘಾಟಿಸಿದರು. ಸಮುದ್ರ ಮಟ್ಟದಿಂದ ಬರೋಬ್ಬರಿ 10,600 ಅಡಿ ಎತ್ತರದಲ್ಲಿರುವ ಈ ಎರಡು ತಾಣಗಳು ವಿಶ್ವದಲ್ಲೇ ಅತಿ ಎತ್ತರದ ಪುಷ್ಪ ಕಣಿವೆಗಳು ಎಂಬ ಹಿರಿಮೆಗೆ ಪಾತ್ರವಾಗಿವೆ. ಒಟ್ಟು 40 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಯೋಜನೆಯಲ್ಲಿ 24 ಲಕ್ಷ ಲಿಲಿಯಮ್ (Lilium) ಹಾಗೂ 1 ಲಕ್ಷ ಗ್ಲಾಡಿಯೋಲಸ್ (Gladiolus) ಸೇರಿದಂತೆ ಒಟ್ಟು 25 ಲಕ್ಷಕ್ಕೂ ಅಧಿಕ ಆಕರ್ಷಕ ಹೂವುಗಳು ನಳನಳಿಸುತ್ತಿವೆ.

ಅತ್ಯಂತ ಶೀತ ಹವಾಮಾನ ಹೊಂದಿರುವ ಲೇಹ್‌ನಂತಹ ಎತ್ತರದ ಪ್ರದೇಶದಲ್ಲಿ ಇಷ್ಟು ಬೃಹತ್ ಪ್ರಮಾಣದಲ್ಲಿ ಪುಷ್ಪ ಕೃಷಿ ಪ್ರಯೋಗ ನಡೆಸಿರುವುದು ಇದೇ ಮೊದಲು. ಚೋಗ್ಲಾಮ್‌ಸಾರ್‌ನಲ್ಲಿ ಕೇವಲ ಎರಡು ತಿಂಗಳ ದಾಖಲೆ ಅವಧಿಯಲ್ಲಿ ಈ ಹೂವಿನ ತೋಟವನ್ನು ಅಭಿವೃದ್ಧಿಪಡಿಸಲಾಗಿದೆ. ಜುಲೈ 16 ರಂದು ಸಸಿ ನೆಡುವ ಕಾರ್ಯ ಆರಂಭವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ಹೂವುಗಳು ಅರಳಲು ಪ್ರಾರಂಭಿಸಿವೆ. ಸ್ಟಾಕ್ನಾದಲ್ಲಿ ಆಗಸ್ಟ್‌ನಲ್ಲಿ ನೆಡಲಾದ ಸುಮಾರು 14 ಲಕ್ಷ ಲಿಲಿಯಮ್ ಹೂವುಗಳು ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಪ್ರಮಾಣದಲ್ಲಿ ಅರಳಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶ-ವಿದೇಶಗಳ ಮಾರುಕಟ್ಟೆಯಲ್ಲಿ ಲಿಲಿಯಮ್ ಹೂವುಗಳಿಗೆ ಅಪಾರ ಬೇಡಿಕೆಯಿದ್ದು, ಸಗಟು ಮಾರುಕಟ್ಟೆಯಲ್ಲಿ ಪ್ರತಿ ಹೂವಿನ ದಂಡಿಗೆ 60 ರಿಂದ 70 ರೂಪಾಯಿ ಬೆಲೆ ಸಿಗುತ್ತಿದೆ. ಲಡಾಖ್‌ನ ವಿಶಿಷ್ಟ ಹವಾಮಾನವನ್ನು ಸದುಪಯೋಗಪಡಿಸಿಕೊಂಡು ಸ್ವಸಹಾಯ ಸಂಘಗಳು ಮತ್ತು ಸಹಕಾರ ಸಂಘಗಳ ಮೂಲಕ ರೈತರಿಗೆ ಶಾಶ್ವತ ಆದಾಯ ಕಲ್ಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಮೊದಲ ವರ್ಷ ಕೃಷಿ ಇಲಾಖೆಯೇ ಇದನ್ನು ನಿರ್ವಹಿಸಿ, ಹೂವು ಅರಳುವ ಹಂತದಲ್ಲಿ ಸ್ಥಳೀಯ ಸಂಘಗಳಿಗೆ ಹಸ್ತಾಂತರಿಸಲಿದೆ. ಜೊತೆಗೆ ಮಾರುಕಟ್ಟೆ ಸಂಪರ್ಕವನ್ನೂ ಇಲಾಖೆಯೇ ಒದಗಿಸಲಿದೆ.

ಸ್ಥಳೀಯ ರೈತರಿಗೆ ಆಧುನಿಕ ಮತ್ತು ವೈಜ್ಞಾನಿಕ ಪುಷ್ಪ ಕೃಷಿಯ ತರಬೇತಿಯನ್ನೂ ನೀಡಲಾಗುತ್ತಿದೆ. ಕೇವಲ ಕೃಷಿ ಮಾತ್ರವಲ್ಲದೆ ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಆಕರ್ಷಣೆಯ ಕೇಂದ್ರವಾಗಿರುವ ಚೋಗ್ಲಾಮ್‌ಸಾರ್ ಹೂವಿನ ಉದ್ಯಾನವನ್ನು ಸೆಪ್ಟೆಂಬರ್ 18 ರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular