ಬೆಂಗಳೂರು: ₹2,000ಕ್ಕಿಂತ ಹೆಚ್ಚಿನ ಯುಪಿಐ ವ್ಯಾಪಾರ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯ ಪ್ರಗತಿಯಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ ಎಂದು ಡಿಸಿಎಂ ಡಾ..ಜಿ ಪರಮೇಶ್ವರ್ ತಿಳಿಸಿದ್ದಾರೆ.
ಯುಪಿಐ ಯಶಸ್ವಿಯಾಗಲು ಪ್ರಮುಖ ಕಾರಣವೆಂದರೆ ಅದರ ಬಳಕೆಯಲ್ಲಿನ ಸರಳ ವಿಧಾನ, ಸುಲಭ ಮತ್ತು ಉಚಿತ ಲಭ್ಯತೆ. ಸಾಮಾನ್ಯ ನಾಗರಿಕರಿಂದ ಹಿಡಿದು ಸಣ್ಣ ವ್ಯಾಪಾರಿಗಳವರೆಗೆ ಎಲ್ಲರನ್ನೂ ನಗದು ವಹಿವಾಟಿನಿಂದ ಡಿಜಿಟಲ್ ಆರ್ಥಿಕತೆಯತ್ತ ಕರೆದೊಯ್ಯುವಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ₹2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ವಹಿವಾಟುಗಳ ಮೇಲೆ ಶೇ.0.4ರ ವ್ಯಾಪಾರ ರಿಯಾಯಿತಿ ದರ (ಎಂಡಿಆರ್) ವಿಧಿಸುವ ಈಗಿನ ನಿರ್ಧಾರವು ಈ ಮೂಲಭೂತ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಹಕರಿಗೆ ನೇರವಾಗಿ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಪಾವತಿ ಸ್ವೀಕರಿಸುವುದಕ್ಕಾಗಿ ವ್ಯಾಪಾರಿಗೆ ಹೆಚ್ಚುವರಿ ವೆಚ್ಚವನ್ನು ವಿಧಿಸಿದಾಗ, ಅಂತಿಮವಾಗಿ ಆ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬುದೇ ನಿಜವಾದ ಪ್ರಶ್ನೆ. ಈ ಹೆಚ್ಚುವರಿ ವೆಚ್ಚವು ವಸ್ತುಗಳ ಬೆಲೆ ಅಥವಾ ಇತರ ಶುಲ್ಕಗಳ ರೂಪದಲ್ಲಿ ಸಾಮಾನ್ಯ ಗ್ರಾಹಕರ ಮೇಲೆಯೇ ಬೀಳುವ ಸಾಧ್ಯತೆಯ ಬಗ್ಗೆ ಸಹಜವಾಗಿಯೇ ಆತಂಕವಿದೆ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿರುವಂತೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಮೆರಿಕದ ಒತ್ತಡಕ್ಕೆ ಮಣಿದು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಮೆರಿಕದ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಮುಕ್ತಗೊಳಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ₹2,000ಕ್ಕಿಂತ ಹೆಚ್ಚಿನ ವಹಿವಾಟುಗಳು ಒಟ್ಟು ಯುಪಿಐ ವಹಿವಾಟುಗಳ ಸಂಖ್ಯೆಯಲ್ಲಿ ತುಲನಾತ್ಮಕವಾಗಿ ಸಣ್ಣ ಪಾಲು ಹೊಂದಿದ್ದರೂ, ಒಟ್ಟು ವಹಿವಾಟಿನ ಮೌಲ್ಯದಲ್ಲಿ ಅವು ಸುಮಾರು ಶೇ.65ರಷ್ಟು ಪಾಲು ಹೊಂದಿವೆ ಎಂದು ಅವರು ಹೇಳಿದ್ದಾರೆ. ಭಾರತದ ಡಿಜಿಟಲ್ ಪಾವತಿ ಆರ್ಥಿಕತೆಯ ಇಷ್ಟು ದೊಡ್ಡ ಭಾಗದ ಮೇಲೆ ಶುಲ್ಕ ವಿಧಿಸುವ ವ್ಯವಸ್ಥೆ ಜಾರಿಗೆ ಬರುತ್ತಿದ್ದರೆ, ಹೀಗೆ ನೀತಿಯಲ್ಲಿ ಬದಲಾವಣೆ ಮಾಡುವ ಅಗತ್ಯವೇನಿತ್ತು? ಮತ್ತು ಅಂತಿಮವಾಗಿ ಯಾರ ಹಿತಾಸಕ್ತಿಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ? ಎಂಬುದಕ್ಕೆ ಸರ್ಕಾರ ಉತ್ತರಿಸಲೇಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹೊಸ ವ್ಯವಸ್ಥೆಯಿಂದ ಲಾಭ ಪಡೆಯುವವರ ಬಗ್ಗೆಯೂ ಸೂಕ್ಷ್ಮವಾಗಿ ಪರಿಶೀಲನೆ ನಡೆಯಬೇಕಿದೆ. ಎಂಡಿಆರ್ ಅನ್ನು ವ್ಯಾಪಾರಿ ಪಾವತಿಸುತ್ತಾನೆ. ಆದರೆ ಬ್ಯಾಂಕ್‌ಗಳು, ಪಾವತಿ ಕಂಪನಿಗಳು ಮತ್ತು ಇತರ ಮಧ್ಯವರ್ತಿಗಳಿಗೆ ಹೊಸ ಆದಾಯದ ಮೂಲವೊಂದು ಸೃಷ್ಟಿಯಾಗುತ್ತದೆ. ಇದೇ ವೇಳೆ, ಗೂಗಲ್ ಪೇ ಮತ್ತು ವಾಲ್‌ಮಾರ್ಟ್ ಬೆಂಬಲಿತ ಫೋನ್‌ಪೇಗಳು ಭಾರತದ ಯುಪಿಐ ವ್ಯವಸ್ಥೆಯ ಬಹುಪಾಲು ವಹಿವಾಟುಗಳನ್ನು ನಿಯಂತ್ರಿಸುತ್ತಿವೆ. ಭಾರತದ ಕಡಿಮೆ ವೆಚ್ಚದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವಾಗಿ ನಿರ್ಮಿಸಲಾದ ವ್ಯವಸ್ಥೆಯನ್ನು ನಿಧಾನವಾಗಿ ದೊಡ್ಡ ಖಾಸಗಿ ಬ್ಯಾಂಕ್‌ಗಳು, ಹಣಕಾಸು ತಂತ್ರಜ್ಞಾನ ವೇದಿಕೆಗಳು ಮತ್ತು ಜಾಗತಿಕ ಕಾರ್ಪೊರೇಟ್ ದೈತ್ಯರಿಗೆ ಆದಾಯದ ಅವಕಾಶವಾಗಿ ಪರಿವರ್ತಿಸಬಾರದು. ಇದರ ಹೊರೆ ಭಾರತೀಯ ವ್ಯಾಪಾರಿಗಳ ಮೇಲೆ ಬೀಳುತ್ತಿದ್ದರೆ, ಕೆಲವು ದೊಡ್ಡ ಹಣಕಾಸು ಮತ್ತು ತಂತ್ರಜ್ಞಾನ ಕಂಪನಿಗಳು ಅದರಿಂದ ಲಾಭ ಪಡೆಯುವಂತಾಗುತ್ತದೆ ಎಂದು ಹೇಳಿದ್ದಾರೆ.
ಇದರಿಂದಾಗಿ ಯುಪಿಐ ಇನ್ನೂ ‘ಉಚಿತ’ವಾಗಿಯೇ ಉಳಿದಿದೆ ಎಂಬ ಸರ್ಕಾರದ ಹೇಳಿಕೆಯನ್ನು ಅಕ್ಷರಶಃ ಒಪ್ಪಿಕೊಳ್ಳುವುದು ಕಷ್ಟವಾಗುತ್ತಿದೆ. ವಹಿವಾಟು ಹಂತದಲ್ಲಿ ವಿಧಿಸುವ ಶುಲ್ಕವು ಎಲ್ಲಿಯೂ ಮಾಯವಾಗುವುದಿಲ್ಲ. ಅದು ವ್ಯಾಪಾರ ನಡೆಸುವ ವೆಚ್ಚದ ಒಂದು ಭಾಗವಾಗುತ್ತದೆ. ಅಂತಿಮವಾಗಿ ಆ ವೆಚ್ಚವು ಸಾಮಾನ್ಯ ಜನರು ಪಾವತಿಸುವ ವಸ್ತುಗಳ ಬೆಲೆಯಲ್ಲಿಯೂ ಪ್ರತಿಫಲಿಸಬಹುದು. ವಹಿವಾಟಿನ ಸರಪಳಿಯ ಒಂದು ಹಂತದಲ್ಲಿ ಹೊಸ ಶುಲ್ಕವನ್ನು ವಿಧಿಸಿ, ಗ್ರಾಹಕರಿಗೆ ಮಾತ್ರ ಉಚಿತ ಎಂದು ಹೇಳುವುದರಿಂದ ಈ ಮೂಲಭೂತ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮ ಡಿಜಿಟಲ್ ಆರ್ಥಿಕತೆಯ ಉದ್ದೇಶ ವ್ಯಾಪಾರ ನಡೆಸುವ ವೆಚ್ಚವನ್ನು ಕಡಿಮೆ ಮಾಡುವುದಾಗಿರಬೇಕು. ಹೊಸ ಹೊರೆಗಳನ್ನು ಸೃಷ್ಟಿಸುವುದಲ್ಲ. ತಂತ್ರಜ್ಞಾನವು ಸಾಮಾನ್ಯ ಜನರನ್ನು ಸಬಲಗೊಳಿಸಬೇಕು ಮತ್ತು ನಮ್ಮ ವ್ಯಾಪಾರಿಗಳನ್ನು ಬಲಪಡಿಸಬೇಕು. ಪ್ರತಿಯೊಂದು ಡಿಜಿಟಲ್ ವಹಿವಾಟನ್ನೂ ಮತ್ತೊಂದು ಶುಲ್ಕ ವಿಧಿಸುವ ಅವಕಾಶವನ್ನಾಗಿ ಪರಿವರ್ತಿಸಬಾರದು ಎಂದಿದ್ದಾರೆ.
ಭಾರತವು ವಿಶ್ವದಲ್ಲೇ ಅತ್ಯಂತ ಸಮಗ್ರ ಮತ್ತು ಸರ್ವರನ್ನೂ ಒಳಗೊಂಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುವ ಗುರಿ ಹೊಂದಬೇಕು. ಪ್ರತಿಯೊಬ್ಬ ಭಾರತೀಯನಿಗೂ ಕೈಗೆಟುಕುವ, ಸುಲಭವಾಗಿ ಲಭ್ಯವಾಗುವ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಡಿಸಿಎಂ ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.

