ಬಾಗಲಕೋಟೆ: ಕೆಪಿಎಸ್ ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಹಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೂ ಪಾಲು ಹೋಗಿದೆ. ಅದೇ ಹಣದಿಂದ ವಿಜಯೇಂದ್ರ ಪಾದಯಾತ್ರೆ ಮಾಡಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗುಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸರ್ಕಾರದ ವಿರುದ್ಧ ಬಳ್ಳಾರಿ ಚಲೋ ಬಿಜೆಪಿ ಪಾದಯಾತ್ರೆ ನಡೆಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದರು. ಕೆಪಿಎಸ್ ಸಿ ಹಗರಣದ ಹಣಲ್ಲಿ ವಿಜಯೇಂದ್ರಗೂ ಪಾಲು ಹೋಗಿದೆ. ಅದೇ ಹಣದಲ್ಲಿ ಬಳ್ಳಾರಿ ಪಾದಯಾತ್ರೆ ಮಾಡಿದ್ದಾರೆ ಎಂದರು.
ವಿಜಯೇಂದ್ರ ಪಾದಯಾತ್ರೆ ಮಾಡುವ ಅವಶ್ಯಕತೆ ಏನಿತ್ತು? ಪಾಪ ಬಿ.ನಾಗೇಂದ್ರ ಆಗಲೇ ರಾಜೀನಾಮೆ ಕೊಟ್ಟಿದ್ದರು. ಅವರು ರಾಜೀನಾಮೆ ಕೊಟ್ಟ ಬಳಿಕ ಪಾದಯಾತ್ರೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದರು.
ಬಿ.ವೈ.ವಿಜಯೇಂದ್ರ ಪಕ್ಷದಲ್ಲಿ ಝೀರೋ ಆಗಿದ್ದಾರೆ. ಹಾಗಾಗಿ ಅವರನ್ನು ಹೈಕಮಾಂಡ್ ಬದಲಿಸಲಿದೆ. ಹೈಕಮಾಂಡ್ ನಾಯಕರ ಗಮನಸೆಳೆಯಲು ವಿಜಯೇಂದ್ರ ಪಾದಯಾತ್ರೆ ನಡೆಸುತ್ತಿದ್ದಾರೆ. ಪಾದಯಾತ್ರೆಯಲ್ಲಿಯೂ ಅವರ ಫೋಟೋ ಬರಬೇಕು. ಹೊಸ ಬಟ್ಟೆ ಹಾಕಿ ಹೊಲದಲ್ಲಿ ನಾಟಿ ಮಾಡಿದ್ದಾರೆ. ಅಲ್ಲಿಯೂ ಫೋಟೋ ಬರಬೇಕು. ಒಂದೇ ಒಂದು ದಿನವಾದರೂ ವಿಜಯೇಂದ್ರಹೊಲಕ್ಕೆ ಹೋಗಿದ್ದಾರಾ? ಎಂದು ಪ್ರಶ್ನಿಸಿದರು. ಎಲ್ಲಾ ರಾಜಕೀಯ ನಾಟಕವಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ಇಡಿ ದಾಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಾಪ ಕಾರಣ. ಸಿದ್ದರಾಮಯ್ಯನವರನ್ನು ಕೆಳಗಿಳಿಸಿದರೆ ನಮಗೆ ಅಭ್ಯಂತರವಿಲ್ಲ ಎಂದು ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ ಹೇಳಿದ್ದರು. 36 ಶಾಸಕರ ಸಹಿ ಮಾಡಿಸಿಕೊಟ್ಟಿದ್ದೇ ಸತೀಶ್ ಜಾರಕಿಹೊಳಿ. ಸತೀಶ್ ಗೆ ಕಾಂಗ್ರೆಸ್ ನಲ್ಲೇ ದ್ವೇಷ ಇದೆ. ವಾಲ್ಮೀಕಿ ಸಮುದಾಯದಲ್ಲಿ ಒಳ್ಳೆ ಲೀಡರ್ ರೆಡಿ ಆಗ್ತಿದ್ದಾನೆ ಅಂತ ಹೀಗೆ ಮಾಡಿದ್ದಾರೆ ಎಂದು ಹೇಳಿದರು.
ನಿಯಮ ಉಲ್ಲಂಘಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ: 22 ಬಿಜೆಪಿ ನಾಯಕರ ವಿರುದ್ಧ FIR ದಾಖಲು
ಬಳ್ಳಾರಿ: ವಿಪಕ್ಷ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆ ವೇಳೆ ನಿಯಮ ಮೀರಿ ಪ್ರತಿಭಟನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ 22 ಬಿಜೆಪಿ ನಾಯಕರ ವಿರುದ್ಧ ಎಪ್ಐಆರ್ ದಾಖಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ತೆರವುಗೊಳಿಸಿದ್ದನ್ನು ಖಂಡಿಸಿ ಸೆಪ್ಟೆಂಬರ್ 9ರಂದು ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ರಸ್ತೆ ಸಂಚಾರ ತಡೆದು ಸಾರ್ವಜನಿಕರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 22 ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಮ್ಮರಚೇಡು ಗ್ರಾಮದಿಂದ ಬಳ್ಳಾರಿ ನಗರದವರೆಗೆ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆಯು ಸೆಪ್ಟೆಂಬರ್ 9 ರಂದು ಬಳ್ಳಾರಿ ನಗರವನ್ನು ತಲುಪಿ ಸಮಾರೋಪ ಗೊಂಡಿತ್ತು. ಪಾದಯಾತ್ರೆಯ ಮಾರ್ಗದುದ್ದಕ್ಕೂ ಪೂರ್ವಾನುಮತಿಯಿಲ್ಲದೆ ಬಿಜೆಪಿ ಬಾವುಟ ಮತ್ತು ಬ್ಯಾನರ್ಗಳನ್ನು ಅಳವಡಿಸಲಾಗಿತ್ತು. ಬಿಐಟಿಎಂ ಕಾಲೇಜುವರೆಗೆ ಮಾತ್ರ ಬಾವುಟ ಅಳವಡಿಕೆಗೆ ಅವಕಾಶ ನೀಡಿದ್ದ ಬಳ್ಳಾರಿ ಜಿಲ್ಲಾಧಿಕಾರಿಗಳು, ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸದಂತೆ ನಿಷೇಧಾಜ್ಞೆ ಹೊರಡಿಸಿದ್ದರು.
ಬಿಜೆಪಿ ಸಮಾರೋಪ ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿಯೇ ನಿಯಮ ಮೀರಿ ಅಳವಡಿಸಲಾಗಿದ್ದ ಬ್ಯಾನರ್ ಮತ್ತು ಬಾವುಟಗಳನ್ನು ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದರು. ಇದು ಬಿಜೆಪಿ ನಾಯಕರ ಮತ್ತು ಆಡಳಿತ ಯಂತ್ರದ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿತ್ತು.
ಪಾಲಿಕೆ ಸಿಬ್ಬಂದಿ ಬ್ಯಾನರ್ ತೆರವುಗೊಳಿಸಿದ್ದನ್ನು ಖಂಡಿಸಿ ಆಕ್ರೋಶಗೊಂಡ ಬಿಜೆಪಿ ನಾಯಕರು, ಸೆಪ್ಟೆಂಬರ್ 9 ರಂದು ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ರಸ್ತೆ ತಡೆದು ಧರಣಿ ನಡೆಸಿದ್ದರು. ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿ, ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಸೋಮಶೇಖರ್ ರೆಡ್ಡಿ, ಎಂಪಿ.ರೇಣುಕಾಚಾರ್ಯ ಸೇರಿ 22 ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

