ಬೆಂಗಳೂರು: ಮುಂದಿನ ದಿನಗಳಲ್ಲಿ ಸಾಲು ಸಾಲು ನೇಮಕಾತಿ ಪರೀಕ್ಷೆಗಳು ಇರುವ ಕಾರಣ, ಈ ನಿಟ್ಟಿನಲ್ಲಿ ಸಿದ್ದತೆ ನಡೆಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಜಿಲ್ಲಾ ಮಟ್ಟದಲ್ಲಿ ಕೆಇಎ ಮತ್ತು ಜಿಲ್ಲಾಡಳಿತದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಪರೀಕ್ಷಾ ಮಾಸ್ಟರ್ ತರಬೇತುದಾರರನ್ನು ನೇಮಿಸಿ, ತರಬೇತಿಯನ್ನೂ ನೀಡಿತು.
ಪರೀಕ್ಷಾ ಪ್ರಾಧಿಕಾರದಲ್ಲಿ ಸೋಮವಾರ ನಡೆದ ತರಬೇತುದಾರರ ಕಾರ್ಯಾಗಾರವನ್ನು KPSC ಕಾರ್ಯದರ್ಶಿ ಜ್ಯೋತಿ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸಲು ಉಪಯೋಗವಾಗುವ ಮಾರ್ಗದರ್ಶಿ ಕೈಪಿಡಿಯನ್ನು ಅವರು ಬಿಡುಗಡೆ ಮಾಡಿದರು.
ಕೆಇಎ ಕೋರಿಕೆ ಮೇರೆಗೆ, ಜಿಲ್ಲೆಗೆ ಇಬ್ಬರು ಹಿರಿಯ ಉಪನ್ಯಾಸಕರನ್ನು ಮಾಸ್ಟರ್ ತರಬೇತುದಾರರಾಗಿ ಎಲ್ಲ ಜಿಲ್ಲಾಧಿಕಾರಿಗಳು ನಿಯೋಜಿಸಿದ್ದು, ಅವರಿಗೆ ಇಡೀ ದಿನ ತರಬೇತಿ ನೀಡಲಾಯಿತು.
ನಂತರ ಜ್ಯೋತಿ ಅವರು ಮಾತನಾಡಿ, ‘ಇವತ್ತು ಪರೀಕ್ಷೆ ಬರೆಯುವ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲೆ ಇದ್ದು, ಅದಕ್ಕೆ ಪೂರಕವಾಗಿ ಮಾಸ್ಟರ್ ತರಬೇತುದಾರರು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.
‘ರಾಜ್ಯ ಸರ್ಕಾರ, 72 ಸಾವಿರ ಹುದ್ದೆಗಳ ನೇಮಕಾತಿಗೆ ತೀರ್ಮಾನ ಮಾಡಿದ್ದು, ಈ ನಿಟ್ಟಿನಲ್ಲಿ ಕೆಇಎ ಸಿಂಹಪಾಲು ಹುದ್ದೆಗಳ ನೇಮಕಾತಿಯನ್ನು ಮಾಡುತ್ತಿದೆ. ಹೀಗಾಗಿ ಇಲ್ಲಿ ತರಬೇತಿ ಪಡೆಯುವ ತರಬೇತುದಾರರು, ಯಾವುದೇ ಲೋಪ ಇಲ್ಲದೆ ಪರೀಕ್ಷೆಗಳನ್ನು ನಡೆಸುವ ಕೆಲಸ ಮಾಡಬೇಕು’ ಎಂದು ಹೇಳಿದರು.
KEA ED ಹೆಚ್.ಪ್ರಸನ್ನ ಮಾತನಾಡಿ, ‘ಪರೀಕ್ಷೆ ನಡೆಸುವುದು ಅತ್ಯಂತ ಸೂಕ್ಷ್ಮ ವಿಚಾರ. ಒಂದು ವರ್ಗ ಗಂಭೀರವಾಗಿ ಓದಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದರೆ ಮತ್ತೊಂದು ವರ್ಗ ಹೇಗಾದರು ಮಾಡಿ ನೇಮಕ ಆಗಬೇಕು ಎಂದು ಅಕ್ರಮ ಮಾರ್ಗಗಳನ್ನು ಹುಡುಕುತ್ತಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮಗೆ ವಹಿಸಿರುವ ಕೆಲಸವನ್ನು ಪ್ರಾಮಾಣಿಕವಾಗಿ, ಅಚ್ಚುಕಟ್ಟಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.
‘ಜಿಲ್ಲಾಧಿಕಾರಿಗಳೇ ಜಿಲ್ಲೆಗೆ ಇಬ್ಬರು ಹಿರಿಯ ಉಪನ್ಯಾಸಕರನ್ನು ಮಾಸ್ಟರ್ ತರಬೇತುದಾರರಾಗಿ ನಿಯೋಜಿಸಿದ್ದಾರೆ. ಒಂದು ರೀತಿ ಇವರು ಕೆಇಎ ರಾಯಭಾರಿಗಳು. ಪರೀಕ್ಷೆ ಪೂರ್ವ ಮತ್ತು ನಂತರದ ಕಾರ್ಯಗಳನ್ನು ಕೆಇಎ ಮಾಡುತ್ತದೆ. ಆದರೆ ಪರೀಕ್ಷೆ ಸಂದರ್ಭದ ಕೆಲಸಗಳನ್ನು ಅಚ್ಚುಕಟ್ಟಾಗಿ ಯಾವುದೇ ಗೊಂದಲ ಇಲ್ಲದೆ ನಿಭಾಯಿಸಲು ನಿಮ್ಮೆಲ್ಲರ ಸಹಕಾರ ಬೇಕಾಗುತ್ತದೆ. ಕಾಲಕಾಲಕ್ಕೆ ಕೆಇಎ ತೆಗೆದುಕೊಳ್ಳುವ ತೀರ್ಮಾನಗಳನ್ನು ತಮಗೆ ತಲುಪಿಸುವ ಕೆಲಸ ಮಾಡಲಾಗುವುದು. ನಂತರ ತರಬೇತುದಾರರು ಜಿಲ್ಲೆಯಲ್ಲಿನ ಇತರ ಸಿಬ್ಬಂದಿ ಜತೆಗೆ ಸಮನ್ವಯ ಸಾಧಿಸಿ, ಯಶಸ್ವಿಯಾಗಿ ಪರೀಕ್ಷೆಗಳನ್ನು ನಡೆಸಲು ಸಹಕರಿಸಬೇಕು’ ಎಂದು ಹೇಳಿದರು.
ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಸ್ಟರ್ ತರಬೇತುದಾರರಿಗೆ ಮಾಹಿತಿ ನೀಡಿದರು. ಹಿರಿಯ ಉಪನ್ಯಾಸಕರು ಹಲವು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ದೂರ ಮಾಡಿಕೊಂಡರು.
ಕೆಇಎ ಪರೀಕ್ಷಾ ಜಂಟಿ ನಿಯಂತ್ರಕ ಆರ್. ಮಂಜುನಾಥ ಅವರು ವಂದಿಸಿದರು.
#KEA Recruitment:
ಮುಂಬರುವ ನೇಮಕಾತಿ ಪರೀಕ್ಷೆಗಳನ್ನು ಮತ್ತಷ್ಟು ನ್ಯಾಯಸಮ್ಮತ ಮತ್ತು ಪರಿಣಾಮಕಾರಿಯಾಗಿ ನಡೆಸಲು #KEA ಸಿದ್ಧತೆ ನಡೆಸಿದೆ.
ಇದರ ಒಂದು ಭಾಗವೇ ಜಿಲ್ಲಾ ಪರೀಕ್ಷಾ ಮಾಸ್ಟರ್ ತರಬೇತುದಾರರ ಕಾರ್ಯಾಗಾರ.#KEA ಕಚೇರಿಯಲ್ಲಿ ಇಂದು ನಡೆದ ಕಾರ್ಯಾಗಾರವನ್ನು #KPSC ಕಾರ್ಯದರ್ಶಿ ಜ್ಯೋತಿ ಅವರು ಉದ್ಘಾಟಿಸಿ, ಮಾತನಾಡಿದರು.#KEA… pic.twitter.com/fThHUrtVtZ
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 31, 2026

