ಬೆಂಗಳೂರು: ಬಿಜೆಪಿ ಇರಬಾರದು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ನೆಹರು ತಾರಾಲಯದ ಬಳಿ ಮಾಧ್ಯಮಗಳಿಗೆ ಪ್ರತಿಕ್ರೊಯಿಸಿದ ಸಿಎಂ ಡಿ.ಕೆ.ಶಿವಕುಮಾರ್. ಕೆಪಿಎಸ್ ಸಿ ಹಗರಣದಲ್ಲಿ ಸರ್ಕಾರ ಭಾಗಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದು, ಮತ್ತೊಂದೆಡೆ ಅವರ ಮೈತ್ರಿ ನಾಯಕರೇ ಬಂಧನವಾಗುತ್ತಿದ್ದಾರೆ. ಕುಮಾರಸ್ವಾಮಿ ಅವರು ನಮ್ಮ ವಿರುದ್ಧ ಹೋರಾಟ ಮಾಡುತ್ತಿಲ್ಲ. ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅವರ ಕರ್ತವ್ಯ ಅವರು ಮಾಡಲಿ. ಅವರು ಏನು ಆರೋಪ ಮಾಡುತ್ತಾರೋ ಮಾಡಲಿ ಎಂದರು.
ಅಲ್ಲೋಲ ಕಲ್ಲೋಲವಾಗುವಂತಹ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ, ಬಹಳ ಸಂತೋಷ. ಅವರು ಏನು ಮಾಡುತ್ತಾರೆ ಮಾಡಲಿ ಎಂದರು.
ಬಿಜೆಪಿ ಪಾದಯಾತ್ರೆ ಬಗ್ಗೆ , ಅವರು ಪಾದಯಾತ್ರೆ ಮಾಡಲಿ, ಆನಂತರ ನಮ್ಮದು ಯಾವ ಯಾತ್ರೆ ನಡೆಯುತ್ತದೆ ಎಂದು ಹೇಳುವೆ. ನಾವು ರಾಜಕಾರಣಿಗಳಲ್ಲವೇ? ಅವರು ಶುರು ಮಾಡಲಿ. ನಾವು ಅವರಿಗೆ ಗೌರವ ಕೊಟ್ಟು ಅಧಿವೇಶನ ನಡೆಸಿದ್ದೆವು. ಯಾವುದೇ ವಿಚಾರ ಚರ್ಚೆ ಮಾಡಲಿಲ್ಲ. ಈಗ ಕಸ್ತೂರಿ ರಂಗನ್ ವರದಿ ವಿಚಾರವಾಗಿ, ರೈತರ ಹಿತ ವಿಚಾರವಾಗಿ ಚರ್ಚೆ ಮಾಡುವುದಿದೆ. ಅದಕ್ಕಾಗಿ ಶಾಸಕರ ಅಭಿಪ್ರಾಯ ಕೇಳಲಾಗುವುದು ಎಂದು ತಿಳಿಸಿದರು.
ಕೆಪಿಎಸ್ ಸಿ ಹಗರಣದ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಮಾಹಿತಿ ಪಡೆಯುತ್ತೇನೆ. ಬಿಜೆಪಿಯಲ್ಲಿ ಆಂತರಿಕ ಕಲಹ ನಡೆಯುತ್ತಿದೆ. ಕೆಪಿಎಸ್ ಸಿಗೆ ನೇಮಕ ಮಾಡಿದವರು ಯಾರು? ಸಂಪೂರ್ಣ ವರದಿ ಬರುವವರೆಗೂ ನಾನು ಸಂಪೂರ್ಣ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ.ಯಾರು ಏನೇನು ಮಾತನಾಡುತ್ತಾರೋ ಮಾತಾಡಲಿ. ಅವರಿಗೆ ಕಾಲವೇ ಉತ್ತರಿಸುತ್ತದೆ ಎಂದು ತಿಳಿಸಿದರು.
ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿದೆ. ಈ ಭೂಮಿ ಗ್ಯಾರಂಟಿ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರಕ್ಕಾಗಿ ತಮ್ಮ ಆಸ್ತಿಯನ್ನು ತ್ಯಾಗ ಮಾಡುವ ಎಲ್ಲರಿಗೂ ಇದು ಅನ್ವಯವಾಗಲಿದೆ. ಅವರ ಹೆಸರುಗಳನ್ನು ಶಾಶ್ವತವಾಗಿ ದಾಖಲಿಸಬೇಕು. ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಅಲ್ಲದೆ, ಅವರು ಹೊಂದಿರುವ ಭೂಮಿಯಲ್ಲಿಯೇ ಅವರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಬೇಕು. ಇದು ರಾಜ್ಯದ ಎಲ್ಲಾ ಭೂ ಮಾಲೀಕರಿಗೂ ಅನ್ವಯವಾಗಬೇಕು ಎಂದರು.
ಫಲಾನುಭವಿಗಳ ಭಾವಚಿತ್ರ ಸೇರಿದಂತೆ ಎಲ್ಲಾ ಅಗತ್ಯ ವಿವರಗಳನ್ನು ಒಳಗೊಂಡ ಸೂಕ್ತ ದಾಖಲೆಗಳನ್ನು ನೀಡಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ. ದಾಖಲೆಗಳು ಎಂದರೆ ಎಲ್ಲವೂ ಕಾನೂನುಬದ್ಧವಾಗಿ ಮಾನ್ಯವಾಗಿರಬೇಕು ಎಂಬುದು ನನ್ನ ಅರ್ಥ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತಿಸುವಾಗಲೂ ಕಾನೂನು ಬದ್ಧತೆ ಇರಬೇಕು. ದಾಖಲೆಗಳು ಕಾನೂನುಬದ್ಧವಾಗಿರಬೇಕು. ಬೋಗಸ್ ನೋಂದಣಿ ಇದ್ದರೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾನೂನಿನ ಚೌಕಟ್ಟಿನೊಳಗೆ ಅವರಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ನಾವು ವ್ಯವಸ್ಥೆ ಮಾಡಿದ್ದೇವೆ. ಏಕೆಂದರೆ ಭವಿಷ್ಯದಲ್ಲಿ ಅವರ ಆಸ್ತಿ ವರ್ಗಾವಣೆ ಮಾಡಬೇಕಾಗಬಹುದು, ಸಾಲ ಪಡೆಯಬೇಕಾಗಬಹುದು ಅಥವಾ ಕುಟುಂಬದ ಸದಸ್ಯರ ನಡುವೆ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಬಹುದು. ಇಂತಹ ಹಲವು ಸಾಧ್ಯತೆಗಳಿವೆ. ಸರ್ಕಾರವು ಅವರ ಹಕ್ಕುಗಳು ಮತ್ತು ಆಸ್ತಿಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಕೃಷ್ಣ ಬೈರೇಗೌಡ ಅವರು ಕಂದಾಯ ಸಚಿವರಾಗಿದ್ದಾಗ, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಆರಂಭವಾಗಿ ಈ ಸರ್ಕಾರ ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.

