ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ದಾಸ್ ನಿರ್ದೇಶನದ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಆರಂಭವಾಗಿವೆ. ಸಿನಿಮಾದ ವಿಭಿನ್ನ ನಿರೂಪಣೆಯನ್ನು ಕೆಲವರು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಚಿತ್ರದ ವಿಷಯ ಹಾಗೂ ಯಶ್ ಅವರನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡುತ್ತಿದ್ದಾರೆ. ಇದೀಗ ಈ ಎಲ್ಲಾ ಟೀಕೆಗಳಿಗೆ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದಾರೆ.
ಹಳೆಯ ಹೇಳಿಕೆ ಮುಂದಿಟ್ಟುಕೊಂಡು ಟ್ರೋಲ್:
ಈ ಹಿಂದೆ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, “ನನ್ನ ಕುಟುಂಬಕ್ಕೆ ಹಾಗೂ ಪ್ರೇಕ್ಷಕರಿಗೆ ಮುಜುಗರ ತರುವಂತಹ ಸಿನಿಮಾಗಳನ್ನು ನಾನು ಮಾಡುವುದಿಲ್ಲ” ಎಂದು ಹೇಳಿದ್ದರು. ಈ ಹಳೆಯ ಹೇಳಿಕೆಯನ್ನು ಇಟ್ಟುಕೊಂಡು, ಟಾಕ್ಸಿಕ್ ಸಿನಿಮಾದಲ್ಲಿ ವಯಸ್ಕರಿಗೆ ಸಂಬಂಧಿಸಿದ (Adult Content) ಅಂಶಗಳಿವೆ ಎಂದು ನೆಟಿಜನ್ನರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಎತ್ತಿದ್ದರು.
“ಅವರೆಲ್ಲ ಅಬ್ನಾರ್ಮಲ್ ಇರಬೇಕು”
ತಮ್ಮ ಮಗನ ವಿರುದ್ಧ ನಡೆಯುತ್ತಿರುವ ಟೀಕೆಗಳಿಗೆ ಹಾಗೂ ಟ್ರೋಲ್ಗಳಿಗೆ ನೇರವಾಗಿ ಉತ್ತರಿಸಿರುವ ಪುಷ್ಪಾ ಅರುಣ್ ಕುಮಾರ್, ಟ್ರೋಲರ್ಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ:
‘ದೊಡ್ಡವರಿಗಾಗಿ ಮಾಡಿದ ಸಿನಿಮಾ’: “ಚಿತ್ರತಂಡ ಮೊದಲಿನಿಂದಲೂ ‘ಟಾಕ್ಸಿಕ್’ ಎನ್ನುವುದು ದೊಡ್ಡವರಿಗಾಗಿ ಮಾಡಿದ ಸಿನಿಮಾ ಎಂದು ಸ್ಪಷ್ಟವಾಗಿ ಹೇಳುತ್ತಾ ಬಂದಿದೆ. ಹೀಗಿದ್ದರೂ ಮತ್ತೆ ಮತ್ತೆ ಅದನ್ನೇ ಕೇಳಿ ಟ್ರೋಲ್ ಮಾಡುತ್ತಿರುವವರಿಗೆ ತಲೆಯಲ್ಲಿ ವಿಷಯವೇ ಹೋಗುತ್ತಿಲ್ಲ ಎನಿಸುತ್ತದೆ” ಎಂದು ಹೇಳಿದ್ದಾರೆ.
ನೆಟಿಜನ್ನರಿಗೆ ಟಾಂಗ್: “ಉದ್ದೇಶಪೂರ್ವಕವಾಗಿ ಯಶ್ ಕಾಲೆಳೆಯುತ್ತಿರುವವರನ್ನು ನೋಡಿದರೆ ನನಗೆ ನಗು ಬರುತ್ತದೆ. ಉಚಿತವಾಗಿ ಟ್ರೋಲ್ ಮಾಡುವವರಿಗೆಲ್ಲ ಮೆಂಟಲ್ ಪ್ರಾಬ್ಲಮ್ ಇರಬಹುದು, ಅವರೆಲ್ಲ ಅಬ್ನಾರ್ಮಲ್ ಇರಬೇಕು. ಇಂತಹ ಮಾತುಗಳಿಗೆ ನಮ್ಮ ಕುಟುಂಬ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಕೇರ್ ಮಾಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.
ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ‘ಟಾಕ್ಸಿಕ್’ ಸಿನಿಮಾ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಕುರಿತಾದ ಚರ್ಚೆಗಳು ಮತ್ತು ವಾದ-ವಿವಾದಗಳು ಮುಂದುವರಿಯುತ್ತಲೇ ಇವೆ.

