ಕೊಪ್ಪಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು, ಕೃತ್ಯದ ಫೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೇ, ವಿಡಿಯೋ ವೈರಲ್ ಮಾಡಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಬಾಲಕಿಗೆ ಫೋಟೋ ತೋರಿಸಿ ಬೆದರಿಕೆ ಹಾಕಿ ತನ್ನೊಂದಿಗೆ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ. ಬಾಲಕಿಯ ದೂರಿನ ಪ್ರಕಾರ, ಕಳೆದ ಎರಡು ವರ್ಷಗಳಿಂದ ಫೋಟೋ ತೋರಿಸಿ ಬೆದರಿಕೆ ಹಾಕುತ್ತಾ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ.
ಬಾಲಕಿಯ ದೂರಿನ ಆಧಾರದ ಮೇಲೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೊಪ್ಪಳ ಎಸ್ ಪಿ ಡಾ.ರಾಮ್ ಎಲ್ ಅರಸಿದ್ದಿ, ಈ ಪ್ರಕರಣ ವರ್ಷದ ಹಿಂದೆ ನಡೆದಿರುವಂತಹದ್ದು, ನಮಗೆ ಆಗಸ್ಟ್ 8ರಂದು ಮಹಿಳಾ ಠಾಣೆಯಲ್ಲಿ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಅದಾದ ಬಳಿಕ ತನಿಖೆ ಕೈಗೊಂಡಾಗ ಅಪ್ರಾಪ್ತೆ ಶಾಲೆಗೆ ಹೋಗಬೇಕಾದರೆ ಅವಳನ್ನು ಇಬ್ಬರು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದು ಕಳೆದ ವರ್ಷ ಸೆಪ್ಟಂಬರ್ನಲ್ಲಿ ನಡೆದ ಘಟನೆ ಎಂದು ತಿಳಿಸಿದ್ದಾರೆ.
ಬಾಲಕಿಯ ಅನುಮತಿ ಇಲ್ಲದೆ ಫೋಟೋಗಳನ್ನು ಚಿತ್ರೀಕರಿಸಿ ಹರಿಬಿಟ್ಟಿರುವುದಕ್ಕೆ ಕೂಡ ಪ್ರಕರಣ ದಾಖಲಾಗಿದೆ. ಪೋಕ್ಸೋ ಮತ್ತು ಐಟಿ ಆ್ಯಕ್ಟ್ ಪ್ರಕರಣದಡಿ ಸುಮಾರು 7 ಜನರನ್ನು ಬಂಧಿಸಿದ್ದೇವೆ. ಆ ಏಳು ಜನ ಬಂಧಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂತ್ರಸ್ತೆ ಅಪ್ರಾಪ್ತೆಯಾಗಿರುವುದಕ್ಕೆ ಪೋಕ್ಸೋ, ರೇಪ್ ಮತ್ತೆ ಐಟಿ ಆ್ಯಕ್ಟ್ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದೇವೆ. ಪ್ರಕರಣದಲ್ಲಿ ಇನ್ನಷ್ಟು ಜನರ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

