ನೈಜೀರಿಯಾದ ಸೊಕೊಟೊ ರಾಜ್ಯದಲ್ಲಿ ಭೀಕರ ದುರಂತ ಸಂಭವಿಸಿದೆ. ನದಿಯಲ್ಲಿ ದೋಣಿಯೊಂದು ಮುಳುಗಿ 40ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಇದುವರೆಗೆ ರಕ್ಷಣಾ ತಂಡಗಳು 40ಕ್ಕೂ ಹೆಚ್ಚು ಮಕ್ಕಳ ಮೃತದೇಹಗಳನ್ನು ಹೊರತೆಗೆದಿವೆ. ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ನ್ಯಾಷನಲ್ ಇನ್ಲ್ಯಾಂಡ್ ವಾಟರ್ವೇಸ್ ಅಥಾರಿಟಿಯ ಏರಿಯಾ ಮ್ಯಾನೇಜರ್ ಅಬ್ದುಲ್ ಖಾದಿರ್ ಯೂಸುಫ್ ತಿಳಿಸಿದ್ದಾರೆ. ಈ ಕುರಿತು ಅವರು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್ಗೆ ಮಾಹಿತಿ ನೀಡಿದ್ದಾರೆ.
ಅಕ್ಕಿ ನಾಟಿ ಅಥವಾ ಕೊಯ್ಲು ಮಾಡಲು ಜನರು ದೋಣಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದೊಡ್ಡವರ ಜೊತೆಗೆ ಮಕ್ಕಳು ಕೂಡ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರಿಂದ ದೋಣಿಯಲ್ಲಿ ಭಾರಿ ಪ್ರಮಾಣದ ಜನದಟ್ಟಣೆ ಉಂಟಾಗಿತ್ತು. ಮಿತಿಮೀರಿದ ಭಾರದಿಂದ ದೋಣಿ ಒಂದು ಬದಿಗೆ ವಾಲಿ ಬಳಿಕ ಮುಳುಗಿದೆ ಎಂದು ಖಾದಿರ್ ಯೂಸುಫ್ ಹೇಳಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ದೋಣಿಯಲ್ಲಿ 70ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಸ್ಥಳೀಯ ನಿವಾಸಿ ನಸೀರ್ ಗೊರಾವು ತಿಳಿಸಿದ್ದಾರೆ. ಸ್ಥಳೀಯ ಮುಳುಗು ತಜ್ಞರು ಕೂಡ ರಕ್ಷಣಾ ಸಿಬ್ಬಂದಿಯೊಂದಿಗೆ ಶೋಧ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ. ದೋಣಿಯಲ್ಲಿ ಮಿತಿಮೀರಿದ ಜನರನ್ನು ಕರೆದೊಯ್ದಿದ್ದೇ ದುರಂತಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.
ನೈಜೀರಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ದೋಣಿ ಅಪಘಾತಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ರಸ್ತೆ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಅನೇಕರು ಜಲಮಾರ್ಗವನ್ನೇ ಸಂಚಾರಕ್ಕೆ ಅವಲಂಬಿಸಿದ್ದಾರೆ. ಆದರೆ ಇದೇ ಜಲಮಾರ್ಗಗಳಲ್ಲಿ ದೋಣಿಗಳು ಮುಳುಗಿ ಪದೇಪದೇ ಭೀಕರ ದುರಂತಗಳು ಸಂಭವಿಸುತ್ತಿವೆ.
ಈ ವರ್ಷದ ಜನವರಿಯಲ್ಲೂ ಇದೇ ರೀತಿಯ ದೋಣಿ ಅಪಘಾತ ಸಂಭವಿಸಿ 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 52 ಮಂದಿ ಪ್ರಯಾಣಿಸುತ್ತಿದ್ದ ಆ ದೋಣಿಯಲ್ಲಿದ್ದ ಉಳಿದವರನ್ನು ಸ್ಥಳೀಯರು ರಕ್ಷಿಸಿದ್ದರು.
ಕಳೆದ ವರ್ಷದ ನವೆಂಬರ್ನಲ್ಲಿಯೂ ದೋಣಿಯೊಂದು ಮುಳುಗಿ 27 ಮಂದಿ ಮೃತಪಟ್ಟಿದ್ದರು. 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ನಿರಂತರವಾಗಿ ನಡೆಯುತ್ತಿರುವ ಇಂತಹ ದುರಂತಗಳಿಂದ ನೈಜೀರಿಯಾದ ಜನರು ಜಲಮಾರ್ಗದ ಮೂಲಕ ಪ್ರಯಾಣಿಸಲು ಆತಂಕ ಪಡುವಂತಾಗಿದೆ.

