ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣದ ಬಳಿಕ ಹೋಮ-ಹವನದ ಮುಖಾಂತರ ಶುದ್ದೀಕರಿಸಿ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಿರುವುದನ್ನು ಖಂಡಿಸಿ ವಿಧಾನಪರಿಷತ್ ನಲ್ಲಿ ಮಂಡಿಸಿದ ಖಂಡನಾ ನಿರ್ಣಯ ಅಂಗೀಕಾರಗೊಂಡಿದೆ.
ಕಾಂಗ್ರೆಸ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್ ವಿಧಾನ ಪರಿಷತ್ನಲ್ಲಿ ಖಂಡನಾ ನಿರ್ಣಯವನ್ನು ಮಂಡಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಆ.8ರಂದು ಉತ್ತರಾಖಂಡ್ ನ ಹಲ್ದವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ನಿರ್ಗಮಿಸಿದ ಬಳಿಕ ಮನುವಾದಿಗಳು ಭಾಷಣ ಮಾಡಿದ ಸ್ಥಳವನ್ನ ಹೋಮ-ಹವನಗಳ ಮೂಲಕ ಶುದ್ದೀಕರಿಸಿ ಸಾರ್ವಜನಿವಾಗಿ ಅಸ್ಪೃಶ್ಯತೆ ಆಚರಿಸಿದ್ದರು. ಈ ಘಟನೆ ಖಂಡಿಸಿ ತನಿಖೆಗೆ ಆದೇಶಿಸಲಾಗಿದೆ. ಈ ಕುರಿತು ವಿಧಾನಪರಿಷತ್ನಲ್ಲಿ ಖಂಡನಾ ನಿರ್ಣಯ ಮಂಡಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು, ದಲಿತರನ್ನ ಹೊರಗಿಡುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ವಾಲ್ಮೀಕಿ ನಿಗಮದ ಬಗ್ಗೆ ಮಾತನಾಡುವ ಬಿಜೆಪಿಯು, ಸಾರ್ವಜನಿಕವಾಗಿ ಅಸ್ಪ್ಯಶ್ಯತೆ ಆಚರಣೆ ಮಾಡಿದೆ. ಯಾವ ನೈತಿಕತೆ ಇಟ್ಟುಕೊಂಡು ವಾಲ್ಮೀಕಿ ನಿಗಮದ ಬಗ್ಗೆ ಮಾತನಾಡುತ್ತಿದ್ದೀರಿ? ನಿಮಗೆ ನಾಚಿಕೆಯಾಗಬೇಕು ಎಂದು ಅಕ್ರೋಶ ಹೊರಹಾಕಿದರು.
ಉಭಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆಯೇ ಖಂಡನಾ ನಿರ್ಣಯವನ್ನ ಸಭಾಪತಿಗಳು ಅಂಗೀಕರಿಸಿದರು.

