ಬೆಂಗಳೂರು : ಮದುವೆಯು ಕೇವಲ ಆಡಂಬರಕ್ಕೆ ಸೀಮಿತವಾಗದೆ, ಶಾಶ್ವತವಾಗಿ ಉತ್ತಮ ಕೌಟುಂಬಿಕ ಜೀವನ ಕಟ್ಟಿಕೊಳ್ಳಲು ಬುನಾದಿಯಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷೀ ಚೌಧರಿ ಹೇಳಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಕಛೇರಿಯಲ್ಲಿ ಕರೆಯಲಾಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಕಲಹ ಹಾಗೂ ವಿಚ್ಛೇದನ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಸಹಯೋಗದಲ್ಲಿ “ತೆರೆ ಮೇರೆ ಸಪ್ನೆ – ಕೂಡಿ ಬಾಳೋಣ” ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಗೆ ಇಂದು ಚಾಲನೆ ನೀಡಲಾಗಿದ್ದು, ರಾಜ್ಯದ 175 ಸಾಂತ್ವನ ಕೇಂದ್ರಗಳಲ್ಲಿ ವಿವಾಹಪೂರ್ವ ಸಂವಹನ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದರು.
ವಿವಾಹಕ್ಕೂ ಮುನ್ನ ಯುವಜನರು ಹಾಗೂ ಭಾವಿ ದಂಪತಿಗಳಿಗೆ ಪರಸ್ಪರ ಅರಿವು, ಪರಿಣಾಮಕಾರಿ ಸಂವಹನ, ಭಿನ್ನಾಭಿಪ್ರಾಯಗಳ ಪರಿಹಾರ, ಭಾವನಾತ್ಮಕ ಸಿದ್ಧತೆ, ಆರ್ಥಿಕ ನಿರ್ವಹಣೆ, ಲಿಂಗ ಸಮಾನತೆ, ಪರಸ್ಪರ ಗೌರವ ಸೇರಿದಂತೆ ಕೌಟುಂಬಿಕ ಜೀವನಕ್ಕೆ ಅಗತ್ಯವಾದ ವಿವಿಧ ವಿಷಯಗಳ ಕುರಿತು ಸಮಾಲೋಚನೆ ನೀಡಲಾಗುವುದು. ವಿವಾಹಕ್ಕೂ ಮುನ್ನವೇ ಸೂಕ್ತ ಅರಿವು ಮೂಡಿಸಿ, ದಂಪತಿಗಳ ನಡುವೆ ಉತ್ತಮ ಸಂವಹನ ಬೆಳೆಸುವ ಮೂಲಕ ಕೌಟುಂಬಿಕ ಸಮಸ್ಯೆಗಳು ಹಾಗೂ ವಿಚ್ಛೇದನ ಪ್ರಕರಣಗಳನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯದ 175 ಸಾಂತ್ವನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಮಾಲೋಚಕರಿಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದ್ದು, ಪ್ರತಿ ಕೇಂದ್ರದಲ್ಲಿ ಸುಮಾರು ಐದು ಮಂದಿ ಸಮಾಲೋಚಕರಿಗೆ ವಿವಾಹಪೂರ್ವ ಸಂವಹನ ಹಾಗೂ ಸಮಾಲೋಚನಾ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡ ಬಳಿಕ ಆಯಾ ಸಾಂತ್ವನ ಕೇಂದ್ರಗಳ ಮೂಲಕ ವಿವಾಹಪೂರ್ವ ಸಮಾಲೋಚನೆ ಸೇವೆಗಳನ್ನು ಪರಿಣಾಮಕಾರಿಯಾಗಿ ಒದಗಿಸಲಾಗುವುದು ಎಂದರು.
ಯೋಜನೆಯ ಕುರಿತು ಹೆಚ್ಚಿನ ಜನರಿಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹ ಪ್ರಮುಖ ಪಾತ್ರ ವಹಿಸಲಿದ್ದಾರೆ, ಅಗತ್ಯವಿರುವವರಿಗೆ ಸಮಾಲೋಚನೆ ಹಾಗೂ ಮಾರ್ಗದರ್ಶನವನ್ನು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಸಹಾಯವಾಣಿ ವ್ಯವಸ್ಥೆಯನ್ನು ರೂಪಿಸುವ ಯೋಜನೆಯೂ ಇದ್ದು, ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

