ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಬಿಗ್ ಶಾಕ್ ಆಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWMA ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಇದರಿಂದಾಗಿ ಈಗಾಗಲೇ ಮಳೆಯಿಲ್ಲದೇ ನೀರಿನ ಅಭಾವ ಎದುರಿಸುತ್ತಿರುವ ಕರ್ನಾಟಕಕ್ಕೆ ಮತ್ತಷ್ಟು ಸಂಕಷ್ಟ ಎದುರಾದಂತಾಗಿದೆ.
ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ಕರ್ನಾಟಕದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಬರುತ್ತಿದ್ದು, ಈವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ತನ್ನ ವಾದದಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ CWMA ಆದೇಶವನ್ನು ಜಾರಿಗೊಳಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಕರ್ನಾಟಕದ ಪರವಾಗಿ, ಈಗಾಗಲೇ 3,500 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ತಿಳಿಸಲಾಗಿದೆ. CWMA ಆದೇಶವನ್ನು ಪಾಲಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವಾದಿಸಲಾಗಿದೆ. ಬಿಳಿಗುಂಡ್ಲು ಬಳಿ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ. 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಅಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರ ವಾದ ಮಂಡಿಸಲಾಗಿದೆ.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯ ಪರಿಸ್ಥಿತಿ ಅನಿಶ್ಚಿತವಾಗಿದ್ದು, ಈ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಸುವುದು ರಾಜ್ಯಕ್ಕೆ ಕಷ್ಟವಾಗುತ್ತಿದೆ. ಆದರೂ CWMA ಆದೇಶ ಪಾಲಿಸಲು ಕರ್ನಾಟಕ ಪ್ರಯತ್ನಿಸುತ್ತಿದೆ ಎಂದು ಕರ್ನಾಟಕ ಪರ ವಕೀಲರು ವಾದ ಮಂಡಿಸಿದ್ದಾರೆ.

