ವಾರಾಣಸಿ: ಏರ್ ಪೋರ್ಟ್ ನಲ್ಲಿ ಪ್ರಯಾಣಿಕರೊಬ್ಬರ ಬಳಿ ಇದ್ದ ಪಿಸ್ತೂಲ್ ನಿಂದ ಏಕಾಏಕಿ ಫೈರ್ ಆದ ಘಟನೆ ಉತ್ತರ ಪ್ರದೇಶದ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಉತ್ತರಪ್ರದೇಶದ ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಮುಂಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ (IX-1810) ಪ್ರಯಾಣಿಕರೊಬ್ಬರು ತಂದಿದ್ದ ಪಿಸ್ತೂಲು ಭದ್ರತಾ ತಪಾಸಣೆ ವೇಳೆ ಆಕಸ್ಮಿಕವಾಗಿ ಸಿಡಿದಿದೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ.
ಪರವಾನಗಿ ಪಡೆದ ಪಿಸ್ತೂಲ್ ಇದಾಗಿದ್ದು, ಘಟನೆಯಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಇಂದು ಬೆಳಗ್ಗೆ ಸುಮಾರು 9:30 ಗಂಟೆಗೆ ವಿಮಾನ ನಿಲ್ದಾಣದ ಭದ್ರತಾ ತಪಾಸಣಾ ವಿಭಾಗದಲ್ಲಿ ಈ ಘಟನೆ ನಡೆದಿದೆ.
ಅಜಂಗಢ ಜಿಲ್ಲೆಯ ನಿವಾಸಿ ಕಮಲೇಶ್ ರಾಯ್ ಎಂಬುವವರ ಬಳಿ ಇದ್ದ ಗನ್ ಫೈರ್ ಆಗಿದೆ. ಕಮಲೇಶ್ ತನ್ನ ಪತ್ನಿಯೊಂದಿಗೆ ವಿಮಾನ ಪ್ರಯಾಣಕ್ಕೆ ಸಿದ್ಧರಾಗಿದ್ದರು. ಅವರು ನಿಯಮದಂತೆ ತಮ್ಮ ಬಳಿ ಇರುವ ಲೈಸೆನ್ಸ್ಸ್ಡ್ ಬಂದೂಕಿನ ಬಗ್ಗೆ ತಿಳಿಸಿದ್ದರು. ಭದ್ರತಾ ಸಿಬ್ಬಂದಿ (AAICLAS) ಬಂದೂಕನ್ನು ತಪಾಸಣೆ ಮಾಡುತ್ತಿದ್ದಾಗ, ಅದು ಆಕಸ್ಮಿಕವಾಗಿ ಸಿಡಿದಿದೆ.
ಬಂದೂಕು ಸಿಡಿದ ಪರಿಣಾಮ ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಒಬ್ಬ ಮಹಿಳಾ ಸಿಬ್ಬಂದಿಯ ಕಾಲಿಗೆ ಮತ್ತು ಮತ್ತೊಬ್ಬ ಸಿಬ್ಬಂದಿಯ ಕೈಬೆರಳಿಗೆ ಗಾಯವಾಗಿದೆ. ಗಾಯಗೊಂಡ ಇಬ್ಬರನ್ನೂ ಕೂಡಲೇ ಹತ್ತಿರದ ನ್ಯೂ ಲಕ್ಷ್ಮಿ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಇಬ್ಬರ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯಸಂಭವಿಸಿಲ್ಲ.
ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಆಕಸ್ಮಿಕ ಘಟನೆಯಾಗಿದ್ದು, ಭದ್ರತಾ ಪ್ರೋಟೋಕಾಲ್‌ಗಳ ಅನುಸಾರ ಬಂದೂಕು ಹಸ್ತಾಂತರದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

