ಬೆಂಗಳೂರು: ಕರ್ತವ್ಯನಿರತ ಮಹಿಳಾ ಪಿಎಸ್ಐ ಓರ್ವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿ, ಬಾಡಿಶೇಮಿಂಗ್ ಮಾಡಿ ಅವಮಾನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಅತ್ಯಂತ ಕೀಳು ಪದಗಳಿಂದ ಬಾಡಿ ಶೇಮಿಂಗ್ ಮಾಡಿ ಅವಮಾನಿಸಿದ್ದಾರೆ. ಕೆ.ಆರ್. ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಂಚಾರಿ ಮಹಿಳಾ ಪಿಎಸ್ಐ ನಯಾನಾ ಮೇಲೆ ಹಲ್ಲೆ ನಡೆಸಿರುವ ನಾಲ್ವರು ದುಷ್ಕರ್ಮಿಗಳು, ಅವಾಚ್ಯವಾಗಿ ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಪ್ರಕರಣ ಸಂಬಂಧ ಹೇಮಂತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ಹರ್ಷಿತ್ ರೆಡ್ಡಿ ಹಾಗೂ ರಾಹುಲ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರಿನ ಭಟ್ಟರಹಳ್ಳಿ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಮಂಜುನಾಥ್ ಎಂಬುವವರೊಂದಿಗೆ ಆರೋಪಿಗಳು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡುತ್ತಿದ್ದರು. ಇದನ್ನು ಗಮನಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗಲಾಟೆ ಬಿಡಿಸಲು ಸಂಚಾರಿ ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ನಯನಾ, ಸ್ಥಳಕ್ಕೆ ಬಂದಿದ್ದಾರೆ.
ಮಹಿಳಾ ಅಧಿಕಾರಿಯಾಗಿ ಕರ್ತವ್ಯ ಪಾಲನೆಗೆ ಮುಂದಾದ ವೇಳೆ ಆರೋಪಿಗಳು ದರ್ಪ ಮೆರೆದಿದ್ದಾರೆ. ಘಟನೆ ವೇಳೆ ಆರೋಪಿಗಳು ಪಿಎಸ್ಐ ನಯನಾ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ‘ಎಮ್ಮೆ ತರ ಇದ್ದೀಯಾ, ಹೊಟ್ಟೆಗೇನು ತಿಂತೀಯಾ?’ ಎಂದು ಬಾಡಿ ಶೇಮಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ‘ಇವಳನ್ನ ಇವತ್ತೇ ಸಸ್ಪೆಂಡ್ ಮಾಡಿಸುತ್ತೇನೆ’ ಎಂದು ಆವಾಜ್ ಹಾಕಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ, ನೂರಾರು ಜನರ ಎದುರು ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯೊಂದಿಗೆ ಪುಂಡರು ಈ ರೀತಿ ವರ್ತಿಸಿದ್ದಾರೆ.
ಈ ಸಂಪೂರ್ಣ ಕೃತ್ಯವು ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಬಾಡಿವೋರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಕ್ಷ್ಯವನ್ನು ಆಧರಿಸಿ ನಾಲ್ವರು ಆರೋಪಿಗಳ ವಿರುದ್ಧ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

