ಶಿವಮೊಗ್ಗ: ಪೊಲೀಸರ ಸೋಗಿನಲ್ಲಿ ನಂಬಿಸಿ ಮಹಿಳೆಯೊಬ್ಬರ ಚಿನ್ನಾಭರಣ ದೋಚಿದ್ದ ಇಬ್ಬರನ್ನು ಬಂಧಿಸಲಾಗಿದೆ. ಭದ್ರಾವತಿಯ ಪೇಪರ್ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಪೊಲೀಸರೆಂದು ನಂಬಿಸಿದ ಆರೋಪಿಗಳು ಭದ್ರಾವತಿ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಮಹಿಳೆಯೊಬ್ಬರ ಆಭರಣಗಳನ್ನು ದೋಚಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಂಧ್ರಪ್ರದೇಶದ ಗುಂತಕಲ್ ನ ಸೈಯದ್ ಅಬ್ಬಾಸ್ ಅಲಿ ಮತ್ತು ಹುಸೈನ್ ಭಾಷಾ ಅವರನ್ನು ಶುಕ್ರವಾರ ಬಂಧಿಸಲಾಗಿದ್ದು, 4.35 ಲಕ್ಷ ರೂ. ಮೌಲ್ಯದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.
ಶುಕ್ರವಾರ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಬಂದ ಆರೋಪಿಗಳು ತಾವು ಪೊಲೀಸ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ. ಇಲ್ಲಿ ಸರಗಳ್ಳರ ಕಾಟವಿದೆ ಎಂದು ಹೇಳಿ ಚಿನ್ನದ ಸರ ಪಡೆದು ಪರಾರಿಯಾಗಿದ್ದಾರೆ. ಈ ಬಗ್ಗೆ ವಂಚನೆಗೊಳಗಾದ ಮಹಿಳೆ ದೂರು ದಾಖಲಿಸಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರು ಇರಾನಿ ಗ್ಯಾಂಗ್ ಗೆ ಸೇರಿದವರು ಎಂದು ಹೇಳಲಾಗಿದೆ.

