HomeKarnatakaರೈತರಿಗೆ ಗುಡ್ ನ್ಯೂಸ್: 90 ದಿನಗಳವರೆಗೆ ತುಂಗಭದ್ರಾ ಕಾಲುವೆಗಳಿಗೆ ನೀರು: ಇಲ್ಲಿದೆ ವೇಳಾಪಟ್ಟಿ

ರೈತರಿಗೆ ಗುಡ್ ನ್ಯೂಸ್: 90 ದಿನಗಳವರೆಗೆ ತುಂಗಭದ್ರಾ ಕಾಲುವೆಗಳಿಗೆ ನೀರು: ಇಲ್ಲಿದೆ ವೇಳಾಪಟ್ಟಿ

ಕೊಪ್ಪಳ: ‘ಎಲ್‌ನಿನೋ’ ಪರಿಣಾಮದಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಭಾಧ್ಯಕ್ಷರು, ಸಚಿವರು, ಶಾಸಕರು, ಸಂಸದರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಆಗಸ್ಟ್ 11ರಂದು ನಡೆದ ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಅಗತ್ಯಕ್ಕೆ ಅನುಗುಣವಾಗಿ ತುಂಗಭದ್ರಾ ಯೋಜನೆಯ ವಿವಿಧ ಕಾಲುವೆಗಳಿಗೆ ನೀರು ಹರಿಸಲು ವೇಳಾಪಟ್ಟಿ ನಿಗದಿಪಡಿಸಿ ನಿರ್ಧಾರ ಕೈಗೊಳ್ಳಲಾಗಿದೆ.

ಕಾಲುವೆಗಳಿಗೆ ನೀರು ಪೂರೈಕೆಯ ವಿವರ:

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಅಗಸ್ಟ್ 11 ರಿಂದ ನವೆಂಬರ್ 10 ರವರೆಗೆ ದಿನಕ್ಕೆ 4100 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನವೆಂಬರ್ 10 ರವರೆಗೆ ದಿನಕ್ಕೆ 1200 ಕ್ಯೂಸೆಕ್ ನಂತೆ ನೀರು ಪೂರೈಕೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಆ. 11 ರಿಂದ ನ. 10 ರವರೆಗೆ ದಿನಕ್ಕೆ 650 ಕ್ಯೂಸೆಕ್ ನಂತೆ ನೀರು ಬಿಡುಗಡೆ.

ರಾಯ ಬಸವಣ್ಣ ಕಾಲುವೆಗೆ 01.01.2026 ರಿಂದ ಡಿಸೆಂಬರ್ 10 ರವರೆಗೆ ಸರಾಸರಿ 180 ಕ್ಯೂಸೆಕ್ ನಂತೆ ನೀರು ಒದಗಿಸಲಾಗುವುದು.

ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನವೆಂಬರ್ 10 ರವರೆಗೆ ದಿನಕ್ಕೆ 25 ಕ್ಯೂಸೆಕ್ ನಂತೆ (ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಮಾತ್ರ) ನೀರು ಬಿಡಲಾಗುವುದು.

ನದಿ ಪೂರಕ (ಕೆರೆಗಳಿಗೆ) ಆ. 11 ರಿಂದ ಆ. 17 ರವರೆಗೆ ನೀರು ಒದಗಿಸಲಾಗುವುದು.

ಈ ಎಲ್ಲಾ ಕಾಲುವೆಗಳಲ್ಲಿ ನೀರಿನ ಲಭ್ಯತೆ ಇರುವವರೆಗೆ ಅಥವಾ ನಿಗದಿಪಡಿಸಿದ ದಿನಾಂಕದವರೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ. ಮುಂದೆ ಬರುವ ಒಳಹರಿವಿನ ವ್ಯತ್ಯಾಸಕ್ಕೆ (ಹೆಚ್ಚು ಅಥವಾ ಕಡಿಮೆ) ಅನುಗುಣವಾಗಿ, ಸೆಪ್ಟೆಂಬರ್ 10 ರಂದು ಮತ್ತೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯ

ತುಂಗಭದ್ರಾ ಜಲಾಶಯದಲ್ಲಿ ಸದ್ಯ 82 ಟಿಎಂಸಿ ನೀರು ಶೇಖರಣೆಯಾಗಿದ್ಧು, ಈ ಲಭ್ಯತೆ ಆಧರಿಸಿ ಕಾಲುವೆಗಳಿಗೆ 90 ದಿನಗಳ ಅವಧಿವರೆಗೆ ಮಾತ್ರ ನೀರು ಹರಿಸಲು ಮುನಿರಾಬಾದ್‌ನ ಕಾಡಾ ಟಿ.ಬಿ.ಪಿ. ಸಭಾಂಗಣದಲ್ಲಿ ಆಗಸ್ಟ್ 11ರಂದು ನಡೆದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸದ್ಯ ಈಗ ಜಲಾಶಯದಲ್ಲಿ 82 ಟಿಎಂಸಿ ನೀರು ಇದೆ. 120 ದಿನಗಳವರೆಗೆ ನೀರು ಹರಿಸಲು ಜಲಾಶಯದಲ್ಲಿ 16 ಟಿಎಂಸಿ ನೀರಿನ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇನ್ನು 16 ಟಿಎಂಸಿ ನೀರು ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕುಡಿಯುವ ನೀರಿಗಾಗಿ ಜಲಾಶಯದಲ್ಲಿ 10 ಟಿಎಂಸಿ ನೀರು ಇಟ್ಟುಕೊಳ್ಳಲೇಬೇಕಾಗುತ್ತದೆಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ರೈತರ ಬೇಡಿಕೆಯಂತೆ 120 ದಿನಗಳವರೆಗಾದರೂ ಸದ್ಯ ಕಾಲುವೆಗಳಿಗೆ ನೀರು ಹರಿಸುವುದು ತುಂಬಾ ಅಗತ್ಯವಿದೆ ಎಂದು ಸಚಿವರಾದ ಬಿ. ನಾಗೇಂದ್ರ ಹಾಗೂ ಶಾಸಕರಾದ ಜೆ.ಎನ್. ಗಣೇಶ ಮತ್ತು ಬಿ.ಎಂ. ನಾಗರಾಜ ಅವರು ಸಲಹೆ ಮಾಡಿದರು.

ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳ ಶಾಸಕರು ಸಹ ಕಾಲುವೆಗಳಿಗೆ ತುರ್ತಾಗಿ ನೀರು ಬಿಡಲು ಸಲಹೆ ಮಾಡಿದ್ದಾರೆ. ಕಾಲುವೆಗಳಿಗೆ ಸದ್ಯ ನೀರು ಹರಿಸಲೇಬೇಕು ಎಂದು ಬೆಳಗ್ಗೆ ರೈತ ಮುಖಂಡರು ಸಹ ಹಕ್ಕೋತ್ತಾಯ ಮಾಡಿದ್ದಾರೆ. ಎಲ್ಲರ ಸಲಹೆಯಂತೆ ನೀರಿನ ಲಭ್ಯತೆ ಆಧರಿಸಿ ಸದ್ಯ 90 ದಿನಗಳ ಅವಧಿವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸುವುದು ಸೂಕ್ತ ಎಂದು ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಲಾಯಿತು.

ಸೆಪ್ಟೆಂಬರ್ 11ಕ್ಕೆ ಪುನಃ ಸಭೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕಾಲುವೆಗೆ ನೀರು ಹರಿಸುವ ಸಂಬಂಧ ಬೆಳಗ್ಗೆ ರೈತರ ಸಲಹೆ ಪಡೆಯಲಾಗಿದೆ. ಬಳಿಕ ಈ ಭಾಗದ ಎಲ್ಲ ಜನ ಪ್ರತಿನಿಧಿಗಳ ಸಭೆ ನಡೆಸಿ ಅವರ ಸಲಹೆ ಪಡೆಯಲಾಗಿದೆ. ಎಲ್ಲರ ಸಲಹೆ ಪಡೆದುಕೊಂಡೇ ಸದ್ಯ 90 ದಿನಗಳವರೆಗೆ ಮಾತ್ರ ಕಾಲುವೆ ನೀರು ಹರಿಸಲು ನಿರ್ಣಯಿಸಲಾಗಿದೆ. ಸದ್ಯ ಜಲಾಶಯದಲ್ಲಿ ಇರುವ ನೀರಿನ ಲಭ್ಯತೆ ಆಧರಿಸಿಯೇ ಈಗ 90 ದಿನಗಳಿಗೆ ಮಾತ್ರ ನೀರು ಹರಿಸಲು ರೈತರಿಗೆ ಗ್ಯಾರಂಟಿ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ನೀರು ಹರಿಸುವುದನ್ನು  ಮಳೆ ಆಧರಿಸಿಯೇ ನಿರ್ಧರಿಸುತ್ತೇವೆ. ಈ ಬಗ್ಗೆ ಚರ್ಚಿಸಲು ಮುಂದಿನ ತಿಂಗಳು ಸೆಪ್ಟೆಂಬರ್ 11ಕ್ಕೆ ಪುನಃ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಬಿ. ನಾಗೇಂದ್ರ, ಕಾಡಾ ಅಧ್ಯಕ್ಷ ಹಸನಸಾಬ ನಬಿಸಾಬ ದೋಟಿಹಾಳ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಕವಿತಾ, ಜಿಲ್ಲಾ ‌ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಜಾಹ್ನವಿ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ, ಮುನಿರಾಬಾದನ ತುಂಗಭದ್ರಾ ಯೋಜನೆ ವೃತ್ತ ಅಧೀಕ್ಷಕ ಅಭಿಯಂತರರಾದ ಎಸ್.ಬಿ. ಮಲ್ಲಿಗವಾಡ, ಯರಮರಸನ ತುಂಗಭದ್ರಾ ಕಾಲುವೆ ನಿರ್ಮಾಣ ವೃತ್ತದ ಅಧೀಕ್ಷಕ ಅಭಿಯಂತರರಾದ ಸತ್ಯ ನಾರಾಯಾಣ ಶೆಟ್ಟಿ ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular