ಬೆಂಗಳೂರು: ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವ ಬೆನ್ನಲ್ಲೇ, ಮಂಡ್ಯ ಭಾಗದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ರೈತರು ಆಗ್ರಹಿಸಿದ್ದಾರೆ. ಈ ನಡುವೆ CWRC ಶಿಫಾರಸಿನ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯದ ರೈತರ ಹಿತರಕ್ಷಣೆ ಮಾಡಲಾಗುವುದು. ಜಲಾಶಯಗಳ ಒಳಹರಿವು ಹಾಗೂ ನೀರಿನ ಲಭ್ಯತೆಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ತಮಿಳುನಾಡಿಗೆ 12,000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂದಿದೆ. ನಮ್ಮ ಜಲಾಶಯಗಳ ಒಳಹರಿವು ಎಷ್ಟಿದೆ ಎಂಬುದನ್ನು ಸತತವಾಗಿ ಗಮನಿಸುತ್ತಿದ್ದೇನೆ. ಡ್ಯಾಮ್ನಲ್ಲಿರುವ ನೀರಿನ ಲಭ್ಯತೆಯನ್ನು ಇಟ್ಟುಕೊಂಡೇ ತೀರ್ಮಾನ ಮಾಡುತ್ತೇವೆ. ನೀರು ಬಿಡುವ ಆದೇಶದಿಂದ ರೈತರು ಆಕ್ರೋಶಗೊಳ್ಳುವ ಅಗತ್ಯವಿಲ್ಲ. ರೈತರು ತಾಳ್ಮೆಯಿಂದ ಹಾಗೂ ಸೌಹಾರ್ದತೆಯಿಂದ ಇರಿ. ನಮಗೆ ಅಧಿಕಾರ ಕೊಟ್ಟಿದ್ದೇ ನಿಮಗಾಗಿ ಸೇವೆ ಸಲ್ಲಿಸಲು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಮಾಡುವುದು ನಮಗೆ ಇಷ್ಟವಿಲ್ಲ. ಪ್ರಕೃತಿ ನಮ್ಮನ್ನು ಉಳಿಸುತ್ತದೆ, ನಾವು ನಮ್ಮ ರಾಜ್ಯದ ರೈತರನ್ನು ಬದುಕಿಸುತ್ತೇವೆ ಎಂದು ಹೇಳಿದರು.
ನೀರಾವರಿ ವಿಷಯದಲ್ಲಿ ನಾನು ಅತ್ಯಂತ ಪಾರದರ್ಶಕವಾಗಿ ನಡೆದುಕೊಳ್ಳುತ್ತೇನೆ. ಈ ವಿಷಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಕೋರ್ಟ್ ಆದೇಶವನ್ನು ಗೌರವಿಸುವುದರ ಜೊತೆಗೆ ನಮ್ಮ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ ಎಂದರು.
ನಾಳೆ ಹಿರಿಯ ಮಂತ್ರಿಗಳು, ಪಕ್ಷದ ನಾಯಕರು ಹಾಗೂ ಮರುದಿನ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಈ ವಿಷಯವನ್ನು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

