ಆಗಸ್ಟ್ 12ರಂದು ಆಚರಿಸಲಾಗುವ ಧಾರ್ಮಿಕ ಮಹತ್ವದ ‘ಭೀಮನ ಅಮಾವಾಸ್ಯೆ’ ಹಬ್ಬದ ಮೇಲೆಯೇ ಸೂರ್ಯಗ್ರಹಣದ ಕಾರ್ಮೋಡ ಕವಿದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಾರ್ವಜನಿಕರಲ್ಲಿ ಪೂಜಾ ಮುಹೂರ್ತ ಮತ್ತು ಆಚರಣೆಯ ಬಗ್ಗೆ ಗೊಂದಲ ಉಂಟಾಗಿದೆ. ಆದರೆ, ಈ ದಿನ ಸಂಭವಿಸುವ ಸೂರ್ಯಗ್ರಹಣವು ಭಾರತದಲ್ಲಿ ಎಲ್ಲೂ ಗೋಚರಿಸುವುದಿಲ್ಲ. ಹೀಗಾಗಿ ಯಾವುದೇ ರೀತಿಯ ಸೂತಕದ ಛಾಯೆ ಭಾರತಕ್ಕಿಲ್ಲ. ಧಾರ್ಮಿಕ ನಿಯಮಗಳ ಪ್ರಕಾರ, ವಿವಾಹಿತ ಸ್ತ್ರೀಯರು ಹಾಗೂ ಕನ್ಯೆಯರು ಯಾವುದೇ ಭಯ ಅಥವಾ ಗೊಂದಲವಿಲ್ಲದೆ ಜ್ಯೋತಿರ್ಭೀಮೇಶ್ವರ ವ್ರತವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಬಹುದಾಗಿದೆ.
ಸೂರ್ಯಗ್ರಹಣದ ಸಮಯ ಮತ್ತು ಮುಹೂರ್ತ ಸ್ಪಷ್ಟನೆ:
ಗ್ರಹಣದ ಸಮಯ: ಆಗಸ್ಟ್ 12ರ ರಾತ್ರಿ ೯:೦೪ ರಿಂದ ಆರಂಭವಾಗಿ, ಆಗಸ್ಟ್ 13ರ ಮುಂಜಾನೆ 4:25 ಕ್ಕೆ ಮುಕ್ತಾಯಗೊಳ್ಳಲಿದೆ.
ಭಾರತದಲ್ಲಿದೆಯಾ ಪ್ರಭಾವ?: ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಯಾವುದೇ ಧಾರ್ಮಿಕ ನಿಷೇಧ ಅಥವಾ ಸೂತಕದ ಕಾಲ ಅನ್ವಯಿಸುವುದಿಲ್ಲ. (ವಿದೇಶಗಳಲ್ಲಿ ವಾಸಿಸುವ ಭಾರತೀಯರು ಆಯಾ ದೇಶದ ಸಮಯಕ್ಕೆ ಅನುಗುಣವಾಗಿ ಗ್ರಹಣ ನಿಯಮಗಳನ್ನು ಪರಿಶೀಲಿಸಿಕೊಳ್ಳುವುದು ಒಳಿತು).
ಭೀಮನ ಅಮಾವಾಸ್ಯೆ ತಿಥಿ ಮತ್ತು ಪೂಜಾ ಮುಹೂರ್ತಗಳು:
ಅಮಾವಾಸ್ಯೆ ತಿಥಿ ಆರಂಭ: ಆಗಸ್ಟ್ 12, ಬುಧವಾರ ಮಧ್ಯರಾತ್ರಿ ೧:೫೨ ರಿಂದ
ಅಮಾವಾಸ್ಯೆ ತಿಥಿ ಮುಕ್ತಾಯ: ಆಗಸ್ಟ್ 12, ಬುಧವಾರ ರಾತ್ರಿ ೧೧:೦೬ ರವರೆಗೆ
ಪೂಜೆಗೆ ಶುಭ ಮುಹೂರ್ತಗಳು:
ಅತ್ಯುತ್ತಮ ಮುಹೂರ್ತ (ಬೆಳಿಗ್ಗೆ): ಮುಂಜಾನೆ 6;15 ರಿಂದ ಬೆಳಿಗ್ಗೆ ೯:೩೦ ರವರೆಗೆ
ಉತ್ತಮ ಮುಹೂರ್ತ (ಪೂರ್ವಾಹ್ನ): ಬೆಳಿಗ್ಗೆ 9;30 ರಿಂದ 11;30 ರವರೆಗೆ
ಸಂಜೆ ಮುಹೂರ್ತ: ಸಂಜೆ5:45 ರಿಂದ ರಾತ್ರಿ 7:15 ರವರೆಗೆ
ಪ್ರಾದೇಶಿಕ ಹೆಸರುಗಳು ಮತ್ತು ಆಚರಣೆಯ ಹಿನ್ನೆಲೆ:
ಸನಾತನ ಹಿಂದೂ ಸಂಪ್ರದಾಯದಲ್ಲಿ ಪತಿಯನ್ನು ಗೌರವಿಸಿ, ಆತನ ಆಯುಷ್ಯ ಹಾಗೂ ಆರೋಗ್ಯ ವೃದ್ಧಿಗಾಗಿ ಗಂಡನಿಗೆ ಪೂಜೆ ಸಲ್ಲಿಸುವ ಜ್ಯೋತಿರ್ಭೀಮೇಶ್ವರ ವ್ರತಕ್ಕೆ ಸುದೀರ್ಘ ಇತಿಹಾಸವಿದೆ. ಈ ಹಬ್ಬವನ್ನು ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ:
ಮೈಸೂರು – ಬೆಂಗಳೂರು ಭಾಗದಲ್ಲಿ: ಭೀಮನ ಅಮಾವಾಸ್ಯೆ / ಪತಿ ಸಂಜೀವಿನಿ ವ್ರತ
ಕರಾವಳಿ/ತುಳುನಾಡಿನಲ್ಲಿ: ಆಟಿ ಅಮಾವಾಸ್ಯೆ
ಉತ್ತರ ಕರ್ನಾಟಕದಲ್ಲಿ: ದಿವಸಿ ಅಮಾವಾಸ್ಯೆ / ಕೋಡಿ ಅಮಾವಾಸ್ಯೆ
ವ್ರತದ ಆಚರಣಾ ವಿಧಾನ ಹಾಗೂ ವಿಧಿ-ವಿಧಾನ:
ಪೂಜಾ ಆಚರಣೆ: ಮುಂಜಾನೆ ಬೇಗನೆ ಎದ್ದು ಮಂಗಲ ಸ್ನಾನ ಮಾಡಿ, ದೇವರ ಕೋಣೆಯಲ್ಲಿ ದೀಪ ಬೆಳಗಿಸಿ ಉಮಾ-ಮಹೇಶ್ವರರ (ಶಿವ-ಪಾರ್ವತಿ) ಪೂಜೆ ಮಾಡಲಾಗುತ್ತದೆ. ವಿವಾಹಿತ ಮಹಿಳೆಯರು ಪತಿಯ ಪಾದಪೂಜೆ ಮಾಡಿ, ಆಶೀರ್ವಾದ ಪಡೆಯುತ್ತಾರೆ. ಅವಿವಾಹಿತ ಕನ್ಯೆಯರು ಸದ್ಗುಣ ಸಂಪನ್ನನಾದ ಪತಿ ದೊರೆಯಲೆಂದು ಪ್ರಾರ್ಥಿಸಿ ವ್ರತ ಆಚರಿಸುತ್ತಾರೆ.
ಪೂರ್ವಜರಿಗೆ ಎಳ್ಳು-ನೀರು ಅರ್ಪಣೆ: ಈ ಪವಿತ್ರ ದಿನದಂದು ಬೆಳಗಿನ ಸ್ನಾನದ ನಂತರ ದಕ್ಷಿಣಾಭಿಮುಖವಾಗಿ ನಿಂತು, ನೀರಿನಲ್ಲಿ ಕಪ್ಪು ಎಳ್ಳನ್ನು ಬೆರೆಸಿ ಪೂರ್ವಜರ ಹೆಸರನ್ನು ಸ್ಮರಿಸುತ್ತಾ ತರ್ಪಣ ನೀಡುವುದು ಕುಟುಂಬಕ್ಕೆ ಶಾಂತಿ ತರುತ್ತದೆ.
ದಾನ ಧರ್ಮ: ಪೂಜೆಯ ನಂತರ ಬಡವರಿಗೆ, ಭಿಕ್ಷುಕರಿಗೆ ಊಟ ಹಾಕುವುದು ಹಾಗೂ ಅಕ್ಕಿ, ಬೇಳೆ, ಬಟ್ಟೆ, ದಕ್ಷಿಣೆಯನ್ನು ಅರ್ಹರಿಗೆ ದಾನ ಮಾಡುವುದರಿಂದ ಕುಟುಂಬಕ್ಕೆ ಶ್ರೇಯಸ್ಸು ಸಿಗಲಿದೆ ಎಂಬ ನಂಬಿಕೆಯಿದೆ.
ಜ್ಯೋತಿರ್ಭೀಮೇಶ್ವರ ವ್ರತವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಕೌಟುಂಬಿಕ ಬಂಧ ಮತ್ತು ದಾಂಪತ್ಯದ ವಿಶ್ವಾಸವನ್ನು ಬಲಪಡಿಸುವ ದಕ್ಷಿಣ ಭಾರತದ ಮಹತ್ವದ ಸಾಂಸ್ಕೃತಿಕ ಹಬ್ಬವಾಗಿದೆ.

