ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಟ್ರೆಕಿಂಗ್ ಗೆ ಹೋಗಿದ್ದ ಟೆಕ್ಕಿ ಯುವಕ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ಐದು ದಿನಗಳು ಕಳೆದರೂ ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಇಂದು ಕೂಡ ನೆಲಮಂಗಲ ಹಾಗೂ ಡಾಬಸ್ ಪೇಟೆ ಪೊಲೀಸರು ಅದ್ವೈತ್ ಗಾಗಿ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ. ಈನಡುವೆ ಪೊಲೀಸರ ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ.
ಅದ್ವೈತ್ ಉಪಾಧ್ಯಾಯ ಹೈಲಿ ಟ್ಯಾಲೆಂಟೆಡ್ ಹ್ಯಾಕರ್ ಆಗಿದ್ದ. ಅಲ್ಲದೇ ಆತನಿಗೆ ಹುಡುಗಿಯರ ಶೋಕಿ ಇತ್ತು. ಅದ್ವೈತ್ ಕೆಲ ತಿಂಗಳ ಹಿಂದೆ ಪ್ರಾಪ್ತಿ ಚೌಹಾಣ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ ಬೇರೊಂದು ಹುಡುಗಿಯ ಜೊತೆ ಚಾಟಿಂಗ್ ನಲ್ಲಿದ್ದ ಎಂಬುದು ಬಯಲಾಗಿದೆ.
ಶಿವಗಂಗೆ ಬೆಟ್ಟ ಹತ್ತುತ್ತಿದ್ದಾಗ ತಾನು ಟ್ರೆಕ್ಕಿಂಗ್ ನಲ್ಲಿದ್ದೇನೆ ಎಂಬ ನೆಪದಲ್ಲಿ ಪ್ರಾಪ್ತಿ ಚೌಹಾಣ್ ಗೆ ಫೋಟೊ ಕಳುಹಿಸಿದ್ದ. ಪೊಲೀಸರು ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ನಲ್ಲಿ ಬಹುತೇಕ ಶೋಧಕಾರ್ಯಾಚರಣೆ ಪೂರ್ಣಗೊಳಿಸಿದ್ದಾರೆ. ಆದರೆ ಎಲ್ಲಿಯೂ ಅದ್ವತ್ ಪತ್ತೆಯಾಗಿಲ್ಲ. ಆದಾಗ್ಯೂ ಇಂದು ಕೂಡ ಶೋಧಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕಳೆದ ತಿಂಗಳು ಶಿವಗಂಗೆ ಬೆಟ್ಟಕ್ಕೆ ತನ್ನ ಗರ್ಲ್ ಫ್ರೆಂಡ್ ಜೊತೆ ಬಂದಿದ್ದ. ಈ ವೇಳೆ ಬೆಟ್ಟವನ್ನು ಇಳಿಯುವಾಗ ಬೇರೊಂದು ಕಡಿದಾದ ದಾರಿಯಲ್ಲಿ ಇಳಿದು ಹೋಗುತ್ತಿದ್ದರು. ಈ ವೇಳೆ ಕುರಿಗಾಹಿಯೊಬ್ಬ ಅವರನ್ನು ತಡೆದು ಈ ಮಾರ್ಗದಲ್ಲಿ ಹೋಗುವಂತಿಲ್ಲ ಎಂದು ತಿಳಿಸಿದ್ದರು.
ಇದೀಗ ಅದ್ವೈತ್ ಲ್ಯಾಪ್ ಟಾಪ್ ನಲ್ಲಿ ಶಿವಗಂಗೆ ಬೆಟ್ಟ, ಶಾಂತಲಾ ಡ್ರಾಪ್ ಬಗ್ಗೆ ಚಾಟ್ ಜಿಪಿಟಿಯಲ್ಲಿ ಸರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಅದ್ವೈತ್ ಫೋನ್ ಸ್ವಿಚ್ ಆಫ್ ಆಗಿದ್ದರೂ ವಾಟ್ಸಪ್ ಕಾರ್ಯನಿರ್ವಹಿಸಿದೆ. ಅಲ್ಲದೇ ಆತ ಮೊಬೈಲ್ ಹಾಗೂ ಡ್ರೋನ್ ಕ್ಯಾಮರಾಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದಾನೆ. ಶಿವಗಂಗೆ ಬೆಟ್ಟದಲ್ಲಿಯೇ ಡ್ರೋನ್ ಕ್ಯಾಮರಾ ಬಿಟ್ಟು ತೆರಳಿದ್ದಾನೆ. ಆತ ಎರಡು ಮೊಬೈಲ್ ಗಳನ್ನು ಬಳಸುತ್ತಿದ್ದು, ಬಹುಶಃ ಒಂದು ಮೊಬೈಲ್ ಕಳುವಾಗಿರಬಹುದು ಎನ್ನಲಾಗಿದೆ.
ಅದ್ವೈತ್ ಉಪಾಧ್ಯಾಯ ಶಿವಗಂಗೆ ಬೆಟ್ಟಕ್ಕೆ ಬಂದು ಬೆಟ್ಟ ಇಳಿಯುವಾಗ ಬೇರೆ ದಾರಿ ಮೂಲಕ ಸಾಗಿರಬಹುದು. ಟ್ರೆಕ್ಕಿಂಗ್ ನೆಪದಲ್ಲಿ ಬಂದು ಶಿವಗಂಗೆ ಬೆಟ್ಟದಿಂದ ಬೇರೆ ದಾರಿಯಲ್ಲಿ ಎಸ್ಕೇಪ್ ಆಗಿರುವ ಸಾಧ್ಯತೆ ದಟ್ಟವಾಗಿದೆ.

