ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಚುರುಕುಗೊಳಿಸಿದೆ.
ಕಾರಾಗೃಹದಲ್ಲಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ತಂಡ ವಶಕ್ಕೆ ಪಡೆದುಕೊಂಡಿದೆ. ಆರೋಪಿಗಳಾದ ವೆಂಕಟೇಶ್ ಮತ್ತು ರಾಘವೇಂದ್ರನನ್ನು ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸದಾದ ವೆಂಕಟೇಶ್ ಮತ್ತು ರಾಘವೇಂದ್ರ ಅವರನ್ನು ಲಾಕಪ್ ಡೆತ್ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ. ಸಿಐಡಿ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆದಿದ್ದು, ಪ್ರಕರಣದ ಕುರಿತು ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕತೊಡಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಲಾಕ್ ಅಪ್ ಡೆತ್ ಗೆ ಕಾರಣವೇನು ಎನ್ನುವುದರ ಬಗ್ಗೆ ಸಿಐಡಿ ತನಿಖೆ ಕೈಗೊಂಡಿದೆ. ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಲಿದೆ ಮಾಹಿತಿ ಆಧಾರದ ಮೇಲೆ ಮುಂದಿನ ಕ್ರಮಕ್ಕೆ ಸಿಐಡಿ ಸಿದ್ದತೆ ಕೈಗೊಂಡಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 1 ರಂದು ಕೌಟುಂಬಿಕ ಕಲಹದ ವಿಚಾರಣೆಗೆ ಕರೆತರಲಾಗಿದ್ದ ಸಿ. ಖಲೀಲ್ ಉಲ್ಲಾ(38) ಎಂಬ ಕಟ್ಟಡ ಕಾರ್ಮಿಕ ಲಾಕಪ್ ನಲ್ಲಿ ಮೃತಪಟ್ಟಿದ್ದು, ಇದು ಪೊಲೀಸರ ಹಲ್ಲೆಯಿಂದ ಸಂಭವಿಸಿದ ಲಾಕಪ್ ಡೆತ್ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸರನ್ನು ಬಂಧಿಸಲಾಗಿದ್ದು, ತನಿಖೆಯನ್ನು ಸಿಐಡಿಗೆ(CID) ವಹಿಸಲಾಗಿದೆ.

