ಬೆಂಗಳೂರು ಮತ್ತು ಮುಂಬೈ ಮಹಾನಗರಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಕೇವಲ 16 ಗಂಟೆಗಳಲ್ಲಿ ಈ ಎರಡು ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಎರಡು ನೂತನ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ನೈಋತ್ಯ ರೈಲ್ವೆ ಅಧಿಕೃತವಾಗಿ ಪಡೆದುಕೊಂಡಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಮಾರ್ಗದರ್ಶನದಲ್ಲಿ ಬೆಂಗಳೂರಿನ ಬಿಇಎಂಎಲ್ (BEML) ತಯಾರಿಸಿರುವ 16 ಬೋಗಿಗಳ ಈ ರೈಲುಗಳು ಸದ್ಯದಲ್ಲೇ ಕಮಿಷನಿಂಗ್ ಪೂರ್ಣಗೊಳಿಸಿ ಹಳಿಗೆ ಇಳಿಯಲಿವೆ.
ಇತ್ತೀಚಿನವರೆಗೆ ಉದ್ಯಾನ್ ಎಕ್ಸ್‌ಪ್ರೆಸ್ ಮತ್ತು ಇತ್ತೀಚೆಗೆ ಆರಂಭವಾದ ಕೆಎಸ್‌ಆರ್ ಬೆಂಗಳೂರು-ಎಲ್‌ಟಿಟಿ ಮುಂಬೈ ಎಕ್ಸ್‌ಪ್ರೆಸ್ ರೈಲುಗಳು ಮಾತ್ರ ಈ ಮಾರ್ಗದಲ್ಲಿದ್ದು, ಪ್ರಯಾಣಕ್ಕೆ ಬರೋಬ್ಬರಿ 24 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಹೊಸ ವಂದೇ ಭಾರತ್ ಸ್ಲೀಪರ್ ರೈಲಿನಿಂದ ಪ್ರಯಾಣದ ಸಮಯ ಬರೋಬ್ಬರಿ 8 ಗಂಟೆಗಳಷ್ಟು ಉಳಿತಾಯವಾಗಲಿದೆ
ಯಾವ ಮಾರ್ಗದಲ್ಲಿ ಸಂಚಾರ?
ಹುಬ್ಬಳ್ಳಿ ಮಾರ್ಗವಾಗಿ ರೈಲು ಓಡಿಸಬೇಕೆಂಬ ಒತ್ತಾಯ ಕೇಳಿಬಂದಿತ್ತಾದರೂ, ಆ ಮಾರ್ಗವು 1216 ಕಿ.ಮೀ. ದೂರವಿದ್ದು, ಕೆಲವು ಭಾಗಗಳಲ್ಲಿ ಏಕಪಥ ಹಾಗೂ ವೇಗದ ಮಿತಿ ಹೊಂದಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ ಮತ್ತು ಕಲಬುರಗಿ (ಸೋಲಾಪುರ) ಮಾರ್ಗವನ್ನು ಆಯ್ದುಕೊಳ್ಳಲಾಗಿದೆ. ಈ ಮಾರ್ಗವು 1137 ಕಿ.ಮೀ. ದೂರ ಹೊಂದಿದ್ದು, ಸಂಪೂರ್ಣ ದ್ವಿಪಥ ಹಾಗೂ ವಿದ್ಯುದ್ದೀಕರಣಗೊಂಡಿದೆ. ಈ ಮಾರ್ಗದಲ್ಲಿ ರೈಲುಗಳು ಗಂಟೆಗೆ 130 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸಲು ಸೂಕ್ತವಾಗಿವೆ.
ಶೀಘ್ರವೇ ಪ್ರಾಯೋಗಿಕ ಸಂಚಾರ (Trial Run)ರೈಲ್ವೆ ಮಂಡಳಿಯಿಂದ ಅಂತಿಮ ವೇಳಾಪಟ್ಟಿ ಬಿಡುಗಡೆಯಾಗುವ ಮುನ್ನ ಆರ್‌ಡಿಎಸ್ಒ (RDSO) ನೇತೃತ್ವದಲ್ಲಿ ಅನುಮೋದಿತ ಮಾರ್ಗದಲ್ಲಿ ಶೀಘ್ರದಲ್ಲೇ ಟ್ರಯಲ್ ರನ್ ನಡೆಸಲಾಗುವುದು.
ನಿಲ್ದಾಣ: ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್) ಅಥವಾ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT ಬೈಯಪ್ಪನಹಳ್ಳಿ) ನಿಂದ ರೈಲು ಹೊರಡುವ ಸಾಧ್ಯತೆಯಿದೆ. ಸಮಯ: ಬೆಂಗಳೂರು ಮತ್ತು ಮುಂಬೈ ಎರಡೂ ಕಡೆಗಳಿಂದ ಸಂಜೆ ಅಥವಾ ರಾತ್ರಿ ವೇಳೆ ಹೊರಟು, ಮರುದಿನ ಬೆಳಿಗ್ಗೆ ಗಮ್ಯಸ್ಥಾನ ತಲುಪುವಂತೆ ವೇಳಾಪಟ್ಟಿ ಸಿದ್ಧಪಡಿಸುವ ನಿರೀಕ್ಷೆಯಿದೆ
ಬೋಗಿಗಳ ವಿನ್ಯಾಸ ಮತ್ತು ಅಂದಾಜು ಟಿಕೆಟ್ ದರ
ಈ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳಿರಲಿವೆ
11 – 3AC ಬೋಗಿಗಳು 4 – 2AC ಬೋಗಿಗಳು 1 – First AC ಬೋಗಿ
3AC ದರ್ಜೆಯ ಟಿಕೆಟ್ ದರ (ಊಟದ ವೆಚ್ಚವೂ ಸೇರಿ) ಅಂದಾಜು ₹3000 ಇರಬಹುದು ಎಂದು ಅಂದಾಜಿಸಲಾಗಿದೆ. ವಿಮಾನ ದರಗಳಿಗೆ ಹೋಲಿಸಿದರೆ ಇದು ಗಣನೀಯವಾಗಿ ಕಡಿಮೆಯಿರಲಿದ್ದು, ಉದ್ಯಮಿಗಳು ಹಾಗೂ ಸಾಮಾನ್ಯ ಪ್ರಯಾಣಿಕರಿಗೆ ಹೇಳಿಮಾಡಿಸಿದ ಅತ್ಯುತ್ತಮ ಸೇವೆಯಾಗಲಿದೆ.

