ಶಿವಮೊಗ್ಗ: ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುವುದನ್ನು ನೋಡುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ತಮ್ಮಡಿಹಳ್ಳಿಯಲ್ಲಿ ನಡೆದಿದೆ.
ಜೆ.ಕೆ. ವಿನಯ್(15) ಮೃತಪಟ್ಟ ವಿದ್ಯಾರ್ಥಿ. ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ವಿನಯ್ ಸೋಮವಾರ ಶಾಲೆಗೆ ಬಂದಿದ್ದು, ಮಧ್ಯಾಹ್ನ 3:30ರ ವೇಳೆಗೆ ಇತರೆ ವಿದ್ಯಾರ್ಥಿಗಳು ಚೆಸ್ ಆಡುವುದನ್ನು ನೋಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ.
ಕೂಡಲೇ ಶಿಕ್ಷಕರು ಮತ್ತು ಪೋಷಕರು ವಿನಯ್ ನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

