ರಾಂಚಿ: ಜಾರ್ಖಂಡ್ನ ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಜೊತೆ ಮಾತುಕತೆಗೆ ಸಿಧವಿರುವುದಾಗಿ ಜಾರ್ಖಂಡ್ ಸರ್ಕಾರ ಭರವಸೆ ನೀಡಿದ್ದರೂ ವಿದ್ಯಾರ್ಥಿಗಳ ಸಹನೆ ಕಟ್ಟೆಯೊಡೆದಿದ್ದು, ರಾಂಚಿಯಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದೆ. ಜಾರ್ಖಂಡ್ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ವಿದ್ಯಾರ್ಥಿಗಳು ಯತ್ನಿಸಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ವಿಧಾನಸೌಧದತ್ತ ಮುನ್ನುಗ್ಗುತ್ತಿದ್ದಂತೆ ಪೊಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿ ರಸ್ತೆ ಮಧ್ಯೆ ತದೆಯೊಡ್ಡಿದ್ದಾರೆ.
ಈ ವೇಳೆ ಉದ್ರಿಕ್ತ ವಿದ್ಯಾರ್ಥಿಗಳು ಬ್ಯಾರಿಕೇಡ್ ಗಳನ್ನು ತಳ್ಳಿ ಕೆಡವಿ ಮುನ್ನುಗ್ಗಿದ್ದಾರೆ. ಈ ವೇಳೆ ವಿದ್ಯಾರ್ಥಿ ನಾಯಕ ದೇವೇಂದ್ರ ಮಹತೋ ಆಂಬುಲೆನ್ಸ್ ಮೂಲಕವಾಗಿ ವಿಧಾನಸೌಧದತ್ತ ಮುನ್ನುಗ್ಗಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ತಡೆದಿದ್ದಾರೆ. ಮತ್ತೊಂದೆಡೆ ಸಾಗರೋಪಾದಿಯಲ್ಲಿ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳಿದ್ದಾರೆ. ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ನೂಕಾಟ ತಳ್ಳಾಟ ನಡೆದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಅದಾಗ್ಯೂ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಮತ್ತೊಂದೆಡೆ ರಾಜ್ಯ ಸರ್ಕಾರ ವಿದ್ಯಾರ್ಥಿ ಸಂಗಹ್ಟನೆಗಳೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದೆ. ವಿದ್ಯಾರ್ಥಿಗಳ ನಿಯೋಗ ಎರಡನೇ ಸುತ್ತಿನ ಮಾತುಕತೆಗೆ ಮುಂದಾಗಿದೆ. ಜೆಪಿಎಸ್ಸಿ ಮತ್ತು ಜೆಎಸ್ಎಸ್ಸಿ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆ ಚುರುಕುಗೊಳಿಸಲಾಗುವುದು, 90 ದಿನಗಳಲ್ಲಿ ತನಿಖೆ ಮುಗಿಸಿ ಇಡಿ ಪರಿಶೀಲನೆ ಇತ್ಯಾದಿ 7 ಪ್ರಮಖ ಭರವಸೆಗಳನ್ನು ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿದೆ.

